ಜಗಳೂರು, ಫೆ. 24 – ಮೈಕ್ರೋ ಫೈನಾನ್ಸ್ ಗಳ ಸಾಲ ವಸೂಲಾತಿ ದೌರ್ಜನ್ಯ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್) ಬಣದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು ಮಹಾತ್ಮಗಾಂಧಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಫೈನಾನ್ಸ್ ಗಳ ವಿರುದ್ದ ದಿಕ್ಕಾರ ಕೂಗುತ್ತಾ ತಾಲ್ಲೂಕು ಕಛೇರಿ ಮುಂಭಾಗ ಜಮಾಯಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳಾದ ಎಲ್ ಎನ್ ಟಿ, ಚೈತನ್ಯ, ಡಿಸಿಬಿ, ಧರ್ಮಸ್ಥಳ, ಎಸ್ ಕೆಎಸ್, ಬೇಲ್ ಸ್ಟಾರ್, ಗ್ರಾಮೀಣ ಕೂಟ, ನಬಾರ್ಡ್, ಮುತ್ತೂಟ್ ಸೇರಿದಂತೆ ಇನ್ನಿತರೆ ಖಾಸಗಿ ಫೈನಾನ್ಸ್ಗಳ ವಸೂಲಿಗಾರರು ರೈತರಿಂದ ಬಲವಂತವಾಗಿ ಹಣ ವಸೂಲಿ ಮಾಡುತ್ತಿರುವುದರಿಂದ ಮನ ನೊಂದು ರೈತರು ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದಾರೆ ಎಂದು ಸಂಘಟನೆ ಜಿಲ್ಲಾ ಕಾರ್ಯದರ್ಶಿ ಗೌಡಗೊಂಡನಹಳ್ಳಿ ಸತೀಶ್ ತಿಳಿಸಿದರು.
ಟ್ರ್ಯಾಕ್ಟರ್ ಗಳನ್ನು ಗೂಂಡಾಗಳನ್ನು ಬಿಟ್ಟು ಸೀಜ್ ಮಾಡಲಾಗುತ್ತಿದೆ.ಪ್ರಸಕ್ತ ಸಾಲಿನಲ್ಲಿ ಅತಿವೃಷ್ಠಿಯಿಂದ ರೈತ ಕಾರ್ಮಿಕರು, ಮಹಿಳೆಯರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಬದುಕು ದುಸ್ತರವಾಗಿದೆ. ಉದ್ಯೋಗ ಅರಸಿ ಗುಳೆ ಹೋಗುತ್ತಿದ್ದಾರೆ. ಈ ಮಧ್ಯೆ ಫೈನಾನ್ಸ್ ಗಳ ಸಾಲ ವಸೂಲಾತಿ ಕಿರುಕುಳಕ್ಕೆ ಕೂಡಲೇ ಕಡಿವಾಣ ಹಾಕಬೇಕು, ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಸಂಘಟನೆ ತಾಲ್ಲೂಕು ಅಧ್ಯಕ್ಷ ಚಿರಂಜೀವಿ ಸಿಎಂ ಹೊಳೆ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಾಜನಹಟ್ಟಿ ರಾಜು, ಪದಾಧಿಕಾರಿಗಳಾದ ಕಾನನಕಟ್ಟೆ ತಿಪ್ಪೇಸ್ವಾಮಿ, ಅಂಜಿನಪ್ಪ, ಅನಿಲ್ ಕುಮಾರ್, ಹುಸೇನ್ ಪೀರ್, ಬಸವರಾಜ್, ಮಲ್ಲೇಶ್, ವೀರೇಶ್, ಪರಶುರಾಮಪ್ಪ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.