ಇ-ಖಾತಾ ಅಭಿಯಾನಕ್ಕೆ ಶಾಸಕ ಹರೀಶ್ ಚಾಲನೆ

ಇ-ಖಾತಾ ಅಭಿಯಾನಕ್ಕೆ ಶಾಸಕ ಹರೀಶ್ ಚಾಲನೆ

ಹರಿಹರ, ಫೆ.21- ರಾಜ್ಯ ಸರ್ಕಾರ ಇ-ಖಾತಾ ಮಾಡಲು ಮುಂದಾಗಿರುವುದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಶಾಸಕ ಬಿ.ಪಿ. ಹರೀಶ್‌ ಹೇಳಿದರು.

ಇಲ್ಲಿನ ನಗರಸಭೆಯ ಸಭಾಂಗಣದಲ್ಲಿ ಶುಕ್ರವಾರ ಇ-ಖಾತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇ-ಖಾತಾ ಅಭಿಯಾನದ ಯಶಸ್ಸಿಗೆ ಜವಾಬ್ದಾರಿಯಿಂದ ಶ್ರಮಿಸಬೇಕು ಎಂದರು.

ಇ-ಆಸ್ತಿ ನೋಂದಣಿ ಮಾಡಲು ಅಧಿಕಾರಿಗಳು ಹಾಗೂ ಸಿಬ್ಬಂದಿ ವಿಳಂಬ ಧೋರಣೆ ಮಾಡಬಾರದು ಎಂದು ಸೂಚನೆ ನೀಡಿದರು.

ನಗರಸಭೆಯ ಆಡಳಿತ ಹದಗೆಟ್ಟಿದೆ. ಪೌರಾಯುಕ್ತರು ಈ ಬಗ್ಗೆ ಗಮನಹರಿಸಬೇಕು. ನಗರಸಭೆಯ ಸರ್ವ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಾಗರಿಕರಿಗೆ ಉತ್ತಮ ಸೇವೆ ನೀಡಬೇಕು ಎಂದು ಹೇಳಿದರು.

ತಾಲ್ಲೂಕಿನ ಎಲ್ಲ ಸಮಸ್ಯೆಗಳನ್ನು ಮಾ.3ರಂದು ನಡೆಯುವ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಜನರ ಹಿತ ಕಾಪಾಡುತ್ತೇನೆ.  ನಗರಸಭೆ ವ್ಯಾಪ್ತಿಯಲ್ಲಿ ಬಹಳ ವ್ಯಾಜ್ಯಗಳಿವೆ. ಆದ್ದರಿಂದ ಫೆ.27ರಂದು ಸಭೆ ನಡೆಸಿ, ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 41,077 ಆಸ್ತಿಗಳಿದ್ದು, ಅದರಲ್ಲಿ 16,489 ಆಸ್ತಿಗಳು ನೋಂದಣಿಯಾಗಿವೆ. 24,588 ಆಸ್ತಿಗಳು ಇ-ಖಾತಾ ಮಾಡಿಸಲು ಬಾಕಿ ಉಳಿದಿವೆ ಮತ್ತು 6,897 ಅನಧಿಕೃತ ಆಸ್ತಿಗಳಾಗಿವೆ ಎಂದು ಮಾಹಿತಿ ನೀಡಿದರು.

ಈ ವೇಳೆ  ನಗರಸಭೆ ಅಧ್ಯಕ್ಷರಾದ ಮಾರುತಿ ಬೇಡರ್‌, ಉಪಾಧ್ಯಕ್ಷ ಗುತ್ತೂರು ಜಂಬಣ್ಣ, ಸದಸ್ಯರಾದ ಶಂಕರ್ ಖಟಾವ್ಕರ್, ದಾದಾ ಖಲಂದರ್, ಪಿ.ಎನ್ ವಿರೂಪಾಕ್ಷಪ್ಪ, ಆರ್.ಸಿ‌ ಜಾವೇದ್, ಸವಿತಾ ಮರಿದೇವ, ಹನುಮಂತಪ್ಪ, ಬಾಬುಲಾಲ್, ಅಬ್ದುಲ್ ಅಲಿಂ ಇತರರಿದ್ದರು.

error: Content is protected !!