ಜಗಳೂರು ತಾಲ್ಲೂಕು ಭವಿಷ್ಯದಲ್ಲಿ ಅಡಿಕೆ ನಾಡಾಗಲಿ

ಜಗಳೂರು ತಾಲ್ಲೂಕು ಭವಿಷ್ಯದಲ್ಲಿ ಅಡಿಕೆ ನಾಡಾಗಲಿ

ಜಗಳೂರು ತಾಲ್ಲೂಕಿನಲ್ಲಿ ಕೆರೆಗಳು ಭರ್ತಿಯಾಗಿದ್ದು, ಬರದ ನಾಡಿನ ಹಣೆಪಟ್ಟಿ ಸಂಪೂರ್ಣ ಕಳಚಿ ಭವಿಷ್ಯದಲ್ಲಿ ಅಡಿಕೆ ನಾಡಾಗಿ ಪರಿವರ್ತನೆಗೊಂಡು ಕಂಗೊಳಿಸಲಿದೆ.

-ಎಸ್.ಎಸ್. ಮಲ್ಲಿಕಾರ್ಜುನ್, ಜಿಲ್ಲಾ ಉಸ್ತುವಾರಿ ಸಚಿವರು

ಜಗಳೂರು, ಫೆ.20- ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು. ಯಾವುದೇ ತಾಲ್ಲೂಕಿನವರಾಗಲೀ ಅಧಿಕಾರಿಗಳು ವಸತಿ ಶಾಲೆಗಳಲ್ಲಿ ಕಡ್ಡಾಯವಾಗಿ ಪ್ರವೇಶಾತಿ ನೀಡಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ನಿರ್ದೇಶಿಸಿದರು.

ತಾಲ್ಲೂಕಿನ ಕಾಮಗೇತನಹಳ್ಳಿ ಹೊಸಹಟ್ಟಿ ಬಳಿಯಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ಚಿಕ್ಕಬಂಟನಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಪಲ್ಲಾಗಟ್ಟೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಗಳ ಮೂರು ನೂತನ ಕಟ್ಟಡಗಳ ಲೋಕಾರ್ಪಣೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ 22 ಕೋಟಿ ಅನುದಾನದಲ್ಲಿ ವಸತಿ ಶಾಲೆಗಳ ಸುಸಜ್ಜಿತ ಕಟ್ಟಡಗಳ ಕಾಮಗಾರಿ ಪೂರ್ಣಗೊಂಡು ಇಂದು ಲೋಕಾರ್ಪಣೆಗೊಂಡಿವೆ. ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರಗತಿಗಾಗಿ ಸಾಕಷ್ಟು ಆದ್ಯತೆ ನೀಡಿ ವಸತಿ ಶಾಲೆಗಳನ್ನು ನಿರ್ಮಿಸಲಾಗಿದೆ. ಹಂತ-ಹಂತವಾಗಿ ಎಲ್ಲಾ ಜಾತಿ, ಜನಾಂಗಗಳ ವಸತಿ ಶಾಲೆಗಳ ಸ್ವಂತ ಕಟ್ಟಡಗಳ ನಿರ್ಮಾಣ, ಮೂಲಸೌಕರ್ಯ, ಶೈಕ್ಷಣಿಕ ಸೌಲಭ್ಯ ಒದಗಿಸಲಾಗುವುದು.   

ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳ  ಸದುಪಯೋಗ ಪಡೆದುಕೊಂಡು  ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಚಿವರು ಕಿವಿಮಾತು ಹೇಳಿದರು.

ಏಕಲವ್ಯ ವಸತಿ ಶಾಲೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ 70:30 ಅನುಪಾತದಲ್ಲಿ ಅನು ದಾನ ಬರಲಿದೆ. ಗುರುಸಿದ್ದಾಪುರ ಗ್ರಾಮದ ಬಳಿ 18 ಎಕರೆ ಸರ್ಕಾರಿ ಜಮೀನು ನಿಗದಿಯಾಗಿದ್ದು, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಸಹಕಾರದೊಂದಿಗೆ ಅನುದಾನ ಮಂಜೂರಾತಿಗೆ  ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಜಗಳೂರು ತಾಲ್ಲೂಕಿನಲ್ಲಿ ಕೆರೆಗಳು ಭರ್ತಿಯಾಗಿದ್ದು, ಬರದ ನಾಡಿನ ಹಣೆಪಟ್ಟಿ ಸಂಪೂರ್ಣ ಕಳಚಿ ಭವಿಷ್ಯದಲ್ಲಿ ಅಡಿಕೆ ನಾಡಾಗಿ ಪರಿವರ್ತನೆಗೊಂಡು ಕಂಗೊಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಬಿ.ದೇವೇಂದ್ರಪ್ಪ, ಬರುವ ಜೂನ್ 1 ರಂದು ಲೋಕಾರ್ಪಣೆ ಗೊಳ್ಳಬೇಕಿದ್ದ ನೂತನ ಕಟ್ಟಡಗಳು ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಿಂದ ವಿಳಂಬವಾಗಿದ್ದವು. ತಾತ್ಕಾಲಿಕ ವಾಗಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ವಾಗಲು ತರಗತಿ ಗಳನ್ನು ಆರಂಭಿಸಲಾಗಿತ್ತು. ಇಂದು ಅಧಿಕೃತವಾಗಿ ಲೋಕಾರ್ಪಣೆಗೊಂಡಿವೆ. ಬಾಡಿಗೆ ಕಟ್ಟಡಗಳಿಂದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿವೆ. ಪಟ್ಟಣದಲ್ಲಿ ಅಲ್ಪ ಸಂಖ್ಯಾತರ ಇಲಾಖೆ ವಸತಿ ಶಾಲೆ ಸ್ವಂತ ಕಟ್ಟಡವಿಲ್ಲದೇ ಬಾಡಿಗೆ ಕಟ್ಟಡದಲ್ಲಿದ್ದು, ಬಗ್ಗೇನಹಳ್ಳಿ ಬಳಿ ಸರ್ಕಾರಿ ಜಾಗದಲ್ಲಿ 16 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.

ಜಗಳೂರು ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಸಾರ್ವಜನಿಕ ಆಸ್ಪತ್ರೆ ನಿರ್ಮಾಣಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರು, ಬಜೆಟ್‌ನಲ್ಲಿ ಅನುದಾನ ಘೋಷಿಸುವ ಭರವಸೆ ನೀಡಿದ್ದಾರೆ. ಕೆಎಸ್ಆರ್‌ಟಿಸಿ ಬಸ್ ಡಿಪೋ ನಿರ್ಮಾಣಕ್ಕೆ ತಮ್ಮ ಆಡಳಿತಾವಧಿಯಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮನವಿ ಮಾಡಿದರು.

ಸಮಾರಂಭದಲ್ಲಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಬಿಸಿಎಂ ಇಲಾಖೆ ಜಿಲ್ಲಾ ಕಲ್ಯಾಣ ಅಧಿಕಾರಿ ಗಾಯತ್ರಿ, ಪ.ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನವೀನ್ ಕುಮಾರ್ ಮಠದ್, ತಾ.ಪಂ ಇಓ ಕೆಂಚಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಜಿ.ಪಂ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ, ಕೆಪಿಸಿಸಿ ಎಸ್ಟಿ  ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್, ದೊಣೆಹಳ್ಳಿ ಗ್ರಾ.ಪಂ ಅಧ್ಯಕ್ಷ ತಿಪ್ಪೇಸ್ವಾಮಿ, ಹಿಂದಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಗ್ರಾ.ಪಂ ಸದಸ್ಯ ಸಿದ್ದಲಿಂಗಪ್ಪ, ಪ್ರಾಂಶುಪಾಲರಾದ ಅಮರೇಶ್, ಮಹಾಂತೇಶ್ ಕಲ್ಲೂರು, ಮುಖಂಡರಾದ ಬಿ. ಮಹೇಶ್ವರಪ್ಪ, ಪಲ್ಲಾಗಟ್ಟೆ ಶೇಖರಪ್ಪ, ಸಾವಿತ್ರಮ್ಮ ಇದ್ದರು.

error: Content is protected !!