ಸರ್ಕಾರದ ನೀತಿಗೆ ಬದ್ಧವಾಗಿ ವಿದ್ಯುತ್ ಪೂರೈಕೆ: ಇಂಧನ ಸಚಿವ ಜಾರ್ಜ್
ದಾವಣಗೆರೆ, ಫೆ. 18- ಕೃಷಿಗೆ 7 ತಾಸು ತ್ರಿಫೇಜ್ ವಿದ್ಯುತ್ ಮತ್ತು ಗೃಹ ಬಳಕೆ ಹಾಗೂ ಕೈಗಾರಿಕೆಗೆ ದಿನದ 24 ಗಂಟೆಗಳೂ ವಿದ್ಯುತ್ ಪೂರೈಕೆ ಮಾಡುವ ಸರ್ಕಾರದ ನೀತಿಗೆ ಬದ್ದವಾಗಿ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂಧನ ಇಲಾಖೆ ಅಧಿಕಾರಿಗಳು ಹಾಗೂ ಶಾಸಕರೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಕುಸುಮ್-ಸಿ ಯೋಜನೆಯ ಮೂಲಕ ಮುಂದಿನ ಒಂದೂವರೆ ವರ್ಷದಲ್ಲಿ ಸೋಲಾರ್ನಿಂದ 3 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹೊಂದಲಾಗಿದೆ. ಈಗಾಗಲೇ ಕುಸುಮ್ ಯೋಜನೆಯಡಿ ಸಂಸ್ಥೆಗಳಿಗೆ ಕಾರ್ಯಾದೇಶ ನೀಡಿದ್ದು, ಸೋಲಾರ್ ಪ್ಯಾನಲ್ ಅಳವಡಿಕೆ, ವಿದ್ಯುತ್ ಉತ್ಪಾದನೆ ಹಂತ, ಭೂಮಿ ಸಮತಟ್ಟು ಮಾಡುವ ಕೆಲಸ ಪ್ರಗತಿಯಲ್ಲಿದ್ದು ಬರುವ ಏಪ್ರಿಲ್ನಲ್ಲಿ 300 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿ ಗ್ರಿಡ್ಗೆ ಕಳುಹಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಜ್ಯೋತಿ ಯೋಜನೆ ಎಲ್ಲಾ ವರ್ಗದ ಜನರಿಗೂ ಅನ್ವಯಿಸಲಿದ್ದು 200 ಯುನಿಟ್ ವರೆಗೆ ವಿದ್ಯುತ್ ಬಳಕೆಗೆ ಶೂನ್ಯ ಬಿಲ್ ನೀಡಲಾಗುತ್ತದೆ. ಇದನ್ನು ಅವರು ವರ್ಷದಲ್ಲಿ ಉಪಯೋಗಿಸುವ ಯುನಿಟ್ಗಳನ್ನಾಧರಿಸಿ ಹೆಚ್ಚುವರಿಯಾಗಿ ಶೇ 10 ರಷ್ಟು ಸೇರಿಸಿ ಬಳಕೆಯ ಯುನಿಟ್ ನಿಗದಿಯಾಗುತ್ತದೆ. ಆದರೆ 200 ಯುನಿಟ್ ನಂತರ 1 ಯುನಿಟ್ ಹೆಚ್ಚಾದರೂ ವಿದ್ಯುತ್ ದರದಂತೆ ಬಿಲ್ ಪಾವತಿಸಬೇಕಾಗುತ್ತದೆ ಎಂದರು.
ದಾವಣಗೆರೆ ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ ನೋಂದಣಿಯಾದ 433897 ಆರ್.ಆರ್.ಸಂಖ್ಯೆಗಳಿದ್ದು ವಿದ್ಯುತ್ ಸಂಪರ್ಕ ಪಡೆದ ಸ್ಥಾವರಗಳಲ್ಲಿ ಶೇ 88.93 ರಷ್ಟು ಗೃಹಜ್ಯೋತಿಯಲ್ಲಿವೆ. ಈ ಸ್ಥಾವರಗಳಿಗೆ 2023 ರ ಆಗಸ್ಟ್ ನಿಂದ 2024 ರ ಡಿಸೆಂಬರ್ ಅಂತ್ಯದವರೆಗೆ 309 ಕೋಟಿಯಷ್ಟು ಹಣವನ್ನು ಗ್ರಾಹಕರಿಗೆ ಸಬ್ಸಿಡಿ ನೀಡಿದ್ದು ಸರ್ಕಾರ ಇದನ್ನು ಭರಿಸಿದೆ ಎಂದರು.
ಶೇ.10ರಷ್ಟು ವಿದ್ಯುತ್ ಬೇಡಿಕೆ ಹೆಚ್ಚಳ
ಉತ್ತರ ಪ್ರದೇಶ, ಪಂಜಾಬ್ನಿಂದ ವಿದ್ಯುತ್ ಖರೀದಿ
ದಾವಣಗೆರೆ, ಫೆ. 18- ಕಳೆದ ವರ್ಷ ಬರಗಾಲ ಇದ್ದ ಕಾರಣ ರಾಜ್ಯದಲ್ಲಿ ಒಂದು ತಿಂಗಳು ವಿದ್ಯುತ್ ಕೊರತೆಯಾಗಿತ್ತು. ಉಳಿದ 11 ತಿಂಗಳು ಸಮರ್ಪಕವಾಗಿ ವಿದ್ಯುತ್ ಪೂರೈಸಲಾಗಿದೆ. ರಾಜ್ಯದಲ್ಲಿ ಈ ವರ್ಷ ಶೇ.10ರಷ್ಟು ಬೇಡಿಕೆ ಹೆಚ್ಚಾಗಿದೆ. ವಿದ್ಯುತ್ ಸಮಸ್ಯೆ ಇರುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ರಾಜ್ಯದಲ್ಲಿ ಪ್ರಸಕ್ತ ವರ್ಷ ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಪೂರೈಸಲು ಇಲಾಖೆ ಸನ್ನದ್ಧವಾಗಿದೆ. ವಿದ್ಯುತ್ ಕೊರತೆ ನೀಗಿಸಲು ಉತ್ತರಪ್ರದೇಶ ಹಾಗೂ ಪಂಜಾಬ್ಗಳಿಂದ ವಿನಿಮಯ ಯೋಜನೆಯಡಿ 19,500 ಮೆಗಾ ವ್ಯಾಟ್ ವಿದ್ಯುತ್ ಖರೀದಿಸಲಾಗುತ್ತಿದೆ ಎಂದರು.
ವಿದ್ಯುತ್ ಪಡೆದ ರಾಜ್ಯಗಳಿಗೆ ಜೂನ್ ಬಳಿಕ ಮರಳಿ ನೀಡಲಾಗುತ್ತದೆ. ಈ ಕುರಿತು ಹಲವು ಸುತ್ತಿನ ಚರ್ಚೆಗಳು ನಡೆದಿವೆ ಎಂದು ಮಾಹಿತಿ ನೀಡಿದರು. ವಿದ್ಯುತ್ ದರ ಏರಿಕೆಗೆ ಸಂಬಂಧಿಸಿ ದಂತೆ ಎಲ್ಲ ‘ಎಸ್ಕಾಂ’ಗಳು ಪ್ರತಿ ವರ್ಷ ಪ್ರಸ್ತಾವ ಸಲ್ಲಿಕೆ ಮಾಡುತ್ತವೆ. ಕೆಇಆರ್ಸಿ ಸಾರ್ವಜನಿಕ ಅಹವಾಲು ಆಲಿಸಿ ನಿರ್ಧಾರ ಕೈಗೊಳ್ಳುತ್ತದೆ. ಕಳೆದ ವರ್ಷ ವಿದ್ಯುತ್ ದರ ಏರಿಕೆ ಮಾಡಿಲ್ಲ. ಕೆಇಆರ್ಸಿ ಸೂಚನೆ ಮೇರೆಗೆ ಸರ್ಕಾರದ ನಿರ್ಧಾರ ಹೊರಬೀಳಲಿದೆ’ ಎಂದು ಹೇಳಿದರು.
ಉತ್ತಮ ಮಳೆಯಾಗಿರುವುದರಿಂದ ರೈತರು ಎರಡು, ಮೂರು ಬೆಳೆ ಬೆಳೆಯುತ್ತಿದ್ದು ವಿದ್ಯುತ್ ಬೇಡಿಕೆ 18500 ಮೆ.ವ್ಯಾ. ಇದೆ. ಸೋಲಾರ್ ಆಧಾರಿತ ಪಂಪ್ ಅಳವಡಿಸಿ ನೀರಾವರಿ ಮಾಡಿಕೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಯಾವುದೇ ವಿದ್ಯುತ್ ವಿತರಣಾ ಕಂಪನಿಗಳು ನಷ್ಟದಲ್ಲಿಲ್ಲ. ಆದರೆ, ಸರ್ಕಾರಿ ಕಚೇರಿ, ಪಂಚಾಯಿತಿಗಳಿಂದ ಬರಬೇಕಾದ ವಿದ್ಯುತ್ ಬಿಲ್ ಬಾಕಿ ಎಲ್ಲವೂ ಬಂದರೆ ಉತ್ತಮ ಲಾಭದತ್ತ ಮರಳಲಿವೆ ಎಂದು ಹೇಳಿದರು.
ಕುಸುಮ್ ಸಿ ಯೋಜನೆಯಡಿ 3000 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಗೆ ಕ್ರಮವಹಿಸಲಾಗುವುದು. ಮುಂದಿನ ಎರಡ್ಮೂರು ತಿಂಗಳಲ್ಲಿ ರಾಜ್ಯದ 60-70 ಕಡೆಗಳಲ್ಲಿ 200ಮೆ.ವ್ಯಾ. ವರೆಗಿನ ಉತ್ಪಾದನಾ ಘಟಕ ಮಾಡಲಾಗುತ್ತಿದೆ. ಈಗಾಗಲೇ ಶಿರಾ, ಹೊಸದುರ್ಗದಲ್ಲಿ ಆರಂಭ ಮಾಡಲಾಗಿದೆ ಎಂದು ತಿಳಿಸಿದರು.
3 ಸಾವಿರ ಲೈನ್ಮನ್ ನೇಮಕಾತಿ
ದಾವಣಗೆರೆ, ಫೆ. 18- ರಾಜ್ಯದಲ್ಲಿ ಖಾಲಿ ಇರುವ 3,000 ಸಾವಿರ ಲೈನ್ಮನ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಏಪ್ರಿಲ್ ಅಂತ್ಯದೊಳಗಾಗಿ ಪೂರ್ಣಗೊಳ್ಳಲಿದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
3 ಸಾವಿರ ಲೈನ್ಮನ್ ಹುದ್ದೆಗಳಿಗೆ 3 ಲಕ್ಷ ಅರ್ಜಿಗಳು ಬಂದಿವೆ. ಇವುಗಳಲ್ಲಿ
1 ಲಕ್ಷ ಅರ್ಹ ಅರ್ಜಿಗಳನ್ನು ಪರಿಗಣಿಸಲಾಗಿದೆ. ಅರ್ಜಿದಾರರ ಮೆರಿಟ್ ಮತ್ತು ದೈಹಿಕ ಪರೀಕ್ಷೆಗಳ ಮೇಲೆ ಪಾರದರ್ಶಕವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದರು.
ಮಧ್ಯವರ್ತಿಗಳು ಕೆಲಸ ಕೊಡಿಸುವುದಾಗಿ ಹಣ ಕೇಳಿದರೆ ಯಾವ ಕಾರಣಕ್ಕೂ ನೀಡಬಾರದು. ಇಲ್ಲಿ ಅರ್ಹತೆ ಇದ್ದವರಿಗೆ ಕೆಲಸ ತಾನಾಗಿಯೇ ಸಿಗುತ್ತದೆ. ಯಾರಾದರೂ ಹಣ ಕೇಳಿದರೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ವಿದ್ಯುತ್ ಬಳಕೆ ಹೆಚ್ಚಾದಂತೆ ಆರ್ಥಿಕ ಸ್ಥಿತಿ ಸುಧಾರಣೆ
ವಿದ್ಯುತ್ ಬಳಕೆ ಹೆಚ್ಚಾದಂತೆ ರಾಜ್ಯದ ಆರ್ಥಿಕ ಸ್ಥಿತಿಯೂ ಸುಧಾರಣೆಯಾಗುತ್ತದೆ. ದುರಾದೃಷ್ಟವಶಾತ್ ಜಿಎಸ್ಟಿ ಬಂದ ಮೇಲೆ ಆ ಆದಾಯ ರಾಜ್ಯಕ್ಕೆ ಸಿಗುತ್ತಿಲ್ಲ ಎಂದು ಸಚಿವ ಜಾರ್ಜ್ ಹೇಳಿದರು.
ನಾವು ನಾಲ್ಕು ಲಕ್ಷ ಕೋಟಿ ಜಿಎಸ್ಟಿ ಕಟ್ಟಿದರೆ, ಕೇಂದ್ರದಿಂದ ಬರೋದು 60,000 ಕೋಟಿ ಮಾತ್ರ. ಇದರಿಂದಲೂ ನಮಗೆ ತೊಂದರೆಯಾಗಿದೆ. ಇದನ್ನೇ ಮುಖ್ಯಮಂತ್ರಿಯವರೂ ಸಹ ನಮ್ಮ ಪಾಲು ನಮಗೆ ಸರಿಯಾಗಿ ಕೊಡಬೇಕು ಎಂದು ಹೇಳಿದ್ದಾರೆ. ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಒಮ್ಮೇಲೆ ಕೊಂದರೆ ಮುಂದೆ ಮೊಟ್ಟೆಯೇ ಸಿಗಲ್ಲ. ಇದನ್ನು ಕೇಂದ್ರ ಅರ್ಥ ಮಾಡಿಕೊಳ್ಳಬೇಕು ಎಂದರು.
ಪಂಪ್ಸೆಟ್ಗಳಿಗೆ ಶೀಘ್ರ ಸಂಪರ್ಕಕ್ಕೆ ಕ್ರಮ
ಕೃಷಿ ಪಂಪ್ಸೆಟ್ಗಳಿಗೆ 2004 ರಿಂದಲೂ ಅಕ್ರಮ-ಸಕ್ರಮ ಎಂಬ ಕಾರ್ಯ ಕ್ರಮದಡಿ ಅನಧಿಕೃತ ಸಂಪರ್ಕವನ್ನು ಸಕ್ರಮ ಮಾಡುತ್ತಾ ಬರಲಾಗಿದೆ. ಬಾಕಿ ಇರುವ 4946 ಪಂಪ್ಸೆಟ್ಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಟೆಂಡರ್ ಕರೆಯಲಾಗಿದೆ. ರೈತರು ಸ್ವಂತವಾಗಿ ಮೂಲ ಸೌಕರ್ಯ ಮಾಡಿಕೊಂಡು ಕೃಷಿ ಪಂಪ್ಸೆಟ್ಗಳಿಗೆ ತಕ್ಷಣವೇ ಸಂಪರ್ಕ ಪಡೆಯಲು ಹಾಗೂ ಇಲಾಖೆಯಿಂದ ಮೂಲಭೂತ ಸೌಕರ್ಯಕ್ಕಾಗಿ ಸರತಿಯಲ್ಲಿ ಕಾಯುವ ಎರಡು ಅವಕಾಶಗಳನ್ನು ಮಾಡಿಕೊಟ್ಟಲ್ಲಿ ಸ್ವಂತವಾಗಿ ಮಾಡಿಕೊಳ್ಳುವ ರೈತರಿಗೆ ಅನುಕೂಲವಾಗುತ್ತದೆ ಎಂಬ ಚಿಂತನೆ ಮಾಡಲಾಗಿದೆ ಎಂದು ಇಂಧನ ಸಚಿವರು ಹೇಳಿದರು.
ದಾವಣಗೆರೆ ಜಿಲ್ಲೆ ಆನಗೋಡು, ಮಾಯಕೊಂಡ ಭಾಗದಲ್ಲಿ 3 ಅಥವಾ 4 ಗಂಟೆಗಳ ಕಾಲ ಮಾತ್ರ ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ನೀಡಲಾಗುತ್ತದೆ ಎಂದು ಶಾಸಕರಾದ ಕೆ.ಎಸ್.ಬಸವಂತಪ್ಪ ಪ್ರಸ್ತಾಪಿಸಿದಾಗ ಎಲ್ಲಾ ರೈತರಿಗೂ ದಿನದಲ್ಲಿ 7 ಗಂಟೆಗಳ ಕಾಲ ವಿದ್ಯುತ್ ನೀಡುವುದು ಸರ್ಕಾರದ ನೀತಿಯಾಗಿದ್ದು ಅದರಂತೆ ಬೆಸ್ಕಾಂ ಕ್ರಮ ಕೈಗೊಳ್ಳಬೇಕು. ಓವರ್ ಲೋಡಿಂಗ್ ಆದರೆ ಅದನ್ನು ಬೇರೆಡೆ ವರ್ಗಾಯಿಸಿ 7 ಗಂಟೆ ಕೃಷಿ ಪಂಪ್ಸೆಟ್ಗೆ ವಿದ್ಯುತ್ ನೀಡಲೇಬೇಕೆಂದು ಸೂಚನೆ ನೀಡಿದರು.
ಕುಸುಮ್ ಬಿ ಯೋಜನೆಯಡಿ ರೈತರ ಪಂಪ್ಸೆಟ್ಗಳಿಗೆ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿದೆ. 7.5 ಹೆಚ್ಪಿ ವರೆಗೆ ಅವಕಾಶ ಇದ್ದು ರೈತರು ಶೇ 20 ರಷ್ಟು ವಂತಿಗೆಯನ್ನು ಕಟ್ಟಬೇಕು. ಕೇಂದ್ರ ಶೇ 30 ಹಾಗೂ ರಾಜ್ಯ ಶೇ 50 ರಷ್ಟು ಸಹಾಯಧನ ಘಟಕ ವೆಚ್ಚಕ್ಕೆ ನೀಡಲಿದೆ. ಮತ್ತು ಕುಸುಮ್-ಸಿ ಯೋಜನೆಯಡಿ ಖಾಸಗಿ ಹಾಗೂ ಸರ್ಕಾರಿ ಜಮೀನುಗಳಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಗ್ರಿಡ್ಗೆ ಪೂರೈಕೆ ಮಾಡುವುದಾಗಿದೆ. ರೈತರು ಸೋಲಾರ್ ಪಂಪ್ಸೆಟ್ ಅಳವಡಿಕೆಗೆ ಮುಂದೆ ಬಂದಲ್ಲಿ ಹೆಚ್ಚು ಅನುಕೂಲವಾಗಲಿದೆ ಎಂದರು.
ಸಭೆಯಲ್ಲಿ ಶಾಸಕರಾದ ಕೆ.ಎಸ್.ಬಸವಂತಪ್ಪ, ಲತಾ ಮಲ್ಲಿಕಾರ್ಜುನ್, ಬಿ.ದೇವೇಂದ್ರಪ್ಪ, ಕೆಪಿಟಿಸಿಎಲ್ ಎಂಡಿ ಪಂಕಜ್ಕುಮಾರ್ ಪಾಂಡೆ, ಬೆಸ್ಕಾಂ ಎಂಡಿ ಡಾ; ಶಿವಶಂಕರ್ ಎನ್, ಜಿಲ್ಲಾ ಪಂಚಾಯತ್ ಸಿಇಒ ಸುರೇಶ್ ಬಿ.ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಪಾಟೀಲ್ ಹಾಗೂ ಬೆಸ್ಕಾಂ, ಕೆಪಿಟಿಸಿಎಲ್ ಅಧಿಕಾರಿಗಳು ಉಪಸ್ಥಿತರಿದ್ದರು.