ಧಾರ್ಮಿಕ, ಸಾಂಸ್ಕೃತಿಕ ವಿಚಾರಗಳನ್ನು ಜಗತ್ತಿಗೆ ನೀಡಿದ ಶ್ರೇಷ್ಠ ಧರ್ಮ ವೀರಶೈವ ಧರ್ಮ

ಧಾರ್ಮಿಕ, ಸಾಂಸ್ಕೃತಿಕ ವಿಚಾರಗಳನ್ನು ಜಗತ್ತಿಗೆ ನೀಡಿದ ಶ್ರೇಷ್ಠ ಧರ್ಮ ವೀರಶೈವ ಧರ್ಮ

ಹರಪನಹಳ್ಳಿಯ ಕಾರ್ಯಕ್ರಮದಲ್ಲಿ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ

ಹರಪನಹಳ್ಳಿ, 13 –  ತಾಲ್ಲೂಕು ವೀರಶೈವ ಲಿಂಗಾಯತ ಮಹಾಸಭಾಕ್ಕೆ ಪಟ್ಟಣದಲ್ಲಿ ಸಭಾ ಭವನ ಹಾಗೂ ಸ್ಮಶಾನ ನಿರ್ಮಾಣಕ್ಕೆ ನಿವೇಶನ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಶಾಸಕರಾದ ಶ್ರೀಮತಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಭರವಸೆ ನೀಡಿದರು.

ಪಟ್ಟಣದ ತೆಗ್ಗಿನ ಮಠದ ಸಭಾ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕ ಬುಧವಾರ ಹಮ್ಮಿಕೊಂಡಿದ್ದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಾಗೂ ವಿವಿಧ ಸಾರ್ವಜನಿಕ ಸಂಸ್ಥೆಗಳಿಗೆ ಆಯ್ಕೆಯಾದ ಮಹಾ ಸಭಾದ ಸದಸ್ಯರುಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಎಲ್ಲಾ ಒಳಪಂಗಡಗಳು ಒಟ್ಟಾಗಿ ಹೋಗಬೇಕು, ಕೆಲವರು ಸ್ವಾರ್ಥಕ್ಕಾಗಿ ಉಪ ಜಾತಿಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಇನ್ನು ಕೆಲವರು ಸರ್ಕಾರಿ ಸೌಲಭ್ಯ ಪಡೆಯಲು ಈ ರೀತಿ ಮಾಡುತ್ತಾರೆ. ಇದನ್ನು ಬಿಟ್ಟು ಎಲ್ಲರೂ ಮಹಾ ಸಭಾದಂತೆ ಹೋಗಬೇಕು ಎಂದು ಹೇಳಿದರು.

ತೆಗ್ಗಿನ ಮಠ ಸಂಸ್ಥಾನದ ಪೀಠಾಧ್ಯಕ್ಷರೂ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ತಾಲ್ಲೂಕು ಗೌರವಾಧ್ಯಕ್ಷರೂ ಆದ ಶ್ರೀ ವರ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಾತ ನಾಡಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪ್ರಾಚೀನ ಇತಿಹಾಸವನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು, ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಚಾರಗಳನ್ನು ಜಗತ್ತಿಗೆ ನೀಡಿದ ಶ್ರೇಷ್ಠ ಧರ್ಮ ವೀರಶೈವ ಧರ್ಮ ಎಂದು ನುಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಕೆ.ಬಿ. ಶ್ರೀನಿವಾಸರೆಡ್ಡಿ ಮಾತನಾಡಿ, ವೀರಶೈವ ಲಿಂಗಾಯತ ಮಹಾಸಭಾ ಇದೊಂದು ಜಾತಿ ಅಲ್ಲ ಧರ್ಮ, ಇದಕ್ಕಾಗಿ ಸಾಕಷ್ಟು ಹೋರಾಟ ನಡೆದಿದೆ, ಆದಷ್ಟು ಬೇಗ ಈಡೇರಲಿದೆ ಕೇಂದ್ರದಿಂದ ನಮಗೆ ಮೀಸಲಾತಿ ಸಿಗಲಿದೆ ಎಂದರು.

ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ತೆಗ್ಗಿನ ಮಠದ ಕಾರ್ಯದರ್ಶಿ ಡಾ. ಟಿ.ಎಂ.ಚಂದ್ರಶೇಖರಯ್ಯ, ಮಹಾಸಭಾದ ತಾಲ್ಲೂಕು ಅಧ್ಯಕ್ಷ ಎಂ. ರಾಜಶೇಖರ, ಜಿಲ್ಲಾ ಉಪಾಧ್ಯಕ್ಷ ಇಟಗಿ ಸಂಗನಬಸಪ್ಪ ಮಾತನಾಡಿದರು.

ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಎಂ. ಕೊಟ್ರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ರಚನಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಕಲ್ಮಠ್ ಸ್ವಾಗತಿಸಿದರು.

ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ತೆಗ್ಗಿನ ಮಠದ ಕಾರ್ಯದರ್ಶಿ ಡಾ. ಟಿ.ಎಂ. ಚಂದ್ರಶೇಖರಯ್ಯ, ಪಿಎಲ್‍ಡಿ ಬ್ಯಾಂಕ್ ನೂತನ ಉಪಾಧ್ಯಕ್ಷ, ಪುರಸಭೆ ಸದಸ್ಯ ಗೊಂಗಡಿ ನಾಗರಾಜ, ಪುರಸಭೆ ನಾಮ ನಿರ್ದೇಶನ ಸದಸ್ಯೆ ಸುಮಾ ವೈ.ಎಂ., ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಪಿ.ಬಿ.ಗೌಡ, ಎಣ್ಣೆ ಬೀಜ ಬೆಳೆಗಾರರ ಸಂಘದ ನಿರ್ದೇಶಕ ನಂದಿಬೇವೂರು ಶೇಖರಗೌಡ ಪಾಟೀಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಎಚ್.ಎಂ.ಕೊಟ್ರಯ್ಯ, ಪಾಟೀಲ್ ಬೆಟ್ಟನಗೌಡ, ಟಿಎಚ್‍ಎಂ ಮಲ್ಲಿಕಾರ್ಜುನ, ಮಟ್ಟಿ ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!