ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಲಹೆ
ನವದೆಹಲಿ, ಫೆ.10 – ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪರೀಕ್ಷಾ ಪೇ ಚರ್ಚೆಯ ಎಂಟನೇ ವರ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಪೌಷ್ಟಿಕಾಂಶ, ಒತ್ತಡ ಎದುರಿಸುವುದು ಹಾಗೂ ನಾಯಕತ್ವ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಜ್ಞಾನ ಹಾಗೂ ಪರೀಕ್ಷೆ ಎರಡು ಬೇರೆ ಬೇರೆ ವಿಷಯಗಳು. ಪರೀಕ್ಷೆ ಒಂದನ್ನೇ ಜೀವನದ ಎಲ್ಲವೂ ಎಂದು ಭಾವಿಸಬಾರದು ಎಂದು ತಿಳಿಸಿದರು.
ಹಲವಾರು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಬಂದಿದ್ದ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಪ್ರಧಾನಿ ಮೋದಿ, ವಿದ್ಯಾರ್ಥಿಗಳು ಸಂಕುಚಿತ ದೃಷ್ಟಿಕೋನ ಹೊಂದಬಾರದು. ತಮ್ಮ ಹವ್ಯಾಸಗಳಲ್ಲಿ ಮುಂದುವರಿಯಬೇಕು ಎಂದು ಸಲಹೆ ನೀಡಿದರು.
ಜೀವನದಲ್ಲಿ ಸಮಯ ನಿರ್ವಹಣೆ, ಈ ಕ್ಷಣದಲ್ಲಿ ಬದುಕುವುದು, ಸಕಾರಾತ್ಮಕ ಅಂಶಗಳನ್ನು ಕಂಡುಕೊಳ್ಳುವು ದು, ಪೌಷ್ಟಿಕಾಂಶಗಳ ಪ್ರಾಮುಖ್ಯತೆ ಮುಂತಾದ ವಿಷಯಗಳ ಬಗ್ಗೆ ಪ್ರಧಾನಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಹಿಂದಿನ ಪರೀಕ್ಷಾ ಪೇ ಚರ್ಚೆಗಿಂತ ವಿಭಿನ್ನವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು ಸುಂದರ್ ನರ್ಸರಿಯ 35 ವಿದ್ಯಾರ್ಥಿಗಳ ಜೊತೆ ಪ್ರಧಾನಿ ಹೆಚ್ಚು ಅನೌಪಚಾರಿಕ ಚರ್ಚೆ ನಡೆಸಿದರು. ಈ ಬಾರಿ ಹೆಚ್ಚು ಆಳವಾದ ಹಾಗೂ ಮುಕ್ತವಾದ ಸಂವಾದ ನಡೆದಿತ್ತು.
ಪೋಷಕರು ತಮ್ಮ ಮಕ್ಕಳನ್ನು ಪ್ರದರ್ಶನ ಮಾದರಿಗಳಾಗಿ ಕಾಣಬಾರದು. ಇತರೆ ಮಕ್ಕಳ ಜೊತೆ ಹೋಲಿಕೆ ಮಾಡಬಾರದು ಹಾಗೂ ಮಕ್ಕಳಿಗೆ ಬೆಂಬಲ ನೀಡಬೇಕು ಎಂದು ಮೋದಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸದೇ ಇದ್ದರೆ ಜೀವನ ಹಾಳಾಯಿತು ಎಂದು ಯೋಚಿಸಬಾರದು ಎಂದರು.
ಕ್ರೀಡಾಂಗಣದಲ್ಲಿ ಕ್ರಿಕೆಟಿಗರು ಬ್ಯಾಟಿಂಗ್ ಮಾಡುವಾಗ ಪ್ರೇಕ್ಷಕರಿಂದ ಕೇಳಿ ಬರುವ ಸದ್ದನ್ನು ಎದುರಿಸಿ, ಪ್ರದರ್ಶನ ನೀಡುತ್ತಾರೆ. ಅದೇ ರೀತಿ ವಿದ್ಯಾರ್ಥಿಗಳೂ ಸಹ ಒತ್ತಡ ಎದುರಿಸಬೇಕು. ಪ್ರೇಕ್ಷಕರು ಬೌಂಡರಿ ಬೇಕು ಎಂದು ಬೊಬ್ಬೆ ಹಾಕುತ್ತಿದ್ದರೂ ಬ್ಯಾಟ್ಸ್ಮನ್ಗಳು ಅದಕ್ಕೆ ಕಿವಿ ಕೊಡದೆ ಮುಂದಿನ ಎಸೆತದ ಬಗ್ಗೆ ಗಮನ ಕೇಂದ್ರೀಕರಿಸುತ್ತಾರೆ. ಅದೇ ರೀತಿ ವಿದ್ಯಾರ್ಥಿಗಳು ಅಧ್ಯಯನದ ಕಡೆಗೆ ಗಮನ ಹರಿಸಬೇಕೇ ಹೊರತು ಪರೀಕ್ಷೆಯ ಒತ್ತಡಕ್ಕೆ ಸಿಲುಕಬಾರದು ಎಂದರು.
ಆದರೆ ವಿದ್ಯಾರ್ಥಿಗಳು ತಮಗೆ ತಾವೇ ಸವಾಲು ಹಾಕಿಕೊಳ್ಳಬೇಕು ಹಾಗೂ ಹಿಂದಿನ ಫಲಿತಾಂಶಕ್ಕಿಂತ ಉತ್ತಮ ಸಾಧನೆ ಮಾಡಲು ಪಣತೊಡಬೇಕು ಎಂದು ಮೋದಿ ತಿಳಿಸಿದರು.
ನಾಯಕತ್ವದ ಕುರಿತು ಮಾತನಾಡಿದ ಅವರು, ನಾಯಕರ ವರ್ತನೆಯಿಂದ ಕಲಿಯಬೇಕೇ ಹೊರತು, ಕೇವಲ ಅವರ ಭಾಷಣದಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು.
ನಟಿ ದೀಪಿಕಾ ಪಡುಕೋಣೆ, ಬಾಕ್ಸರ್ ಮೇರಿ ಕೋಮ್ ಹಾಗೂ ಅಧ್ಯಾತ್ಮಿಕ ನಾಯಕ ಸದ್ಗುರು ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.