ಭರಮಸಾಗರದ ತರಳಬಾಳು ಹುಣ್ಣಿಮೆಯಲ್ಲಿ ಇಂದು

ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಇಂದು ಸಂಜೆ 6.30 ಕ್ಕೆ `ಆರೋಗ್ಯ ಮತ್ತು ಸಮಾಜ’ ವಿಷಯ ಕುರಿತು ನಡೆಯುವ ಉಪನ್ಯಾಸ ಕಾರ್ಯಕ್ರಮದಲ್ಲಿ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಮುಖ್ಯ ಅತಿಥಿಗಳಾಗಿ ಸಚಿವ ಡಾ. ಶರಣ ಪ್ರಕಾಶ್ ರುದ್ರಪ್ಪ ಪಾಟೀಲ್, ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಡಾ. ಸಿ.ಎನ್.ಮಂಜುನಾಥ್ ಆಗಮಿಸಲಿದ್ದಾರೆ.

ನವದೆಹಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪಾಸ್‌ಪೋರ್ಟ್ ಅಧಿಕಾರಿ ಡಾ.ಕೆ.ಜೆ. ಶ್ರೀನಿವಾಸ್, ಬೆಂಗಳೂರು ಆಸ್ಟರ್ ಆಸ್ಪತ್ರೆಯ ಮುಖ್ಯಸ್ಥರೂ, ಲೀಡ್ ಕನ್ಸಲ್ಟೆಂಟ್ ಡಾ. ಸಿ.ಎನ್. ಪಾಟೀಲ್, ಬೆಂಗಳೂರು ನಾರಾಯಣ ನೇತ್ರಾಲಯದ ನೇತ್ರ ತಜ್ಞ ಡಾ. ಬಿ. ಪೂರ್ಣಚಂದ್ರ, ಡಾ. ಜಿ. ಸುನೀಲ್ ದಾವಣಗೆರೆ, ಹಾಸನ ವೈದ್ಯಕೀಯ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಬಿ.ಎಸ್. ಗಿರಿಜಾ, ಕೂಡ್ಲಿಗಿ ಹಾಸ್ಯ ಭಾಷಣಕಾರ ಕೋಗಳಿ ಕೊಟ್ರೇಶ್ ಉಪನ್ಯಾಸ ನೀಡಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಹಾಸನ ಜನಪ್ರಿಯ ಆಸ್ಪತ್ರೆ ವೈದ್ಯ ಡಾ. ಅಬ್ದುಲ್ ಬಷೀರ್ ಭಾಗವಹಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಿರಿಗೆರೆ ಅಕ್ಕನ ಬಳಗದಿಂದ ವಚನಗೀತೆ, ಚನ್ನಗಿರಿ ತರಳಬಾಳು ಶಾಲೆಯ ವಿದ್ಯಾರ್ಥಿಗಳಿಂದ ವಚನ ನೃತ್ಯ, ಸಿರಿಗೆರೆ ಬಿ.ಲಿಂಗಯ್ಯ ವಸತಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಜಾನಪದ ಸಿರಿ ಯಕ್ಷಗಾನ, ತೋಳಹುಣಸೆ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಸತಿಯುತ ಶಾಲೆಯ ವಿದ್ಯಾರ್ಥಿನಿಯರ ಭರತನಾಟ್ಯ ಹಾಗೂ ಕಡೂರು ಸ್ನೇಹಮಯಿ ವಿವೇಕಾನಂದ ಯೋಗ ಕೇಂದ್ರದ ಯೋಗ ಪಟುಗಳಿಂದ ಯೋಗ ಪ್ರದರ್ಶನ ಏರ್ಪಡಿಸಲಾಗಿದೆ. 

error: Content is protected !!