ದಾವಣಗೆರೆ, ಫೆ. 9- ಹೂವಿನಹಡಗಲಿ ತಾಲ್ಲೂಕಿನ ಶ್ರೀ ಕ್ಷೇತ್ರ ಮೈಲಾರದಲ್ಲಿ ಇದೇ ದಿನಾಂಕ 14 ರಂದು ನಡೆಯುವ ಕಾರಣಿಕೋತ್ಸವದಲ್ಲಿ ಪಾಲ್ಗೊಳ್ಳಲು ನಾಡಿದ್ದು ದಿನಾಂಕ 11 ರ ಮಂಗಳವಾರ ದಾವಣಗೆರೆಯಿಂದ ಮೈಲಾರಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕ್ಷೇತ್ರ ಮೈಲಾರ ಲಿಂಗೇಶ್ವರ ಪಾದಯಾತ್ರೆ ಟ್ರಸ್ಟ್ ಅಧ್ಯಕ್ಷ ಕೆ.ಹೆಚ್. ಮಲ್ಲೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ 13 ವರ್ಷಗಳಿಂದ ಮೈಲಾರ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದು, ಈ ಬಾರಿ 400 ರಿಂದ 500 ಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ದಿನಾಂಕ 11 ರ ಮಂಗಳವಾರ ಮಧ್ಯಾಹ್ನ 2 ಕ್ಕೆ ಪಾದಯಾತ್ರೆ ಪ್ರಾರಂಭವಾಗಲಿದ್ದು, ಹರಿಹರ, ಕೋಡಿಯಾಲ ಹೊಸಪೇಟೆ, ದೇವರಗುಡ್ಡ, ಹೊನ್ನತ್ತಿ ಮೂಲಕ ಮೈಲಾರ ತಲುಪಲಾಗುವುದು. 70 ರಿಂದ 80 ಕಿ.ಮೀ. ಪಾದಯಾತ್ರೆಯಲ್ಲಿ ವಿವಿಧೆಡೆ ತಿಂಡಿ, ಊಟದ ವ್ಯವಸ್ಥೆ ಮಾಡಲಾಗುವುದು. ದಿನಾಂಕ 13 ಮತ್ತು 14 ರಂದು ಮೈಲಾರದ ಡೆಂಕನ ಮರಡಿಗೆ ಬರುವಂತಹ ಪಾದಯಾತ್ರಿಗಳಿಗೆ ದಾವಣಗೆರೆ ಭಕ್ತಾದಿಗಳಿಂದ ಊಟ ಮತ್ತು ವಸತಿ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಗೋಪಾಲರಾವ್ ಸಾವಂತ್, ಬಳ್ಳಾರಿ ಜಯಣ್ಣ, ಹೆಚ್.ಜೆ. ವೀರಣ್ಣ, ಬಿ.ಜಿ.ಯಲ್ಲಪ್ಪ, ಮಹಾಂತೇಶ್, ಶಂಕರ್, ಅರ್ಚಕ ಸುರೇಶ್ ಕುಲಕರ್ಣಿ ಉಪಸ್ಥಿತರಿದ್ದರು.