ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ
ದಾವಣಗೆರೆ, ಫೆ.7- ಪ್ರಸ್ತುತ ದಿನಗಳಲ್ಲಿ ಸಮಾಜವು ಸಂಘಟಿತವಾಗಿ ಉಳಿಯದೆ ವಿಘಟಿತ ಸಮಾಜವಾಗಿದೆ. ಸಮಾಜವು ಇರುವುದು ಸಂಘರ್ಷಕ್ಕಲ್ಲ, ಬದಲಾಗಿ ಪರಸ್ಪರ ಸಂಬಂಧಕ್ಕೆ. ಅದನ್ನು ಈ ತರಳಬಾಳು ಹುಣ್ಣಿಮೆ ಮಹೋತ್ಸ ವದ ವೇದಿಕೆಯಿಂದ ಕಲಿಯಬೇಕು ಎಂದು ಹಿರಿಯ ಸಾಹಿತಿ, ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಗೊ.ರು. ಚನ್ನಬಸಪ್ಪ ಪ್ರತಿಪಾದಿಸಿದರು.
ಅವರು ಶುಕ್ರವಾರ ಚಿತ್ರದುರ್ಗ ತಾಲ್ಲೂಕು ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಇಲ್ಲಿವರೆಗೆ ನಡೆದಿರುವ 77 ತರಳಬಾಳು ಹುಣ್ಣಿಮೆ ಕಾರ್ಯಕ್ರಮಗಳ ಪೈಕಿ ಸುಮಾರು ಹತ್ತರಲ್ಲಿ ಭಾಗವಹಿಸಿ ದ್ದೇನೆ. ಈ ವೇದಿಕೆ ಕೇವಲ ಪದ್ಧತಿಯ ಆಚರಣೆಗಲ್ಲ. ಇದೊಂದು ಸಮಾಜ ಶಿಕ್ಷಣದ ವೇದಿಕೆಯಾಗಿದೆ ಎಂದು ಹೇಳಿದರು.
ಇಲ್ಲಿನ ಚಿಂತನಾ ವಿಷಯಗಳಂತೂ ಸಮಾಜ ಸಂಬಂಧಿಯಾಗಿವೆ. ಇದು ವಿಶೇಷವಾದ ಸಾಂಸ್ಕೃತಿಕ, ಶೈಕ್ಷಣಿಕ ಮಹೋತ್ಸವವಾಗಿದೆ. ಇದು ಮಾದರಿ ಹಾಗೂ ಶಿಸ್ತಿನ ಆಚರಣೆ ಕಾರ್ಯಕ್ರಮ ಎನ್ನುವುದು ಎಲ್ಲರ ಮನೆ ಮಾತಾಗಿದೆ. ಈ ಕಾರ್ಯಕ್ರಮವು ಗಡಿಯಾರ ನೋಡಿ ಕೊಂಡು ನಡೆಯುತ್ತದೆ ಎನ್ನುವುದಕ್ಕಿಂತ ಗಡಿಯಾರವೇ ಕಾರ್ಯಕ್ರಮ ನೋಡಿ ನಡೆಯುತ್ತದೆ ಎಂದು ಅಭಿಪ್ರಾಯಿಸಿದರು.
ದಿನದಿಂದ ದಿನಕ್ಕೆ ಹದಗೆಡುವ ಸಮಾಜಕ್ಕೆ, ಪ್ರಜ್ಞಾ ಜಾಗೃತಿಗೆ ಅಗತ್ಯವಾದ ಚಿಂತನೆಗಳು ಇಲ್ಲಿ ನಡೆಯುತ್ತವೆ. ಇವುಗಳ ಪೂರ್ಣ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು ಎಂದು ಗೊ.ರೂ.ಚ. ಕರೆ ನೀಡಿದರು.
ಕನ್ನಡ ಸಾಹಿತ್ಯ, ಶರಣ ಸಾಹಿತ್ಯಕ್ಕೆ ಇಡೀ ಜೀವನ ಮುಡುಪಾಗಿಟ್ಟವರು ಗೊರುಚ: ತರಳಬಾಳು ಶ್ರೀ
ಗೊ.ರು. ಚನ್ನಬಸಪ್ಪ ಅವರು ಕನ್ನಡ ಸಾಹಿತ್ಯ, ಶರಣ ಸಾಹಿತ್ಯಕ್ಕೆ ತಮ್ಮ ಇಡೀ ಜೀವನ ಮುಡುಪಾಗಿಟ್ಟವರು ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.
80 ವರ್ಷಗಳ ಹಿಂದೆ 1945ರಲ್ಲಿ ಹಿರಿಯ ಗುರುಗಳಾದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಬೀರೂರಿನಲ್ಲಿ ಸ್ಥಾಪಿಸಿದ ವಿದ್ಯಾರ್ಥಿ ನಿಲಯದಲ್ಲಿ ಗೊ.ರು. ಚ. ವಿದ್ಯಾರ್ಥಿಯಾಗಿದ್ದರು. ಅಲ್ಲಿ ಆಹಾರದ ಸಮಸ್ಯೆ ಇತ್ತು.
ಒಮ್ಮೆ ಹಿರಿಯ ಗುರುಗಳು ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ್ದಾಗ ಭಾವಿಯ ಸುತ್ತ ಅನ್ನ ಚೆಲ್ಲಲಾಗಿತ್ತು. ಇದನ್ನು ನೋಡಿ ಗುರುಗಳು ವಿದ್ಯಾರ್ಥಿಗಳನ್ನು ಪ್ರಶ್ನಿಸಿದಾಗ ಅನ್ನದಲ್ಲಿ ಹುಳುಗಳು ಇದ್ದುದಾಗಿ ತಿಳಿಸಿದರು.
ಗುರುಗಳು ಸಿಟ್ಟಿಗೆದ್ದು ಮೇಲ್ವಿಚಾರಕರನ್ನು ತರಾಟೆಗೆ ತೆಗೆದುಕೊಂಡು, ಒಳ್ಳೆ ಅಕ್ಕಿ ತಂದು ಉಣ ಬಡಿಸುವಂತೆ ತಾಕೀತು ಮಾಡಿದ್ದರು. ಈ ವಿಚಾರವನ್ನು ಈಗಲೂ ಗೊ.ರು.ಚ ಮೆಲುಕು ಹಾಕುತ್ತಾರೆ. ಹಿರಿಯ ಗುರುಗಳನ್ನು ಆರಾಧಿಸುತ್ತಾರೆ. ಅವ ರನ್ನು ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರ ನ್ನಾಗಿ ಮಾಡಿದ್ದು ನಮಗೆ ಸಂತೋಷ ತಂದಿದೆ ಎಂದು ಸ್ವಾಮೀಜಿ ಹೇಳಿದರು.
ನನ್ನ ಭವಿಷ್ಯದ ಭರವಸೆ ಬೆಳಕಾಗಿದ್ದು ತರಳಬಾಳು ವಿದ್ಯಾರ್ಥಿ ನಿಲಯ
ಬಡತನದಿಂದಾಗಿ ಪ್ರೌಢ ಶಿಕ್ಷಣ ವಂಚಿತನಾಗಿದ್ದ ನನಗೆ ಭವಿಷ್ಯದ ಭರವಸೆಯ ಬೆಳಕಾಗಿದ್ದುದು ಬೀರೂರಿನ ತರಳಬಾಳು ವಿದ್ಯಾರ್ಥಿ ನಿಲಯ ಹಾಗೂ ಅಂದು ಲಿಂ. ಶಿವಕುಮಾರ ಶ್ರೀಗಳು ನೀಡಿದ ಆಶೀರ್ವಾದ ಎಂದು ಗೊ.ರು.ಚನ್ನಬಸಪ್ಪ ಹೇಳಿದರು.
ನಾನು, ಕನ್ನಡ ಸಾಹಿತ್ಯ ಪರಿಷತ್ತು, ಅಖಿಲ ಭಾರತ ಸಮ್ಮೇಳನದ ಅಧ್ಯಕ್ಷನಾಗುವಷ್ಟು ಬೆಳೆಯಲು ತರಳಬಾಳು ವಿದ್ಯಾರ್ಥಿ ನಿಲಯವೇ ಕಾರಣ. ಹಿರಿಯ ಶ್ರೀಗಳಾದ ಶಿವಕುಮಾರ ಶ್ರೀಗಳಂತೆ ಇಂದಿನ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳಿಗೂ ನನ್ನ ಮೇಲೆ ಪ್ರೀತಿ ಇದೆ ಎಂದು ಹೇಳಿದರು.
ಜೀವನ ಪ್ರಯಾಣದ ಕೊನೆಯ ನಿಲ್ದಾಣದಲ್ಲಿದ್ದೇನೆ. ಇಂತಹದ್ದೇ ಒಂದು ವೇದಿಕೆಯಲ್ಲಿ ಜ್ಯೋತಿಷಿಯೊಬ್ಬರು ತಾವು 100 ರನ್ ಭಾರಿಸಲಿದ್ದೀರಿ ಎಂದು ಹೇಳಿದ್ದರು. ಅದಕ್ಕೆ ಇನ್ನೂ 3 ರನ್ ಬಾಕಿ ಇದೆ. ಜ್ಯೋತಿಷಿಯ ಮಾತು ಸುಳ್ಳಾಗಬಾರದು ಎಂದು ಉಸಿರಾಡುತ್ತಿದ್ದೇನೆ ಎಂದು ಗೊ.ರು.ಚ. ಚಟಾಕಿ ಹಾರಿಸಿದರು.
ಮೈಸೂರಿನ ಸಾಹಿತಿ ಮತ್ತು ಸಂಶೋಧಕ ಡಾ.ರಾಜಶೇಖರ್ ಜಮ ದಂಡಿ ಮಾತನಾಡಿ, ಸುಂದರ ಸಮಾಜ ರೂಪಿಸಿಕೊಳ್ಳಲು, ಸುಸಂಸ್ಕೃತ ವ್ಯಕ್ತಿತ್ವ ಬೆಳೆಸಿ ಕೊಳ್ಳಲು ತರಳಬಾಳು ಹುಣ್ಣಿಮೆ ಕಾರ್ಯಕ್ರಮದಿಂದ ಸಾಧ್ಯವಿದೆ ಎಂದು ಹೇಳಿದರು.
ಬಸವಣ್ಣನವರ ನುಡಿಯನ್ನು ನಡೆಯಲ್ಲಿ ತೋರಿಸಿದವರು ವಿಶ್ವಬಂಧು ಮರುಳಸಿದ್ಧರು. ಅವರು ಮೂಢ ನಂಬಿಕೆ, ಕಂದಾಚಾರ, ಜಾತಿ ನಂಬಿಕೆಗಳ ವಿರುದ್ಧ ಜನರಲ್ಲಿ ಅರಿವು ಮೂಡಿಸಿದವರು ಎಂದರು.
ಯಾಗ, ಯಜ್ಞ ಮಾಡಿ ತಿನ್ನುವ ಪದಾರ್ಥ ಅಗ್ನಿಗೆ ಹಾಕುವುದು ಸರಿಯಲ್ಲ ಎಂದು ಯಜ್ಞ ಮಾಡುವುದನ್ನು ವಿರೋಧಿಸಿದರು. ಮರುಳಸಿದ್ದರನ್ನು ನಡೆ ಬಸವಣ್ಣ ಎಂದು ಕರೆಯಬಹುದಾಗಿದೆ ಎಂದರು.
ಧಾರವಾಡದ ಶ್ರೀ ಮುರುಘಾ ಮಠದ ಡಾ.ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಬೇಲಿಮಠದ ಮಹಾಸಂಸ್ಥಾನದ ಶ್ರೀ ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮೀಜಿ, ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶ್ರೀ ಸಿದ್ಧಲಿಂಗ ಸ್ವಾಮೀಜಿ, ವಿಜ್ಞಾನ ಡಾ.ಶಿವಾನಂದ ಕಣವಿ, ವಿಜಯಪುರ ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ.ಮಹಾಂತೇಶ ಬಿರಾದಾರ, ಸಂಶೋಧಕ ಅಶೋಕ್ ದುಮ್ಮಲೂರು, ನ್ಯಾ.ಎಲ್. ನಾರಾಯಣ ಸ್ವಾಮಿ ಇತರರು ಉಪಸ್ಥಿತರಿದ್ದರು.