`ರಾಷ್ಟ್ರೀಯ ಅಕ್ಷರ ಹಬ್ಬ’ ಕಾರ್ಯಕ್ರಮದಲ್ಲಿ ರಾಜ್ಯ ಸಭಾ ಸದಸ್ಯ ಡಾ.ಎಲ್. ಹನುಮಂತಯ್ಯ ಅಭಿಮತ
ದಾವಣಗೆರೆ, ಫೆ.7- ಪ್ರಸಕ್ತ ದಿನಗಳಲ್ಲಿ ಸಾಹಿತ್ಯದ ಸವಾಲುಗಳು ಸ್ಥಿತ್ಯಂತರಗೊಂಡಿವೆ. ಲೇಖಕನೊಬ್ಬ ಯಾವ ಪ್ರಶ್ನೆಗಳನ್ನು ಇಟ್ಟುಕೊಂಡು ಬರೆಯಬೇಕು ಎಂಬುದು ಬಹಳ ಮಹತ್ವದ ವಿಚಾರವಾಗಿದೆ ಎಂದು ಸಾಹಿತಿ ಹಾಗೂ ರಾಜ್ಯ ಸಭಾ ಸದಸ್ಯ ಡಾ.ಎಲ್. ಹನುಮಂತಯ್ಯ ಹೇಳಿದರು.
ದಾವಣಗೆರೆ ಲಿಟರರಿ ಪೋರಂ ಹಾಗೂ ಅರಸೀಕೆರೆೇಯ ಅರಸಿ ಸಾಂಸ್ಕೃತಿಕ ವೇದಿಕೆ ಸಂಯುಕ್ತಾಶ್ರಯದಲ್ಲಿ ನಗರದ ಎಸ್.ಎಸ್. ಲೇಔಟ್‌ನಲ್ಲಿರುವ ಎಂ.ಬಿ.ಎ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ನಡೆದ ಮೊದಲನೇ ದಿನದ `ರಾಷ್ಟ್ರೀಯ ಅಕ್ಷರ ಹಬ್ಬ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ 75 ವರ್ಷಗಳಲ್ಲಿ ದೇಶವು ವಿಜ್ಞಾನ ಕ್ಷೇತ್ರದಲ್ಲಿ ಬಹು ದೊಡ್ಡ ಸಾಧನೆ ಮಾಡಿದೆ. ವೈಜ್ಞಾನಿಕ ಚಿಂತನೆಗೆ ಪ್ರಪಂಚದಲ್ಲೇ ಭಾರತ ಮುಂಚೂಣಿ ಆಗಬೇಕು ಎನ್ನುವ ಸ್ಪರ್ಧೆಗೆ ಇಳಿದಿದೆ. ಇದರ ನಡುವೆ ದೇಶದ ಸಾಮಾನ್ಯ ಜನರ ತೊಳಲಾಟ ಏನೇನಿವೆ ಎಂಬ ಚಿಂತನೆ ಬಹಳ ಮಹತ್ವದ್ದು ಎಂದು ತಿಳಿಸಿದರು.
ಧರ್ಮಗಳು ಭಾರತೀಯರನ್ನು ನಿರಂತರವಾಗಿ ಬಾಧಿಸುತ್ತಾ ಬಂದಿವೆ. ಇಂದಿಗೂ ದೇಶದಲ್ಲಿ ಅಸಮಾನತೆ ಎದ್ದು
ಕಾಣುತ್ತಿದೆ. ಧರ್ಮಗಳು ಇದನ್ನು ಇಂದಿಗೂ ಪ್ರಶ್ನೆ ಮಾಡಲಿಲ್ಲ. ಹಾಗಾಗಿ ಸಮಾಜವನ್ನು ಬಾಧಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಾಹಿತಿಗಳು ಧ್ವನಿ ಎತ್ತಬೇಕು ಎಂದರು.
ಜಾಗತೀಕರಣದ ನಂತರದ ಬೆಳವಣಿಗೆಗಳಿಂದ ಸಣ್ಣ ಸಮುದಾಯಗಳು ಸಾಯುತ್ತಿವೆ. ಬಹುತೇಕ ಭಾಷೆಗಳು ಪಥನವಾಗುತ್ತಿವೆ. ಭಾಷೆಯ ಸಾವಿಗೆ ಲೇಖಕ ಮುಖಾ-ಮುಖಿಯಾಗಿ ನಿಲ್ಲಬೇಕು. ಭಾಷೆಯ ಸಾವು ರಾಜ್ಯಗಳ ಸಾವೂ ಹೌದು.
– ಪುರುಷೋತ್ತಮ ಬಿಳಿಮಲೆ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ
ಹರಿಯುವ ನೀರಿನಲ್ಲಿ ಮುಳುಗುವುದು ಮಾತ್ರ ಕುಂಭಮೇಳವಲ್ಲ. ದೇಶದ ಎಲ್ಲ ವೈವಿಧ್ಯಮಯ ಸಂಗತಿಗಳ ಸಂಗಮವೇ ಕುಂಭಮೇಳ.
– ಡಾ.ಎಲ್. ಹನುಮಂತಯ್ಯ, ಸಾಹಿತಿ ಹಾಗೂ ರಾಜ್ಯ ಸಭಾ ಸದಸ್ಯ
ಯುವ ಪೀಳಿಗೆ ಅವಿವಾಹಿತರಾಗಿಯೇ ಉಳಿದಿದ್ದಾರೆ. ಸಂಗಾತಿ, ಪ್ರೀತಿ, ದೈಹಿಕ ಸಂಪರ್ಕ ಇಲ್ಲದ ಬದುಕು ಏನಾಗಬಹುದು. ಇಂತಹ ಸಂಗತಿಗಳನ್ನು ಲೇಖಕರು ಗಮನಿಸಬೇಕು.
– ಹೆಚ್.ಎನ್. ಆರತಿ, ಚಂದನ ವಾಹಿನಿ ನಿರ್ದೇಶಕರು
ಯಂತ್ರ ನಾಗರಿಕತೆಗೆ ಮಿತಿ ಇರಬೇಕು. ಇದೇ ಸರ್ವಸ್ವ ಆಗಬಾರದು. ಈ ಯಂತ್ರೋತ್ಪಾದನೆಯಿಂದ ಬಹು ಕಸುಬುಗಳು ನಾಶ ಆಗಿವೆ. ಇದೇ ಪರಮ ಶ್ರೇಷ್ಠ ಎಂದು ನಂಬಿದ ಸಾರ್ವಜನಿಕ ಉದ್ಯಮಗಳು ಕುಸಿದು ಬಿದ್ದಿವೆ ಎಂದು ಹೇಳಿದರು.
ಬಹು ಕಸುಬುಗಳನ್ನು ನಂಬಿ ಬದುಕುತ್ತಿರು ವಾಗಲೇ ಆಧುನಿಕತೆಯ ಸಮುದ್ರದೊಳಗೆ ಬೀಳಬಹುದು ಎನ್ನುವ ಕಲ್ಪನೆಯನ್ನು ಬಿತ್ತಬೇಕಿದೆ. ಇಂತಹ ಸವಾಲುಗಳನ್ನು ಸಾಹಿತಿಗಳು ಸ್ವೀಕರಿಸಬೇಕು ಎಂದು ಹೇಳಿದರು.
ಲಿವಿಂಗ್ ಟುಗೆದರ್ ಆಧುನಿಕತೆಯ ಮೌನ ಕ್ರಾಂತಿ ಆಗಿದೆ. ಆಧುನಿಕತೆಯ ಹೆಸರಿನಲ್ಲಿ ರೈತರ ಭೂಮಿ ಕಸಿದು ಅವರನ್ನು ನಿರ್ಗತಿಕರನ್ನಾಗಿ ಮಾಡುತ್ತಿದ್ದೇವೆ. ಲೇಖಕರು ಇಂತಹ ಸಂಗತಿ ಹಾಗೂ ಕ್ರಾಂತಿಯ ಬಗ್ಗೆ ಚಿಂತಿಸಬೇಕಿದೆ ಎಂದರು.
ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಹೆಚ್.ಟಿ. ಪೋತೆ ಮಾತನಾಡಿ, ಅಕ್ಷರದ ಮಹಾ ಬೆರಗು ಹಾಗೂ ಜ್ಞಾನದ ಸಂಕೇತವೇ ಅಂಬೇಡ್ಕರ್, ಅವರ ಬೆಳಕಿನಲ್ಲಿ ಹಲವು ಲೇಖಕರು ಬೆಳೆದು ಬಂದಿದ್ದೇವೆ ಎಂದು ಹೇಳಿದರು. ದೇಶದ ಜನರು ಬಸವಣ್ಣ, ಗಾಂಧಿ, ಅಂಬೇಡ್ಕರ್ ಹಾಗೂ ಸಂವಿಧಾನವನ್ನು ಇಂದಿಗೂ ಸರಿಯಾಗಿ ಒಪ್ಪಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜನರು ಅಂಬೇಡ್ಕರ್ ಅವರನ್ನೇ ಸ್ವೀಕರಿಸ ದಿದ್ದರೇ, ದಲಿತರನ್ನು ಹೇಗೆ ಸ್ವೀಕರಿಸುತ್ತಾರೆ ಮತ್ತು ಶೇ.50ರಷ್ಟಿರುವ ಜನರು ಸಂವಿಧಾನ ಉಳಿಸಲು ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಸರ್ಕಾರವೇ ಕೊಲ್ಲುತ್ತದೆ. ನಾವು ಮಕ್ಕಳು, ಮೊಮ್ಮಕ್ಕಳನ್ನು ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಿಸಿ ಸರ್ಕಾರವನ್ನು ದೂಷಿಸುವುದು ಎಷ್ಟು ಸರಿ ಎಂದರು.
ಲೇಖಕರು, ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದರೆ ವ್ಯವಸ್ಥೆ ಬದಲಾಗುತ್ತದೆ. ಆಗ ಸರ್ಕಾರಿ ಶಾಲೆಗಳ ಉದ್ಧಾರವಾಗುತ್ತದೆ ಎಂದು ಹೇಳಿದರು.ಸಂವಿ ಧಾನದ ಶಕ್ತಿಯೇ ಒಳಗೊಳ್ಳುವಿಕೆ. ಹಾಗಾಗಿ ಒಳಗೊಳ್ಳುವಿಕೆಯನ್ನು ಒಪ್ಪದೇ ಇರುವವರು ಸಂವಿಧಾನ ವಿರೋಧಿಗಳಾಗಿದ್ದಾರೆ ಎಂದರು.
ಈ ವೇಳೆ ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್, ಕಾರ್ಯಕ್ರಮ ಸಂಯೋಜಕ ಶ್ರೀಹರ್ಷ ಸಾಲಿಮಠ, ಲೇಖಕರಾದ ಚಾಂದಿನಿ, ಉದಯ ಇಟಗಿ, ವಿವಿಧ ಲೇಖಕರು, ಚಿಂತಕರು ಇದ್ದರು.