ಸಂಸ್ಕಾರವೇ ಆಧುನಿಕ ಶಿಕ್ಷಣದ ಅಡಿಪಾಯವಾಗಲಿ

ಸಂಸ್ಕಾರವೇ ಆಧುನಿಕ ಶಿಕ್ಷಣದ ಅಡಿಪಾಯವಾಗಲಿ

ದಾವಣಗೆರೆ, ಫೆ. 7- ಸಂಸ್ಕಾರವೇ ಆಧು ನಿಕ ಶಿಕ್ಷಣದ ಅಡಿಪಾಯವಾಗಬೇಕಾಗಿದೆ. ತಾಯಂದಿರು ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಯನ್ನು ಕಲಿಸುವುದು ಬಹುಮುಖ್ಯವಾಗಿದೆ. ಹೆತ್ತವರ ಋಣ ತೀರಿಸಲು ಸಾಧ್ಯವಾಗದಿ ದ್ದರೂ, ಜನ್ಮಕೊಟ್ಟ ದೇಶದ, ನಮ್ಮ ಭಾಷೆಯ, ಅನ್ನಕೊಟ್ಟ ರೈತರ, ಬದುಕನ್ನು ಕೊಟ್ಟ ಭಗವಂತನ ಋಣವನ್ನಾದರೂ ತೀರಿಸುವ ಪ್ರಯತ್ನ ಮಾಡಬೇಕೆಂದು  ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಮಹಾಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನುಡಿದರು.

ನಗರದ ಬಿಜೆಎಂ ಸ್ಕೂಲ್ ಮತ್ತು ಜಿಎನ್‌ಬಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ವತಿಯಿಂದ ಇಂದು ಹಮ್ಮಿಕೊಂಡಿದ್ದ `ಅರಿವಿನ ಉತ್ಸವ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಭಗವಂತ ಜ್ಞಾಪಕ ಶಕ್ತಿ ನೀಡಿದ್ದಾನೆ. ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಪ್ರತಿಯೊಬ್ಬ ಮಗುವಿನಲ್ಲಿ ಐಕ್ಯೂ ಇದ್ದೇ ಇರುತ್ತದೆ. ಅಂತಹ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮಕ್ಕಳನ್ನು ತರಬೇತುಗೊಳಿಸುವ ಅಗತ್ಯವಿದೆ ಎಂದರು.

ವೈದ್ಯರಾಗಿ, ಇಂಜಿನಿಯರಾಗಿ, ಉದ್ಯಮಿಗಳಾಗಿ, ಐಎಎಸ್, ಕೆಎಎಸ್ ಏನಾದರೂ ಆಗಿ. ಜನ್ಮ ನೀಡಿದ ತಂದೆ-ತಾಯಿಗಳನ್ನು ನಿರ್ಲಕ್ಷೆ ಮಾಡದೇ, ಸಮಾಜದಲ್ಲಿ `ರಿಮಾರ್ಕ್’ ಬರದಂತೆ ನಡೆದುಕೊಳ್ಳುವುದು ಮುಖ್ಯ. ಸಮಾಜದಲ್ಲಿ ತಲೆ ಎತ್ತಿ ಬಾಳುವಂತಾಗಬೇಕೆಂಬುದು ನಮ್ಮ ಆಶಯವಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ, ಸಮಾಜದಲ್ಲಿ  ಶಿಕ್ಷಣವಂತರು, ಬುದ್ಧಿವಂತರೆನಿಸಿಕೊಂಡವರೇ ಮೋಸದ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ಇದನ್ನು ನೋಡಿದರೆ, ಪುಸ್ತಕದ ಬದನೆಕಾಯಿ ಪ್ರಯೋಜನಕ್ಕೆ ಬಾರದು ಎಂದು ಎನಿಸುತ್ತದೆ. ಮನುಷ್ಯನಿಗೆ ಎಡ ಮತ್ತು ಬಲ ಭಾಗದ ಎರಡು ಮೆದುಳು ಇರುತ್ತವೆ. ಎರಡೂ ಚನ್ನಾಗಿ ಕೆಲಸ ಮಾಡಬೇಕು. ಯಾರಿಗೆ ಬಲ ಭಾಗದ ಮೆದುಳು ಚನ್ನಾಗಿ ನಿರ್ವಹಿಸುತ್ತದೆಯೋ ಅಂತಹವರು ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದರು. 

ಕಲಿಕೆ ನಿರಂತರವಾಗಿರಬೇಕು. ಮಗ್ಗಿ ಪಾಠ ಆಗಬಾರದು. ಯಾರು ಮಗ್ಗಿ ಪಾಠ ಮಾಡುತ್ತಾರೋ ಅವರು ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಆಟಗಳನ್ನಾಡಬೇಕು. ಆವಾಗ ಮೆದುಳು ಬೆಳವಣಿಗೆಯಾಗುತ್ತದೆ. ಮಗು ಸೋಲುವುದನ್ನು ಕಲಿಯಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅದು ಜೀವನದ ನಿಜವಾದ ಪಾಠ ಎಂದು ಹೇಳಿದರು.

ಇಂಡಿಯಾ ಬುಕ್ ಆಫ್ ರೆಕಾರ್ಡ್-2023 ರ, ನವಲಗುಂದದ ಬಾಲ ಪ್ರತಿಭೆ, ಗ್ರ್ಯಾಂಡ್ ಮಾಸ್ಟರ್ ಆರ್ಯವರ್ದನ್ ಕೋಟಿ ಅವರಿಗೆ `ಸಂಗಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸವಣೂರು ತಾಲ್ಲೂಕು ತವರ ಮಳ್ಳಿಹಳ್ಳಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕಿ ಪುಷ್ಪಮಾಲ ಆರ್ . ಚಂದ್ರಗಿರಿ ಹಾಗೂ ಗದಗ ಜೇಸಿ ಪ್ರೌಢಶಾಲೆಯ ಶಿಕ್ಷಕಿ ದಾನಮ್ಮ ಚಂದ್ರಶೇಖರ ತೆಗ್ಗಿನಕೇರಿ ಇವರಿಗೆ `ಅತ್ಯುತ್ತಮ ಶಿಕ್ಷಕಿ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಇದೇ ವೇಳೆ ಬಿಜೆಎಂ ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಡಾ.ಕೆ.ಎಸ್. ಸ್ಫೂರ್ತಿ, ಡಾ. ಎಂ.ಎಸ್. ಮೊಹಮ್ಮದ್ ಅಫ್ರಿದ್, ಆರ್.ಆರ್. ಶಿವಶಂಕರ್, ಡಿ.ಎಂ. ಕಾವ್ಯ, ಎಸ್. ಚೈತ್ರಾ, ರಾಹುಲ್, ಆರ್.ಕಾವ್ಯ ಮತ್ತಿತರರಿಗೆ `ಬಿಜೆಎಂ ಸಾಧನಶ್ರೀ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಎಸ್ಪಿ (ಇಂಟಲಿಜೆನ್ಸಿ) ವೇದಮೂರ್ತಿ  ಮಾತನಾಡಿದರು. ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಎಂ.ಎಸ್. ಸಂತೋಷ್ ಕುಮಾರ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳು ವಚನ ನೃತ್ಯ ಪ್ರದರ್ಶಿಸಿದರು. ಮುಖ್ಯ ಶಿಕ್ಷಕಿ ಗೀತಾಂಜಲಿ ಸ್ವಾಗತಿಸಿದರು. ದಾಕ್ಷಾಯಿಣಿ ಜಿ. ಕಮ್ಮಾರ್ ನಿರೂಪಿಸಿದರು. ಪಿಎಲ್‌ಇ ಟ್ರಸ್ಟ್ ಗೌರವ ಕಾರ್ಯದರ್ಶಿ ಮಂಜುನಾಥ ಅಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

error: Content is protected !!