ಹರಿಹರದಲ್ಲಿನ ಮಕ್ಕಳೊಂದಿಗೆ ಸಂವಾದದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಎಂ. ಅಪರ್ಣ ಕೊಳ್ಳ
ಹರಿಹರ, ಫೆ. 6 – ವಿವಿಧ ಕಾರಣಗಳಿಂದ ಅಪ್ರಾಪ್ತ ಮಕ್ಕಳನ್ನು ಮದುವೆ ಮಾಡಲು ಮುಂದಾಗುತ್ತಿರುವುದನ್ನು ಹಾಗೂ ಅವರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ತಡೆಯಲು ಶಾಲೆಯಲ್ಲಿ, ಮಕ್ಕಳಿಗೆ ಶಿಕ್ಷಕರು ಮನೋಬಲ ಹೆಚ್ಚಿಸಲು ಮುಂದಾಗಬೇಕೆಂದು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಎಂ. ಅಪರ್ಣ ಕೊಳ್ಳ ಹೇಳಿದರು.
ಕರ್ನಾಟಕ ರಾಜ್ಯ ಮಕ್ಕಳ ಆಯೋಗ (ಬೆಂಗಳೂರು), ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ತಾಲ್ಲೂಕು ಕಾನೂನು ಸೇವಾ ಸಮಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇವರುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಗುರು ಭವನದಲ್ಲಿ ಏರ್ಪಡಿಸಿದ್ದ, `ಬಾಲ್ಯ ವಿವಾಹ ಮತ್ತು ಪೋಕ್ಸೋ ಕಾಯ್ದೆ ತರಬೇತಿ’ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಮಾತನಾಡಿದರು.
ಬಾಲ್ಯ ವಿವಾಹ ತಡೆಯಲು ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಕೇಂದ್ರ, ರಾಜ್ಯ ಸರ್ಕಾರ ಹಲವಾರು ಕಾನೂನು-ಕಾಯ್ದೆ ಜಾರಿಗೊಳಿಸಿದ್ದು ಇರುತ್ತದೆ. ಆದರೆ, ಅವುಗಳನ್ನು ಬಳಕೆ ಮಾಡಿಕೊಳ್ಳುವಲ್ಲಿ ಅನೇಕರು ಹಿಂದೇಟು ಹಾಕುತ್ತಿದ್ದಾರೆ.
ಈ ಕುರಿತು ಶಾಲೆಯಲ್ಲಿ ಗೊಡೆಗಳ ಮೇಲೆ ಹಾಗೂ ಪ್ರಮುಖ ಸ್ಥಳಗಳಲ್ಲಿ ರಾಜ್ಯ ಮಕ್ಕಳ ಸಹಾಯ ವಾಣಿ ಸಂಖ್ಯೆ 1098ನ್ನು ಗೋಡೆಯ ಮೇಲೆ ಬರೆಯಿಸಬೇಕು. ಮಕ್ಕಳ ಸುರಕ್ಷತೆ ಹಾಗೂ ಆರೈಕೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ನಿರ್ಲಕ್ಷ ತೊರುವುದು ಮಕ್ಕಳಿಗೆ ನಾವು ತೋರಿಸಿದ ನಿರ್ಲಕ್ಷ್ಯತನದಿಂದ ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರು ಅಧ್ಯಕ್ಷರು ತಾಲ್ಲೂಕು ಕಾನೂನು ಸೇವಾ ಸಮಿತಿಯ ಪದ್ಮಶ್ರೀ ಮುನ್ನಳ್ಳಿ ಇವರು ಮಾತನಾಡಿ, ಪೋಷಕರು ಮಕ್ಕಳನ್ನು ಮೊಬೈಲ್ನಿಂದ ದೂರವಿಡಬೇಕು. ಮಕ್ಕಳಿಗೆ ಶಾಲೆಗಳಲ್ಲಿ ಕೌನ್ಸಿಲಿಂಗ್ ಆಪ್ತ ಸಮಾಲೋಚನೆ ಮಾಡಬೇಕು. ಮಕ್ಕಳ ಕಾಯ್ದೆಗಳು ಅನುಕರನಗೊಳ್ಬೇಕು. ಶಾಲೆಗಳಲ್ಲಿ ಹೆಚ್ಚಿನ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಹಶೀಲ್ದಾರ್ ಕೆ.ಎಂ. ಗುರುಬಸವರಾಜ ಮಾತನಾಡಿ, ನಮ್ಮಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ತಾಲ್ಲೂಕಿನ ಭಾನುವಳ್ಳಿ ಗ್ರಾಮದಲ್ಲಿ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳು ಕಂಡು ಬಂದಿವೆ ಎಂದು ಹೇಳಿದರು.
18 ವರ್ಷದೊಳಗಿನ ಹೆಣ್ಣು ಮಕ್ಕಳ ವಿವಾಹಕ್ಕೆ ಮುಂದಾಗಿರುವುದು ಕಂಡು ಬಂದಲ್ಲಿ ರಾಜ್ಯ ಮಕ್ಕಳ ಸಹಾಯವಾಣಿ 1098ಕ್ಕೆ ತಿಳಿಸಬೇಕು ಎಂದು ಕರೆ ನೀಡಿದರು.
ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್. ಕೃಷ್ಣಪ್ಪ ಬಿಎಲ್ಆರ್ ಬಸವರಾಜಯ್ಯ, ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ. ಪೂರ್ಣಿಮಾ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಬ್ದುಲ್ ಖಾದರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಕಾಶ ಬಿ.ಎಸ್, ಪಿಎಸ್ಐ ಶ್ರೀಪತಿ ಗಿನ್ನಿ, ಎಎಸ್ಐ ವಿಜಯ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ ಟಿ.ಎನ್, ಜಿಲ್ಲಾ ಮಕ್ಕಳ ಘಟಕದ ವೀರೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.