ಜಯಂತಿ ಉತ್ಸವದಲ್ಲಿ ಲೋಪ ಬರದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿಗೆ ಉಪಸಭಾಪತಿ ರುದ್ರಪ್ಪ ಲಮಾಣಿ ಸೂಚನೆ
ನ್ಯಾಮತಿ, ಫೆ.4- ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಇದೇ ದಿನಾಂಕ 13ರಿಂದ 15ರ ವರೆಗೆ ಸಂತ ಸೇವಾಲಾಲ್ ಮಹಾರಾಜರ 285ನೇ ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಈ ಸಂಭ್ರಮದಲ್ಲಿ ಯಾವುದೇ ಲೋಪ ಆಗದಂತೆ ಜಿಲ್ಲಾಧಿಕಾರಿ ಗಳು ಇಲ್ಲೇ ಇದ್ದು, ಸಿದ್ಧತಾ ಕಾರ್ಯದ ಬಗ್ಗೆ ನಿಗಾವಹಿಸಬೇಕು ಎಂದು ಉಪಸಭಾಪತಿ ರುದ್ರಪ್ಪ ಲಮಾಣಿ ಸೂಚಿಸಿದರು.
ಜಿಲ್ಲಾಡಳಿತ, ತಾಂಡಾ ಅಭಿವೃದ್ಧಿ ನಿಗಮ, ಸಂತ ಸೇವಾಲಾಲ್ ಕ್ಷೇತ್ರಾಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾಪನೆ ಹಾಗೂ ಮಹಾಮಠ ಸೇವಾ ಸಮಿತಿ ವತಿಯಿಂದ ಭಾಯಾಗಡ್ ಕ್ಷೇತ್ರದ ಸಂತ ಸೇವಾಲಾಲ್ ಮಹಾರಾಜರ ಜನ್ಮ ಸ್ಥಳದಲ್ಲಿ ಆಯೋಜಿಸಿದ್ದ ಸೇವಾಲಾಲ್ ಜಯಂತಿ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಕ್ಷೇತ್ರದಲ್ಲಿ ಈತನಕ `ಒಂದು ಕುರಿಯನ್ನೂ ಕಡಿದಿಲ್ಲ – ದೇವಿ ಮರಿಯಮ್ಮ ಕೇಳಿಲ್ಲ’ ಎಂದು ಕ್ಷೇತ್ರದ ಧಾರ್ಮಿಕ ಹಾಗೂ ಜನಾಂಗದ ಭಕ್ತಿಯ ಬಗ್ಗೆ ವಿವರಿಸಿದರು.
ಅಂದಿನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್. ಅಶೋಕ್ ಬರುತ್ತಿದ್ದು, ಸೂಕ್ತ ಹೆಲಿಪ್ಯಾಡ್ ಸಿದ್ಧತೆ ಆಗಬೇಕಿದೆ. ಸುಗಮ ಸಂಚಾರಕ್ಕಾಗಿ ಒಂದು ಮಾರ್ಗ ಬರಲು ಮತ್ತೊಂದು ಹೋಗಲು ಸರಿಯಾದ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವನಾಯ್ಕ ಮಾತನಾಡಿ, ಸೇವಾಲಾಲ್ ಸಮಿತಿಯಲ್ಲಿ 5 ಕೋಟಿ ರೂ. ಹಣವಿದ್ದು, 23 ಲಕ್ಷ ರೂ. ಖರ್ಚಾಗಿದೆ. 4ಕೋಟಿ 77ಲಕ್ಷ ರೂ. ಇದ್ದು, ಕಳೆದ ಬಾರಿ ಜಯಂತಿಗೆ 8ಕೋಟಿ 84ಲಕ್ಷ ರೂ. ಖರ್ಚಾಗಿದೆ. ಈ ಬಾರಿ 10ಕೋಟಿ ರೂ.ಗಳು ಖರ್ಚಾಗಬಹುದೆಂದು ಅಂದಾಜಿಸಲಾಗಿದೆ ಎಂದರು.
ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಸರ್ಕಾರ ನಡೆಸುವ 23 ಜಯಂತಿಗಳಲ್ಲಿ ಸಂತ ಸೇವಾಲಾಲ್ ಜಯಂತಿ ಆಚರಣೆ ಅನೇಕ ವಿಶೇಷತೆಗಳಿಂದ ಕೂಡಿದೆ. ಈ ಆಚರಣೆಗೆ ಕೆಲವೇ ದಿನಗಳು ಉಳಿದಿದ್ದರಿಂದ ಎಲ್ಲರೂ ಸಹಕಾರ ಮನೋಭಾವದಿಂದ ಜಯಂತಿ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದರು.
ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಮಾತ ನಾಡಿ, ಕ್ಷೇತ್ರದ ಮಹಿಮೆಯಿಂದ ಕಾರ್ಯಕ್ರಮ ಯಶಸ್ವಿಯಾಗಲಿದೆ. ಸಂಬಂಧಪಟ್ಟ ಆಯಾ ಇಲಾಖೆ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿ ಕೆಲಸ ಮಾಡಿಸುವೆ. ಕ್ಷೇತ್ರದ ಸ್ವಚ್ಛತೆ, ಶೌಚಾಲಯ ನಿರ್ಮಾಣ ಹಾಗೂ ಸುಗಮ ಸಂಚಾರದ ಕಾರ್ಯಕ್ಕೆ ಆದ್ಯತೆ ನೀಡಬೇಕಿದೆ ಎಂದರು.
ಸೇವಾಲಾಲ್ ಸಮೀತಿ ನಿರ್ದೇಶಕ ರಾಘವೇಂದ್ರ ಪ್ರಾಸ್ತಾವಿಕ ಮಾತನಾಡಿದರು.
ಈ ವೇಳೆ ಮಾಜಿ ಸಚಿವ ಶಿವಮೂರ್ತಿನಾಯ್ಕ, ಜಿ.ಪಂ. ಸಿಇಒ ಸುರೇಶ್ ಬಿ. ಇಟ್ನಾಳ್, ತಹಶೀಲ್ದಾರ್ಗಳಾದ ಎಚ್.ಪಿ. ಗೋವಿಂದಪ್ಪ, ಪಟ್ಟರಾಜಗೌಡ, ತಾಂಡಾ ಅಭಿವೃದ್ಧಿ ನಿಗಮದ ಎಂ.ಡಿ ರಾಜು, ಎಎಸ್ಪಿ ವಿಜಯಕುಮಾರ್ ಎಂ. ಸಂತೋಷ, ಮಂಜುನಾಥ, ಡಿವೈಎಸ್ಪಿ ಶ್ಯಾಮ್ ವರ್ಗೀಸ್, ನ್ಯಾಮತಿ ಠಾಣೆಯ ಪಿಐ ಎನ್.ಎಸ್.ರವಿ, ಡಾ. ಈಶ್ವರನಾಯ್ಕ, ಬೋಜಾನಾಯ್ಕ, ಹನುಮಂತನಾಯ್ಕ, ನರೇನಹಳ್ಳಿ ಅರುಣಕುಮಾರ್, ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ನಂಜಾನಾಯ್ಕ, ಕೆ. ನಾಗರಾಜು, ಉಮಾ, ಸುನೀಲ್ ಇತರರು ಇದ್ದರು.