ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚನೆ
ದಾವಣಗೆರೆ, ಫೆ.4- ಅಕ್ರಮ, ಅನಧಿ ಕೃತ ಗಣಿಗಾರಿಕೆಗೆ ತಕ್ಷಣವೇ ಕಡಿವಾಣ ಹಾಕುವಂತೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ, ಪೊಲೀಸ್, ನೀರಾವರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಭಿವೃದ್ಧಿಗೆ ಮಣ್ಣು, ಮರಳು ಹಾಗೂ ಕಲ್ಲು ಗಣಿಗಾರಿಕೆ ಅಗತ್ಯ. ಇದಕ್ಕೆ ಸರ್ಕಾರ ನೀತಿಗಳನ್ನು ರೂಪಿಸಿ, ಕಾನೂನು ಚೌಕಟ್ಟು ವಿಧಿಸಿದೆ. ಇದನ್ನು ಮೀರಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಕ್ರಮ ಕೈಗೊಳ್ಳುವಂತೆ ಹೇಳಿದರು.
ನದಿಗೆ ಅಪಾಯ ಸೃಷ್ಟಿಸಬಹುದಾದ ಇಂತಹ ಚಟುವಟಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಎಲ್ಲಾ ಇಲಾಖೆಗಳು ಸಮನ್ವಯ ಸಾಧಿಸಿ ತಂಡವಾಗಿ ಕೆಲಸ ಮಾಡಬೇಕು. ತಾಲ್ಲೂಕು ಮಟ್ಟದಲ್ಲಿ ರಚನೆಯಾಗಿರುವ ಕಾರ್ಯ ಪಡೆಗಳು ಕೆಲಸ ಮಾಡಬೇಕು ಎಂದರು.
ಗಣಿ ಇಲಾಖೆಯ ಅಧಿಕಾರಿಗಳು ರಾತ್ರಿ ಗಸ್ತು ಮಾಡುವಾಗ ಎಚ್ಚರವಹಿಸಬೇಕು. ಗಣಿಗಾರಿಕೆ ಸ್ಥಳಕ್ಕೆ ಭೇಟಿ ನೀಡುವಾಗ ಪೊಲೀಸರು ಜೊತೆಯಲ್ಲಿರಬೇಕು. ರಾತ್ರಿ ವೇಳೆ ರಸ್ತೆ, ಆಯಕಟ್ಟಿನ ಸ್ಥಳಗಳಲ್ಲಿ ವಾಹನ ತಪಾಸಣೆ ಮಾಡಬೇಕು. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ ವಾಹನ, ವ್ಯಕ್ತಿಗಳ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸಿ. ದಂಡ ವಿಧಿಸುವುದು ಎರಡನೇ ಆಯ್ಕೆ ಆಗಿರಲಿ ಎಂದು ಸಲಹೆ ನೀಡಿದರು.
ಇಟ್ಟಿಗೆ ಭಟ್ಟಿಗೆ ಅಗತ್ಯವಿರುವ ಮಣ್ಣಿಗೆ ಪರವಾನಗಿ ಪಡೆಯುವುದು ಕಡ್ಡಾಯ. ಕಟ್ಟಡ ನಿರ್ಮಾಣ, ಅಭಿವೃದ್ಧಿ ಕಾಮಗಾರಿಗೆ ಇಟ್ಟಿಗೆ ಅಗತ್ಯವಿದೆ. ಆದರೆ, ನಿಯಮ ಮೀರಿ ಮಣ್ಣು ಸಂಗ್ರಹಿಸುವುದನ್ನು ನೋಡಿ ಸುಮ್ಮನೆ ಕೂರಬಾರದು. ಇಂತಹ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸೂಚಿಸಿದರು.
ಕೆರೆಯ ಈ ಮಣ್ಣನ್ನು ಜಮೀನು, ತೋಟಗಳಿಗೆ ಬಳಕೆ ಮಾಡಲು ನಿರ್ಬಂಧ ಹೇರಬಾರದು. ಆದರೆ, ಹತ್ತು ಚಕ್ರದ ಲಾರಿಗಳಲ್ಲಿ ಮಣ್ಣು ತುಂಬಿ ಹೊರ ಜಿಲ್ಲೆಗೆ ಸಾಗಣೆ ಮಾಡುವ ಹಾಗೂ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವುದಕ್ಕೆ ನಿರ್ಬಂಧ ಹೇರಬೇಕು. ಈ ವಿಚಾರದಲ್ಲಿ ಸಣ್ಣ ನೀರಾವರಿ ಇಲಾಖೆ ಸರಿಯಾದ ತೀರ್ಮಾನಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಉಪವಿಭಾಗಾಧಿಕಾರಿಗಳಾದ ಸಂತೋಷ್ ಕುಮಾರ್, ಅಭಿಷೇಕ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣ ನಾಯ್ಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ರಶ್ಮಿ ಹಾಗೂ ಇತರರು ಉಪಸ್ಥಿತರಿದ್ದರು.