ಹುಲಿಯಂತೆ ಹುಟ್ಟುವ ಮಕ್ಕಳನ್ನು ಇಲಿಯಂತೆ ಮಾಡುತ್ತಿರುವ ನಮ್ಮ ಇಂದಿನ ಶಿಕ್ಷಣ ಪದ್ಧತಿ

ಹುಲಿಯಂತೆ ಹುಟ್ಟುವ ಮಕ್ಕಳನ್ನು ಇಲಿಯಂತೆ ಮಾಡುತ್ತಿರುವ ನಮ್ಮ ಇಂದಿನ ಶಿಕ್ಷಣ ಪದ್ಧತಿ

ಹುಲಿಯಂತೆ ಹುಟ್ಟುವ ಮಕ್ಕಳನ್ನು ಇಲಿಯಂತೆ ಮಾಡುತ್ತಿರುವ ನಮ್ಮ ಇಂದಿನ ಶಿಕ್ಷಣ ಪದ್ಧತಿ - Janathavani

ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ

ಭರಮಸಾಗರ, ಫೆ.4- ಹುಲಿಯಂತೆ ಹುಟ್ಟುವ ಮಕ್ಕಳನ್ನು ಇಲಿಯಂತೆ ಮಾಡುವಲ್ಲಿ ಇಂದಿನ ನಮ್ಮ ಶಿಕ್ಷಣ ಯಶಸ್ಸು ಕಂಡಿದೆ ಎಂದು ರಾಮಕೃಷ್ಣ ವಿವೇಕಾನಂದಾಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ಚಿತ್ರದುರ್ಗ ತಾಲ್ಲೂಕು ಭರಮಸಾಗರದಲ್ಲಿ ಇಂದಿನಿಂದ ಆರಂಭಗೊಂಡ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಅವರು ಆಶೀರ್ವಚನ ನೀಡುತ್ತಾ, ಇಂದಿನ ಶಿಕ್ಷಣ ಪದ್ಧತಿ ಮಕ್ಕಳಲ್ಲಿರುವ ಆತ್ಮವಿಶ್ವಾಸ ಹಾಳು ಮಾಡುತ್ತಿದೆ ಎಂದು ತಿಳಿಸಿದರು.

ಋಣಾತ್ಮಕ ವಿಚಾರಗಳನ್ನು ಮಕ್ಕಳಲ್ಲಿ ತುಂಬಿ, ತಿಳಿಯಬಾರದ ವಿಷಯಗಳನ್ನು ತಿಳಿಸುತ್ತಾ, ತಿಳಿಯಲೇ ಬೇಕಾದ ವಿಷಯವನ್ನು ತಿಳಿಸದೇ ಮುಚ್ಚಿಡುತ್ತಿದೆ ಇಂದಿನ ಶಿಕ್ಷಣ ಪದ್ಧತಿ. ನಮ್ಮ ಶಿಕ್ಷಣ ಇಲಾಖೆ ಅವಿವೇಕಿಗಳಿಂದ ಕೂಡಿದೆ ಎಂದರು.

ಬಡವರು ಶಾಲೆ ಬಿಡುತ್ತಿದ್ದಾರೆ ಎಂದು ಸರ್ಕಾರ ಹೇಳುತ್ತದೆ. ಆದರೆ ತಂದೆ-ತಾಯಿ ತಮ್ಮ  ಆಸ್ತಿ, ಒಡವೆ ಮಾರಾಟ ಮಾಡಿ ತಮ್ಮ ಮಕ್ಕಳನ್ನು ಓದಿಸುತ್ತಿರುವ ಉದಾಹರಣೆಗಳಿವೆ. ಶಾಲೆಯಲ್ಲಿ ಮಾಡುತ್ತಿರುವ ಪಾಠ ಅರ್ಥವಾಗುತ್ತಿಲ್ಲ. ಈ ಕಾರಣಕ್ಕಾಗಿಯೇ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ ಎಂದು ಹೇಳಿದರು.

ಅಮೆರಿಕಾದ ಯಾವುದೇ ಶಾಲೆಯಲ್ಲಿ 10 ಜನ ಟಾಪರ್ಸ್‌ಗಳ  ಪೈಕಿ 6-7 ಜನ ಭಾರತೀಯ ವಿದ್ಯಾರ್ಥಿಗಳಿರುತ್ತಾರೆ. ಪ್ರತಿ ಭಾರತೀಯ ವಿದ್ಯಾರ್ಥಿಗಳ ರಕ್ತದಲ್ಲಿಯೇ ಬುದ್ದಿವಂತಿಕೆ ಇದೆ. ಜಗತ್ತಿನಲ್ಲಿ ಅತ್ಯಂತ ಬುದ್ದಿವಂತರು ಭಾರತೀಯರು ಎಂದು ಹೇಳಿದರು.

ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕರು ಸರಿ ಇಲ್ಲ. ಅವರು ಹೇಳುವ  ಪುಸ್ತಕದಲ್ಲಿರುವ ಸಿಲಬಸ್ ನಲ್ಲಿ ಜೀವ ಇಲ್ಲ. ಸ್ಫೂರ್ತಿಯುತವಾಗಿಲ್ಲ. ಅದನ್ನು ಓದಿದರೆ ವೈರಾಗ್ಯ ಬರುವಂತಿದೆ. ಇದನ್ನು ಹೇಳುವವರಿಲ್ಲವಾಗಿದೆ. ಭಾರತೀಯ ಶಿಕ್ಷಣ ಪದ್ಥತಿ ಎಂಬ ಶನಿ ಈ ದೇಶವನ್ನು  ಕಿತ್ತು ತಿನ್ನುತ್ತಿದೆ. ಪಾಕಿಸ್ತಾನ, ಚೀನಾ ನಮ್ಮ ಶತ್ರುವಲ್ಲ. ನಮ್ಮ ದೇಶದ ಶತ್ರುಗಳು ಈ ದೇಶದ ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕರು, ಶಿಕ್ಷಣ ಪದ್ಥತಿ ಹಾಗೂ ಹೆತ್ತವರೇ ಈ ದೇಶದ ಶತ್ರುಗಳು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡುತ್ತಾ, ಸರ್ಕಾರಿ ಶಾಲೆಗಳ ಮೇಲೆ ಜನರಲ್ಲಿ ವಿಶ್ವಾಸ ಹೆಚ್ಚಿಸುವ ಕೆಲಸವನ್ನು ಪ್ರಸ್ತುತ ದಿನಗಳಲ್ಲಿ ರಾಜ್ಯ ಸರ್ಕಾರದಿಂದ ಮಾಡಲಾಗುತ್ತಿದೆ ಎಂದು ಹೇಳಿದರು.

76 ಸಾವಿರ ಶಾಲಾ-ಕಾಲೇಜುಗಳ, 1.8 ಕೋಟಿ ಮಕ್ಕಳ ಸೇವೆ ಮಾಡುವ ಭಾಗ್ಯ ನನಗೊದಗಿ ಬಂದಿದೆ. ಶೇ.30ರಷ್ಟು ಸರ್ಕಾರಿ ನೌಕರರು ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದ ಅವರು, ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದ್ದೇವೆ ಎಂದರು.

ಅಜೀಂ ಪ್ರೇಂ ಜೀ ಫೌಂಡೇಶನ್‌  ಮಕ್ಕಳ  ಪೌಷ್ಟಿಕತೆ ಹೆಚ್ಚಿಸಲು 1500 ಕೋಟಿ ರೂ. ನೀಡಿದ್ದಾರೆ. ಏಷ್ಯನ್ ಡೆವಲಪ್‌ಮೆಂಟ್‌ ಬ್ಯಾಂಕ್ 2 ಸಾವಿರ ಕೋಟಿ  ರೂ. ಆರ್ಥಿಕ ಸಹಾಯ ಮಾಡಿದೆ. 46 ಸಾವಿರ ಶಾಲೆಗಳಲ್ಲಿ 39 ಸಾವಿರ ಹಳೇ ವಿದ್ಯಾರ್ಥಿಗಳ ಸಂಘ, 36 ಸಾವಿರ ವಾಟ್ಸಾಪ್‌ ಗ್ರೂಪ್ ಮಾಡಲಾಗಿದೆ. ಹಿರಿಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಗಳಿಗೆ ಸಾಕಷ್ಟು ದೇಣಿಗೆ ಕೊಡುತ್ತಿದ್ದಾರೆ ಎಂದು ತಿಳಿಸಿದರು. ಮಕ್ಕಳನ್ನು ಶಾಲೆಗೆ ದಾಖಲಿಸುವುದಷ್ಟೇ ಮುಖ್ಯವಲ್ಲ. ಪ್ರತಿ ನಿತ್ಯ ಶಾಲೆಗೆ ಮಕ್ಕಳನ್ನು ಕಳುಹಿಸಿ ಎಂದು ಮನವಿ ಮಾಡಿದರು.

ಚಿತ್ರ ನಟ ಡಾಲಿ ಧನಂಜಯ ಮಾತನಾಡಿ, ಶಿಕ್ಷಣವೆಂದರೆ ಕೇವಲ ಶಾಲೆಯಲ್ಲಿ ಸಿಗುವುದಷ್ಟೇ ಶಿಕ್ಷಣವಲ್ಲ.  ಅದರಿಂದಾಚೆಯೂ ಒಂದು ಶಿಕ್ಷಣ ಇದೆ, ಅದೇ ಸಂಸ್ಕೃತಿ ಎಂದು ಹೇಳಿದರು.

ಶರಣ ಎಂಬ ಪದದ ಅರ್ಥವೇ ಸಮಾನತೆ. ಇದೆಲ್ಲವೂ ನಮ್ಮ ಸಂಸ್ಕೃತಿ.  ಅಂತಹ ಸಂಸ್ಕೃತಿಯನ್ನು ಶಿವಮೂರ್ತಿ ಶ್ರೀಗಳು ಹೇಳಿ ಕೊಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸುಂದರ ಬದುಕು ಕಟ್ಟಿಕೊಳ್ಳೋಣ ಎಂದು ಹೇಳಿದರು.

ಯಾವುದೇ ಕೆಲಸ ಮಾಡಿದರೂ ಶೇ.100ರಷ್ಟು ಎಫರ್ಟ್‌ ಹಾಕಿದರೆ ಯಶಸ್ಸು ಸಿಗುತ್ತದೆ. ಏನನನ್ನಾದರೂ ಸಾಧಿಸಲು ಸಾಧ್ಯವಿದೆ ಎಂದು ಯುವಜನತೆಗೆ ಕಿವಿ ಮಾತು ಹೇಳಿದರು.

ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಮಾತನಾಡುತ್ತಾ, ಮಕ್ಕಳನ್ನು ಭಾವನೆಯಿಂದ ದೂರ ಮಾಡಿರುವುದರಿಂದ  ಭಾಷೆಗೆ ತೊಡಕಾಗಿದೆ. ಭಾವನೆಯಿಂದ ಭಾಷೆ ಬರಬೇಕಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಮಕ್ಕಳಿಗೆ ಶಿಕ್ಷಣದ ಜೊತೆಗೆ ಉದ್ಯೋಗವನ್ನೂ ಕೊಡಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹೆತ್ತವರನ್ನು ವೃದ್ಧಾಶ್ರಮಕ್ಕೆ ಕಳುಹಿಸುವುದು ಶಿಕ್ಷಣವಲ್ಲ. ಕೇವಲ ಸಾಕ್ಷರರನ್ನಾಗಿ ಮಾಡುವುದು ಶಿಕ್ಷಣವಲ್ಲ. ಸಂಸ್ಕಾರಯುತರನ್ನಾಗಿಯೂ ಮಾಡಬೇಕಿದೆ. ಶಿಕ್ಷಣ, ಕಲೆ, ಸಂಸ್ಕೃತಿ ಇರದಿದ್ದರೆ ಮನುಷ್ಯನ ಜೀವನವನ್ನು ಊಹಿಸಲೂ ಸಾಧ್ಯವಿರುತ್ತಿರಲಿಲ್ಲ ಎಂದರು. ಭರಮಸಾಗರಕ್ಕೆ ಈ ಕಾಲಕ್ಕೆ ನೀರು ತರಿಸಿದ ಭಗೀರಥ ತರಳಬಾಳು ಸ್ವಾಮೀಜಿ ಎಂದು ಶ್ಲ್ಯಾಘಿಸಿದರು.

ದಾವಣಗೆರೆ ವಿವಿ ಉಪ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಮಾತನಾಡಿ,  ಮಠ-ಮಾನ್ಯಗಳು ದೇಶದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿವೆ. ಮಠಗಳು ಇರದೇ ಇದ್ದ ಪಕ್ಷದಲ್ಲಿ ನಮ್ಮ ವಯಸ್ಸಿನ ಜನರು ಶಿಕ್ಷಣ ಪಡೆಯುವುದೇ ಕಷ್ಟವಾಗುತ್ತಿತ್ತು. ಹೀಗಾಗಿ ದೇಶದಲ್ಲಿರುವ ಎಲ್ಲಾ ಮಠ ಮಾನ್ಯಗಳನ್ನು ಸ್ಮರಿಸಬೇಕಿದೆ ಎಂದರು.

ಆಧುನಿಕ ತಂತ್ರಜ್ಞಾನ, ಕೃತಕ ಬುದ್ಧಿ ಮತ್ತೆ ಮಕ್ಕಳಲ್ಲಿನ ವಿಚಾರ ಮಾಡುವ ಶಕ್ತಿಯನ್ನು ಹಾಳು ಮಾಡುತ್ತವೆ. ಈ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ತಂತ್ರಜ್ಞಾನದ ಮೇಲೆ ಅವಲಂಬಿತರಾಗಬೇಕೇ? ಎಂಬ ಬಗ್ಗೆ ಚಿಂತಿಸಬೇಕಿದೆ ಎಂದರು.

ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ,  ಕೆರೆ ಕಟ್ಟೆಗಳನ್ನು ತುಂಬಿಸಿ ರೈತರು ಸುಖವಾಗಿರುವ ಂತೆವ್ಯವಸ್ಥೆ ಮಾಡಿದ್ದೀರಿ. ನಿಮ್ಮ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ ಎಂದು ಹೇಳಿದರು.

ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್ ಮಾತನಾಡಿ, ತರಳಬಾಳು ಹುಣ್ಣಿಮೆ ಶುಭ ಹಾರೈಸಿದರು. ಶಾಸಕ ಎಸ್. ಬಸವಂತಪ್ಪ, ವಿಧಾನ ಪರಿಷತ್ ಸದಸ್ಯ ಪ್ರವೀಣ್ ಕುಮಾರ್, ಮಾಜಿ ಸಚಿವ ಹೆಚ್.ಆಂಜನೇಯ, ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್, ಗಾಯಕಿ ಕವಿತಾ ವೆಂಕಟರಾಜು ಉಡುಪ, ಗಣೇಶ್ ಎನ್.,  ರೈತ ಸಂಘದ ರಾಜ್ಯಾಧ್ಯಕ್ಷ ಹಾಗೂ ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಇತರರು ಉಪಸ್ಥಿತರಿದ್ದರು. ಚಿತ್ರದುರ್ಗ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ತಿಪ್ಪೇಸ್ವಾಮಿ ಸ್ವಾಗತಿಸಿದರು.

ಗಣೇಶ್ ಎನ್. ರಾಯಭಾಗಿ ಹಾಗೂ ಸಂಗಡಿಗರು ವಚನಗೀತೆ ಹಾಡಿದರು. ಸಿರಿಗೆರೆಯ ತರಳಬಾಳು ಕಲಾ ಸಂಘದವರು ಮಲ್ಲಿ ಹಗ್ಗ ಪ್ರದರ್ಶಿಸಿದರು. ಬಿ. ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಜನಪದ ನೃತ್ಯ ಪ್ರದರ್ಶಿಸಿದರು.

error: Content is protected !!