ಪ್ರತಿಧ್ವನಿಸಿದ ವಿಶ್ವ ಸಮ್ಮೇಳನ, ರಾಜಧಾನಿ ಕೂಗು

ಪ್ರತಿಧ್ವನಿಸಿದ ವಿಶ್ವ ಸಮ್ಮೇಳನ, ರಾಜಧಾನಿ ಕೂಗು

11ನೇ ತಾಲ್ಲೂಕು ಕನ್ನಡ ಸಮ್ಮೇಳನ: ಸದನದಲ್ಲಿ ದನಿ ಎತ್ತುವೆ ಎಂದ ಶಾಸಕ ಬಸವಂತಪ್ಪ

ದಾವಣಗೆರೆ, ಫೆ.1- ಮಧ್ಯ ಕರ್ನಾಟಕದಲ್ಲಿ ರುವ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಬೇಕು, ದಾವಣಗೆರೆ ರಾಜಧಾನಿಯಾಗಬೇಕು ಎಂಬ ಕೂಗು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮತ್ತೆ ಪ್ರತಿಧ್ವನಿಸಿತು.

ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೀರಿ. ಬರುವ ಅಧಿವೇಶನದಲ್ಲಿ ಈ ಬಗ್ಗೆ ನಾನೂ ದನಿ ಎತ್ತುತ್ತೇನೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ನಡೆದ 11ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ  ಮಾತನಾಡಿದ ಅವರು, ಕನ್ನಡ ಉಳಿದಿರುವುದೇ ದಾವಣಗೆರೆ ಜಿಲ್ಲೆಯಿಂದ ಎಂದರೆ ತಪ್ಪಾಗಲಾರದು. ಪರಿಶುದ್ಧವಾಗಿ ಕನ್ನಡ ಮಾತನಾಡುವ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆದರೆ ಅದಕ್ಕೊಂದು ಅರ್ಥ ಬರುತ್ತದೆ ಎಂದರು.

ಜಿಲ್ಲೆಯಲ್ಲಿ ಹೊರ ರಾಜ್ಯದ ಕೈಗಾರಿಕೆಗಳು ಸ್ಥಾಪನೆಯಾಗುತ್ತವೆ. ಅವರಿಗೆ ಜಾಗ, ನೀರು ಸೇರಿದಂತೆ ಎಲ್ಲಾ ಸವಲತ್ತು ನಾವು ನೀಡುತ್ತೇವೆ. ಆದರೆ ನಮ್ಮವರಿಗೇ ಅಲ್ಲಿ ಉದ್ಯೋಗ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸಿ ಕನ್ನಡ ಸಾಹಿತ್ಯ ಪರಿಷತ್ತು ನಿರ್ಣಯ ತೆಗೆದುಕೊಳ್ಳಬೇಕು ಎಂದು ಶಾಸಕರು ಸಲಹೆ ನೀಡಿದರು.

ಸಮಾರಂಭ ಉದ್ಘಾಟಿಸಿದ ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಮಾತ ನಾಡುತ್ತಾ, ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಮ್ಮೇಳನಕ್ಕೆ ಸರ್ಕಾರ ಕೋಟ್ಯಾಂತರ ರೂಪಾಯಿ ಅನುದಾನ  ನೀಡಿತ್ತು. ಅದೇ ರೀತಿ  ಜಿಲ್ಲೆ ಹಾಗೂ ತಾಲ್ಲೂಕು ಸಾಹಿತ್ಯ ಸಮ್ಮೇಳನಕ್ಕೂ ಸರ್ಕಾರ ಅನುದಾನ ನೀಡಬೇಕಿದೆ ಎಂದು ಹೇಳಿದರು.

ದಾವಣಗೆರೆಯಲ್ಲಿ ಲೇಖಕರು, ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪುಸ್ತಕ ಓದುವುದರಿಂದ ಪರಿಪೂರ್ಣತೆ ಬರುತ್ತದೆ ಎಂದರು. ದಾವಣಗೆರೆಯಲ್ಲಿ ವಿಶ್ವ ಕನ್ನಡ  ಸಮ್ಮೇಳನ ನಡೆಯಬೇಕೆಂದು ಎಲ್ಲರ ಒತ್ತಾಯವಾಗಿದ್ದು, ಅವಕಾಶ ಸಿಕ್ಕರೆ ಅದ್ಧೂರಿಯಾಗಿ ಮಾಡೋಣ ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಸುಮತಿ ಜಯಪ್ಪ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಹಿಂದಿನ ಹತ್ತು ಸಮ್ಮೇಳನಗಳನ್ನು ಹಳ್ಳಿಗಳಲ್ಲಿ ಆಚರಿಸಲಾಗಿತ್ತು. ಆದರೆ ಈ ಬಾರಿ ಅನಿವಾರ್ಯ ಕಾರಣಗಳಿಂದ ಕುವೆಂಪು ಭವನದಲ್ಲಿ ಆಚರಿಸಲಾಗುತ್ತಿದೆ ಎಂದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ  ಬಿ.ಟಿ. ಜಾಹ್ನವಿ ಕನ್ನಡ ಧ್ವಜವನ್ನು ಸಮ್ಮೇಳನಾಧ್ಯಕ್ಷರಾದ ಶಿವಾನಂದ ಗುರೂಜಿ ಅವರಿಗೆ ಹಸ್ತಾಂತರಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ಆಶಯ ನುಡಿಗಳನ್ನಾಡಿದರು.  ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಶಿವಶಂಕರ್, ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಿಗಳಿ ಪ್ರಕಾಶ್, ಗೌರವ ಕಾರ್ಯದರ್ಶಿ ಬಿ.ದಿಳ್ಯೆಪ್ಪ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಒಡೆನಪುರ, ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ  ಹೆಚ್.ಎಸ್. ಮಂಜುನಾಥ್ ಇತರರು ಉಪಸ್ಥಿತರಿದ್ದರು.

ವಿನೂತನ ಮಹಿಳಾ ಸಮಾಜದ ಸದಸ್ಯರು ನಾಡಗೀತೆ ಹಾಡಿದರು. ಕು.ತೇಜಶ್ರೀ ಕೆ.ಎಸ್. ಮತ್ತು ಗೌರಿಶ್ರೀ ಎಂ.ಎಸ್. ಸ್ವಾಗತ ನೃತ್ಯ ನಡೆಸಿಕೊಟ್ಟರು. ಕೆ.ಸಿ. ಲಿಂಗರಾಜ್ ಸ್ವಾಗತಿಸಿದರು. ದಾಗಿನಕಟ್ಟೆ ಪರಮೇಶ್ವರಪ್ಪ ನಿರೂಪಿಸಿದರು.

ಇದೇ ಸಂದರ್ಭದಲ್ಲಿ `ಬಸವ ಧರ್ಮದ ಇಷ್ಟಲಿಂಗ ತತ್ವ’ (ಎರಡನೇ ಮುದ್ರಣ) `ಅಂತರ್ಜಾಲ’ (ಕವನ ಸಂಕಲನ) ಏಳನೇ ಕೃತಿ, ನನ್ನ  `ಬಾಹತ್ತರ’ (ಕವನ ಸಂಕಲನ, ಹದಿನೈದನೇ ಕೃತಿ) ಲೋಕಾರ್ಪಣೆಗೊಳಿಸಲಾಯಿತು.

error: Content is protected !!