ಕಾಯಕ ಯೋಗಿ, ಪರಿಶುದ್ದ ನಡೆಯ ವಚನಕಾರ ಮಡಿವಾಳ ಮಾಚಿದೇವ

ಕಾಯಕ ಯೋಗಿ, ಪರಿಶುದ್ದ ನಡೆಯ ವಚನಕಾರ ಮಡಿವಾಳ ಮಾಚಿದೇವ

ಶರಣ ಮಡಿವಾಳ ಮಾಚಿದೇವ ಜಯಂತಿಯಲ್ಲಿ ಶಾಸಕ ಬಸವಂತಪ್ಪ

 ದಾವಣಗೆರೆ, ಫೆ.1-ಬಟ್ಟೆ ಸ್ವಚ್ಚಗೊಳಿಸುವ ಕಾಯಕವಲ್ಲದೇ ಸಮಾಜದ ಸ್ವಚ್ಚತೆಯನ್ನು ಕೈಗೊಂಡ ಪ್ರಮುಖ ವಚನಕಾರರಲ್ಲಿ ಮಡಿವಾಳ ಮಾಚಿದೇವರ ಕಾಯಕ ಸ್ಮರಣೀಯವಾಗಿದೆ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಶರಣ ಮಡಿವಾಳ ಮಾಚಿದೇವ ಜಯಂತಿಯಲ್ಲಿ  ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. 

ಅನುಭವ ಮಂಟಪದಲ್ಲಿ ಮಾಚಿದೇವರ ಘರ್ಜನೆಯು ತುಂಬಾ ಶಕ್ತಿಯುತವಾಗಿತ್ತು. ಮೇರು ವಚನಕಾರರಲ್ಲಿ ಮಾಚಿದೇವರು ಸಹ ತಮ್ಮದೇ ಛಾಪು ಮೂಡಿಸಿದ್ದಾರೆ. 12 ನೇ ಶತಮಾನದಲ್ಲಿ ಮಹಿಳೆ ಹಾಗೂ ಮಕ್ಕಳ ಸ್ಥಿತಿ ಶೋಚನೀಯವಾಗಿದ್ದು, ಮಹಿಳೆಯರು, ಅಸಹಾಯಕರು ಮತ್ತು ಅಶಕ್ತರಾಗಿದ್ದರು. ಇಂತಹ ಕಾಲದಲ್ಲಿ ಸಮಾನತೆ ಸಾರುವ ವಚನಗಳು ತುಂಬಾ ಪ್ರಭಾವ ಬೀರಿದ್ದವು ಎಂದರು. 

ಮಡಿವಾಳ ಮಾಚಿದೇವರು ಕಲ್ಯಾಣ ಕ್ರಾಂತಿಯ ಮುಂಚೂಣಿಯ ಶರಣರಾಗಿ, ಅನೇಕ ವಚನಗಳ ಮೂಲಕ ಸಮಾಜದಲ್ಲಿ ಬೇರೂರಿದ್ದ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಶ್ರಮಿಸಿದವರು. ಮಡಿವಾಳ ಮಾಚಿದೇವ ಸಮಾಜ ಇಂದಿಗೂ ಸಾಕಷ್ಟು ಹಿಂದುಳಿ ದಿದ್ದು ಇವರನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಮಾತನಾಡಿ, ನಮ್ಮ ಸಂವಿಧಾನದ ಬುನಾದಿ ವಚನಕಾರರು, ನೌಕರಿ ಮತ್ತು ಕಾಯಕಗಳೆರಡು ಪರಸ್ಪರ ಭಿನ್ನವಾಗಿದ್ದು, ನಾವು ಮಾಡುವ ಕೆಲಸದಲ್ಲೇ ದೇವರನ್ನು ಕಂಡಾಗ ಆ ಕೆಲಸ ಕಾಯಕವಾಗುತ್ತದೆ. ಮಹಾತ್ಮರ ಕಾಯಕ ಮತ್ತು ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದಾಗ ನಾವು ಆಚರಿಸುವ ಜಯಂತಿಗಳು ಅರ್ಥಪೂರ್ಣವಾಗುತ್ತವೆ ಎಂದರು.

 ಶರಣರ ಬದುಕನ್ನು ಅರಿತು, ನಮ್ಮನ್ನು ನಾವು ಒಂದು ಜಾತಿಗೆ ಸೀಮಿತಗೊಳಿಸಿಕೊಳ್ಳದೆ ನಾವೆಲ್ಲರೂ ಒಂದೇ ಎಂಬ ಮನೋಭಾವ ಮೂಡಿಸಿಕೊಳ್ಳಬೇಕು ಎಂದರು.

ಪಾಲಿಕೆ ಮೇಯರ್ ಕೆ. ಚಮನ್ ಸಾಬ್, ದೂಡಾ ಅಧ್ಯಕ್ಷ  ದಿನೇಶ್ ಕೆ. ಶೆಟ್ಟಿ, ಪಾಲಿಕೆ ಸದಸ್ಯ ಮಂಜುನಾಥ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಮಡಿವಾಳ ಸಮಾಜದ ಅಧ್ಯಕ್ಷ ಆವರಗೆರೆ ಉಮೇಶ್, ನಾಗೇಂದ್ರಪ್ಪ, ಮುಖಂಡರಾದ ಓಂಕಾರಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!