ದಾವಣಗೆರೆ, ಜ. 28- ನಗರದ ಎಂ. ಸಿ. ಕಾಲೋನಿಯಲ್ಲಿ ನಾಗರಿಕ ಹಿತರಕ್ಷಣಾ ಸಮಿತಿಯ ಮಾಸಿಕ ಸಭೆಯು ಸೋಮವಾರ ಪಾಲಿಕೆ ಮೇಯರ್ ಕೆ. ಚಮನ್ ಸಾಬ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಜಲಸಿರಿ, ಕಂದಾಯ, ಪಾರ್ಕ್, ಇ- ಸ್ವತ್ತು ಸೇರಿದಂತೆ ಹಲವು ವಿಚಾರಗಳ ಕುರಿತಂತೆ ಚರ್ಚೆ ನಡೆಯಿತು.
ಈ ವೇಳೆ ಮಾತನಾಡಿದ ಕೆ. ಚಮನ್ ಸಾಬ್ ಅವರು, ಶೀಘ್ರದಲ್ಲಿಯೇ ಎಂಸಿಸಿ ಬಿ ಬ್ಲಾಕ್ನ ಈಜುಕೊಳದ ಆವರಣದಲ್ಲಿ ಕಂದಾಯ ವಸೂಲಾತಿ, ಇ-ಸ್ವತ್ತು ನೀಡುವ ಹಾಗೂ ಜಲಸಿರಿ ಯೋಜನೆಯ ಸಾಧಕ – ಬಾಧಕಗಳ ಕುರಿತಂತೆ ಸಮಸ್ಯೆ ತಿಳಿದುಕೊಳ್ಳಲು ಹಾಗೂ ಪರಿಹರಿಸಲು ಒಂದು ದಿನ ಆಂದೋಲನ ಆಯೋಜಿಸಲಾಗುವುದು ಎಂದು ತಿಳಿಸಿದರು.
ಎಂಸಿಸಿ ಬಿ ಬ್ಲಾಕ್, ಎಂಸಿಸಿ ಎ ಬ್ಲಾಕ್ ಸೇರಿದಂತೆ ಎಲ್ಲಾ ವಾರ್ಡ್ಗಳ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ. ಎಂಸಿಸಿ ಬಿ ಬ್ಲಾಕ್ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಮಂಜುನಾಥ್ ಗಡಿಗುಡಾಳ್ ಮಾತನಾಡಿ, ವಾರ್ಡ್ ನ ಜನರು ನನ್ನನ್ನು ಮನೆ ಮಗನಂತೆ ನೋಡುತ್ತಾರೆ. ಎಲ್ಲೇ ಹೋದರೂ ಪ್ರೀತಿ, ವಿಶ್ವಾಸ ತೋರುತ್ತಾರೆ. ಅವರು ತೋರಿಸಿದ ಪ್ರೀತಿ, ವಿಶ್ವಾಸ ಹಾಗೂ ಕೊಟ್ಟ ಗೌರವದಿಂದಲೇ ಇಷ್ಟೊಂದು ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗಿದೆ. ಅವರೊಟ್ಟಿಗಿನ ಸಂಪರ್ಕ, ಸಂಬಂಧ ಯಾವಾಗಲೂ ಇದೇ ರೀತಿಯಲ್ಲಿ ಮುಂದುವರೆಯುತ್ತದೆ.
ಮನೆ ಬಾಗಿಲಿಗೆ ನಿಮ್ಮ ಸೇವಕ ಅಭಿಯಾನ ನಡೆಸಿ ಜನರ ಸಮಸ್ಯೆ ಆಲಿಸಿ ಪರಿಹರಿಸುವ ಕೆಲಸ ಮಾಡಿದ್ದೇನೆ. ರಾಜ್ಯ ಮಟ್ಟದಲ್ಲಿಯೇ ಇದು ಪ್ರಥಮ ಅಭಿಯಾನ. ಇದು ಯಶಸ್ವಿಯಾಗಲು ವಾರ್ಡ್ನ ಜನರೇ ಕಾರಣ ಎಂದು ಸಂತಸ ವ್ಯಕ್ತಪಡಿಸಿದರು.
ಎಂ. ಸಿ. ಕಾಲೋನಿಯಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಂದನೂರು ಮುಪ್ಪಣ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಮಹಾಪೌರ ಕೆ. ಚಮನ್ ಸಾಬ್, ಪಾಲಿಕೆ ಸದಸ್ಯ ಮಂಜುನಾಥ್ ಗಡಿಗುಡಾಳ್, ಉಪಮೇಯರ್ ಸೋಗಿ ಶಾಂತಕುಮಾರ್ ಅವರುಗಳನ್ನು ಎಂ.ಸಿ. ಕಾಲೋನಿ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಸನ್ಮಾನಿಸಲಾಯಿತು.