ಅಂಬಿಗರ ಚೌಡಯ್ಯ ವಿಚಾರಧಾರೆ ಮನುಕುಲಕ್ಕೆ ದಾರಿದೀಪ

ಅಂಬಿಗರ ಚೌಡಯ್ಯ ವಿಚಾರಧಾರೆ ಮನುಕುಲಕ್ಕೆ ದಾರಿದೀಪ

ಹರಿಹರ ಶಾಸಕ ಬಿ.ಪಿ. ಹರೀಶ್

ಹರಿಹರ,ಜ.22- ನಿಜ ಶರಣ ಅಂಬಿಗರ ಚೌಡಯ್ಯನವರ ವಿಚಾರ ಧಾರೆಗಳು ಒಂದು ಜಾತಿಗೆ ಮಾತ್ರ ಸೀಮಿತವಾಗಿರದೇ ಮನು ಕುಲಕ್ಕೇ ಮಾರ್ಗದರ್ಶನ ಮಾಡತಕ್ಕಂತಹ ವಿಚಾರಗಳಾಗಿದ್ದಾವೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ನಡೆದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ನವರ 905ನೇ ಜಯಂತಿ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. 

ಬಸವಣ್ಣನವರ ಕಾಲಘಟ್ಟದಲ್ಲಿ ಅಂಬಿಗರ ಚೌಡಯ್ಯ ಸೇರಿದಂತೆ ಬಹಳಷ್ಟು ಜ್ಞಾನಿಗಳು ಅಧ್ಯಾತ್ಮಿಕತೆಯ, ಅನೇಕ ದಾರ್ಶನಿಕರು ಮಾನವ ಕುಲದ ಹಾಗೂ ಸಮಾಜದ ಒಳಿತಿಗಾಗಿ ಹೆಚ್ಚು ಕೊಡುಗೆ ನೀಡಿರುವುದು ಶ್ಲ್ಯಾಘನೀಯ ಕಾರ್ಯ ಎಂದು ಹೇಳಿದರು.

ಹರಿಹರ ತಾಲ್ಲೂಕಿನಲ್ಲಿ ಅಂಬಿಗರ ಚೌಡಯ್ಯನವರ ಸಮಾಜದವರು ಗಣನೀಯವಾಗಿ ಇದ್ದಾರೆ, ಎಷ್ಟೇ ಹಣ, ಅಂತಸ್ತು, ಆಸ್ತಿ ಗಳಿಸಿದರೂ ಸಹ ಶೈಕ್ಷಣಿಕವಾಗಿ ಮುಂದೆ ಬಂದಾಗ ಮಾತ್ರ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಬಹುದು. ತಮ್ಮ ಅಭಿವೃದ್ಧಿ ಜೊತೆಗೆ ಸಮಾಜ ಹಾಗೂ ಮನೆತನದ ಅಭಿವೃದ್ಧಿ ಕೂಡ ಸಹಕಾರ ಆಗುವಂತೆ ಆಗುತ್ತದೆ ಎಂದು ಹೇಳಿದರು.

ಅಂಬಿಗರ ಪೋಷಕರು ತಮ್ಮ ಮಕ್ಕಳಿಗೆ ಶೇ. ನೂರರಷ್ಟು ವಿದ್ಯೆ ನೀಡಿದರೆ, ಮುಂದೆ ಆ ಮಗುವಿಗೆ ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಪರಂಪರೆಯ ವಿಚಾರಗಳನ್ನು ತಿಳಿದುಕೊಳ್ಳಲು ಶಕ್ತಿ, ಸಾಮರ್ಥ್ಯ ಬರುತ್ತದೆ ಎಂದು ಹೇಳಿದರು.

ಶೇ. 90 ರಷ್ಟು ಮತಗಳನ್ನು ನನಗೆ ಹಾಕಿ ನನ್ನ ಗೆಲುವಿಗೆ ಅಂಬಿಗರ ಸಮಾಜದವರು ಕಾರಣರಾಗಿದ್ದಾರೆ. ಹಾಗಾಗಿ ನನಗೆ ವಿರೋಧ ಹಾಗೂ ಟೀಕೆ ಮಾಡಿದ್ದರೂ ಸಹ ಅವರ ಕೆಲಸವನ್ನು ಮಾಡಿರುವೆ. ಅದರಲ್ಲೂ ಗುತ್ತೂರು ಗ್ರಾಮದಲ್ಲಿ ನನಗೆ ಪ್ರತಿ ಸಾರಿಯೂ ಹೆಚ್ಚು ಮತಗಳನ್ನು ಹಾಕಿದ್ದಾರೆ ಎಂದು ಹೇಳಿದರು.

 ನಿಜ ಶರಣ ಅಂಬಿಗರ ಚೌಡಯ್ಯನವರ ಸಮಾಜದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬಸವರಾಜ್ ಹಲಸಬಾಳು ಮಾತನಾಡಿ, ನಿಜ ಶರಣ ಅಂಬಿಗರ ಚೌಡಯ್ಯನವರು ಒಂದು ಕುಲಕ್ಕೆ ಸೀಮಿತವಾಗಿ ಇರದೇ, ಎಲ್ಲಾ ವರ್ಗದವರ ಒಳಿತಿಗಾಗಿ ಸುಮಾರು ವಚನಗಳನ್ನು ರಚಿಸಿ, ಆ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕಾರ್ಯವನ್ನು ಮಾಡಿ,  ಸಮಾಜದಲ್ಲಿನ ಜನರು ಸಾಮರಸ್ಯದಿಂದ ಬದುಕನ್ನು ಕಟ್ಟಿಕೊಳ್ಳುವಂತೆ  ಮಾಡಿದ್ದಾರೆ ಎಂದರು.

 ನಿಜಶರಣ ಅಂಬಿಗರ ಚೌಡಯ್ಯನವರ ಹೆಸರಿನಲ್ಲಿ ಗುತ್ತೂರು ಗ್ರಾಮದಲ್ಲಿ ಸಮುದಾಯ ಭವನವನ್ನು ನಿರ್ಮಾಣ ಮಾಡಲಾಗಿದೆ. ಶಾಸಕ ಬಿ.ಪಿ. ಹರೀಶ್ ರವರು ಹಿಂದೆ ಶಾಸಕರಾಗಿದ್ದ ಸಮಯದಲ್ಲಿ ಸಹಕಾರ ನೀಡಿದ್ದರು. ಆದರೆ ಆ ಕಟ್ಟಡ ಬಹಳಷ್ಟು ಸೋರುತ್ತಿದ್ದು, ಅದರ ದುರಸ್ತಿಗೆ ಮತ್ತು ಅನ್ನ ದಾಸೋಹ ಭವನ  ನಿರ್ಮಾಣ ಮಾಡಬೇಕಾಗಿದ್ದರಿಂದ 10 ಲಕ್ಷ ರೂ. ಅನುದಾನ ನೀಡುವಂತೆ ಶಾಸಕರಲ್ಲಿ ಮನವಿ ಮಾಡಿಕೊಂಡರು.

ತಹಶೀಲ್ದಾರ್ ಗುರುಬಸವರಾಜ್, ತಾಲ್ಲೂಕು ನಿಜಶರಣ ಅಂಬಿಗರ ಚೌಡಯ್ಯನವರ ಸಮಾಜದ ಅಧ್ಯಕ್ಷ ಪೇಟೆ ಬಸವರಾಜಪ್ಪ ಇತರರು ಮಾತನಾಡಿದರು.

ಈ ಸಂದರ್ಭದಲ್ಲಿ ನಗರಸಭೆ ಎಇಇ ವಿನಯ್ ಕುಮಾರ್, ಅಂಬಿಗರ ಸಮಾಜದ ಉಪಾಧ್ಯಕ್ಷ ಗರಡಿ ಮನೆ ಬಸವರಾಜಪ್ಪ, ನಿವೃತ್ತ  ಶಿಕ್ಷಕ  ಅಶೋಕ, ಕೆಂಚನಹಳ್ಳಿ ಮಹಾಂತೇಶಪ್ಪ, ವಾಸುದೇವ್, ಕುಂಬಳೂರು ದುರುಗಪ್ಪ, ಬೆಳ್ಳೂಡಿ ಪುನೀತ್ ಮತ್ತಿತರರು ಹಾಜರಿದ್ದರು.

error: Content is protected !!