ಕೊನೆ ಭಾಗದ ಜಮೀನಿಗೆ ನೀರು ತಲುಪಿಸುವಂತೆ ರೈತರ ಆಗ್ರಹ

ಕೊನೆ ಭಾಗದ ಜಮೀನಿಗೆ ನೀರು ತಲುಪಿಸುವಂತೆ ರೈತರ ಆಗ್ರಹ

ಶೀಘ್ರದಲ್ಲೇ ನೀರಾವರಿ ಇಲಾಖೆ ಅಧಿಕಾರಿಗಳ ಸಭೆ ಕರೆದು ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದ ಅಪರ ಜಿಲ್ಲಾಧಿಕಾರಿ ಲೋಕೇಶ್

ದಾವಣಗೆರೆ, ಜ.22- ನಾಲೆಯ ನೀರು ನಿರ್ವಹಣೆ ಮಾಡುವ ಸೌಡಿಗಳ ಬಾಕಿ ವೇತನವನ್ನು ತಕ್ಷಣವೇ ಬಿಡುಗಡೆಗೊಳಿಸಿ, ಕೊನೆ ಭಾಗದ ರೈತರಿಗೆ ನೀರು ತಲುಪಿಸುವಂತೆ ಆಗ್ರಹಿಸಿ ರೈತರ ಒಕ್ಕೂಟವು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಈ ವೇಳೆ ಮಾತನಾಡಿದ ರೈತ ಮುಖಂಡರು, ಭದ್ರಾ ಡ್ಯಾಂನಿಂದ ಬೇಸಿಗೆ ಹಂಗಾಮಿಗೆ ನೀರು ಹರಿಸಲು ಪ್ರಾರಂಭಿಸಿ ಇಂದಿಗೆ 12 ದಿನಗಳೇ ಕಳೆದರೂ ತ್ಯಾವಣಿಗೆ ಉಪವಿಭಾಗದ ಕಾಲುವೆಗಳಿಗೆ ನೀರು ಬಂದಿಲ್ಲ. ಇದರಿಂದ ಬೇಸಿಗೆಯಲ್ಲಿ ಭತ್ತದ ಬೆಳೆ ಬೆಳೆಗಾಗಿ ಸಸಿಮಡಿ ಮಾಡಲು, ಜಮೀನು ಉಳಿಮೆ ಮಾಡಲು ಹಾಗೂ ಬೀಜ ಉಗ್ಗುವ ಮೂಲಕ ನೇರ ಬಿತ್ತನೆ ಮಾಡುವ ರೈತರಿಗೆ ಅನಾನುಕೂಲವಾಗುತ್ತಿದೆ ಎಂದು ದೂರಿದರು.

ಈ ಬಗ್ಗೆ ನೀರಾವರಿ ಇಲಾಖೆಯ ಇಂಜಿನಿಯರ್‌ಗಳನ್ನು ವಿಚಾರಿಸಿದರೆ, `ನೀರು ನಿರ್ವಹಣೆ ಮಾಡುವ ಸೌಡಿಗಳು ಕೆಲಸಕ್ಕೆ ಬಾರದೆ ಮುಷ್ಕರ ನಡೆಸುತ್ತಿದ್ದಾರೆ’.

 ಅವರು ಹೊರಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದು, ಅವರಿಗೆ ಸುಮಾರು 10 ತಿಂಗಳಿನಿಂದ ವೇತನವಾಗಿಲ್ಲ. ನಾವು ಏನು ಮಾಡಲು ಸಾಧ್ಯ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿ ಜಾರಿ ಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಪ್ರಸ್ತುತ ಡ್ಯಾಂನಲ್ಲಿ ನೀರಿನ ಮಟ್ಟ 180 ಅಡಿ ಇದ್ದು, ಪ್ರತಿನಿತ್ಯ ಹೊರಹರಿವು 3277 ಕ್ಯೂಸೆಕ್ಸ್ ನೀರನ್ನು ನಾಲೆಗಳಿಗೆ ಹರಿಸಲಾಗುತ್ತಿದೆ. ಸರಿಯಾದ ನಿರ್ವಹಣೆ ಇಲ್ಲದೆ, ನೀರು ವ್ಯರ್ಥವಾಗಿ ಹಳ್ಳ ಕೊಳ್ಳಗಳಿಗೆ ಹರಿದು ಹೋಗುತ್ತಿದೆ. ಆದ್ದರಿಂದ ಮುಷ್ಕರದಲ್ಲಿ ನಿರತರಾಗಿರುವ ಸೌಡಿಗಳ ಮನವೊಲಿಸಿ, ಕೆಲಸಕ್ಕೆ ಹಾಜರಾಗಿ ಕರ್ತವ್ಯ ನಿರ್ವಹಿಸುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಕಾಲುವೆಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ಸ್ವಚ್ಛ ಮಾಡಿಸಬೇಕು. ಹೂಳು ತೆಗೆಸಬೇಕು. ಕಾಲುವೆಗಳನ್ನು ದುರಸ್ಥಿ ಮಾಡಿಸಿ, ಕೊನೆ ಭಾಗಕ್ಕೆ ನೀರು ತಲುಪುವಂತೆ ಕ್ರಮ ವಹಿಸಬೇಕು ಮತ್ತು ಭದ್ರಾ ನೀರಾವರಿ ಸಲಹಾ ಸಮಿತಿ (ಐ.ಸಿ.ಸಿ) ಸಭೆ ನಿರ್ಣಯದ ವೇಳಾಪಟ್ಟಿಯಂತೆ ರೈತನ ಜಮೀನಿಗೆ ನೀರು ಹರಿಯುವಂತೆ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ವೇಳೆ ರೈತ ಮುಖಂಡರಾದ ಕೊಳೇನಹಳ್ಳಿ ಬಿ.ಎಂ ಸತೀಶ್, ಬೆಳವನೂರು ನಾಗೇಶ್ವರರಾವ್, ಕುಂದುವಾಡದ ಹೆಚ್.ಜಿ. ಗಣೇಶಪ್ಪ, ಮಾಜಿ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಾಜಿ ಮೇಯರ್ ಹೆಚ್.ಎನ್. ಗುರುನಾಥ್ ಇತರರು ಇದ್ದರು.

error: Content is protected !!