ಆದರ್ಶ ಶಾಲೆಗಳು ಪ.ಪೂ. ಕಾಲೇಜಾಗಿ ಮೇಲ್ದರ್ಜೆಗೆ

ಆದರ್ಶ ಶಾಲೆಗಳು ಪ.ಪೂ. ಕಾಲೇಜಾಗಿ ಮೇಲ್ದರ್ಜೆಗೆ

ಹರಪನಹಳ್ಳಿ.ಜ.22- ವಿಜಯನಗರ ಜಿಲ್ಲೆಯ ಹೊಸಪೇಟೆ. ಹರಪನಹಳ್ಳಿ. ಹಗರಿಬೊಮ್ಮನಹಳ್ಳಿ ಹಾಗೂ ಕೂಡ್ಲಿಗಿ ಸೇರಿ ಜಿಲ್ಲೆಯ ನಾಲ್ಕು ಕಾಲೇಜುಗಳನ್ನು ಆದರ್ಶ ಕಾಲೇಜುಗಳಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದು ವಿಜಯನಗರ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಟಿ.ಪಾಲಾಕ್ಷ ಹೇಳಿದರು.

ತಾಲ್ಲೂಕಿನ ಅನಂತನಹಳ್ಳಿಯ ಬಳಿ ಇರುವ  ಸರ್ಕಾರಿ ಆದರ್ಶ ಶಾಲೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತಾಲ್ಲೂಕಿನ ಆನಂತನಹಳ್ಳಿಯ ಬಳಿ ಇರುವ  ಸರ್ಕಾರಿ ಆದರ್ಶ ಶಾಲೆಯಲ್ಲಿ 2025-26ನೇ ಸಾಲಿನಲ್ಲಿ ಪಿ.ಯು. ವಿಜ್ಞಾನ ಮತ್ತು ವಾಣಿಜ್ಯ  ವಿಭಾಗಗಳು ಮುಂದಿನ ವರ್ಷದಿಂದ ಪ್ರಾರಂಭವಾಗಲಿವೆ. ಆದರ್ಶ ವಿದ್ಯಾಲಯವನ್ನು  ಆದರ್ಶ ಸರ್ಕಾರಿ ಪದವಿ ಪೂರ್ವ ಕಾಲೇಜಾಗಿ ಮೇಲ್ದರ್ಜೆಗೇರಿಸಿ ಮೂಲ ಸೌಲಭ್ಯ, ಸುಸಜ್ಜಿತ ಕಟ್ಟಡ ಪ್ರಯೋಗಾಲಯ ತರಗತಿಗಳು  ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲಾಗುತ್ತದೆ ಎಂದರು.

ಆದರ್ಶ ಸರ್ಕಾರಿ ಪದವಿ ಪೂರ್ವ ಕಾಲೇಜು ಆರಂಭಕ್ಕೆ 32ಲಕ್ಷ ರೂ.ಗಳು ಮಂಜೂರು ಆಗಿದ್ದು, ಡಿಜಿಟಲ್ ಗ್ರಂಥಾಲಯ, ಕಂಪ್ಯೂಟರ್ ಪ್ರಯೋಗಾಲಯದ ಸಿದ್ದತೆ ಕೈಗೊಳ್ಳಲಾಗಿದೆ. ಕೊಠಡಿ ದುರಸ್ತಿ. ಶುದ್ಧ ಕುಡಿಯುವ ನೀರು ಹಾಗೂ ಸಮರ್ಪಕ ವಿದ್ಯುತ್ ವ್ಯವಸ್ಥೆ,  ವಿಜ್ಞಾನ ವಿಷಯದ ಸಂಯೋಜನೆ ಮಂಜೂರು ಸೇರಿ ಇತರೆ ಪ್ರಯೋಗಾಲಯಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗುತ್ತದೆ ಎಂದರು.

ಇದೆ ವೇಳೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು.ಎಸ್ ಯು ಜೆಎಂ ಪದವಿ ಪೂರ್ವ ಕಾಲೇಜು, ಭಂಗಿ ಬಸಪ್ಪ ಪೂರ್ವ ಕಾಲೇಜು, ಎಚ್ ಪಿ.ಎಸ್ ಪದವಿ ಪೂರ್ವ ಕಾಲೇಜುಗಳಿಗೆ ಭೇಟಿ ನೀಡಿ ದ್ವಿತೀಯ ಪಿಯು ಫಲಿತಾಂಶ ಹೆಚ್ಚಳಕ್ಕೆ ಕ್ರಮಕೈಗೊಳ್ಳುವಂತೆ, ಪ್ರಾಂಶುಪಾಲರಿಗೆ ಸೂಚನೆ ನೀಡಿದರು.

ಸರ್ಕಾರಿ ಆದರ್ಶ ಶಾಲೆ ಮುಖ್ಯ ಶಿಕ್ಷಕ ಮಾತನಾಡಿ, ರಾಜ್ಯದಲ್ಲಿ ಹಿಂದುಳಿದ ತಾಲ್ಲೂಕುಗಳಲ್ಲಿ ಹರಪನಹಳ್ಳಿ ತಾಲ್ಲೂಕು ಕೂಡ ಒಂದಾಗಿದ್ದು,   ಹರಪನಹಳ್ಳಿ ತಾಲ್ಲೂಕು ಶಿಕ್ಷಣ ಕ್ಷೇತ್ರದಲ್ಲಿ ಮುಂದುವರೆದ ತಾಲ್ಲೂಕಾಗಿದೆ.ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಬೆಳವಣಿಗೆ ದೃಷ್ಟಿಯಿಂದ ಸರ್ಕಾರ ಮುಂದಿನ ಶೈಕ್ಷಣಿಕ ವರ್ಷದಿಂದ  ಮೇಲ್ದರ್ಜೆಗೇರಿಸಿರುವ ಆದರ್ಶ ಸರ್ಕಾರಿ ಕಾಲೇಜುಗಳು  ದೂರದ ನಗರಗಳಿಗೆ ಹೋಗಿ ದುಬಾರಿ ವೆಚ್ಚ ಭರಿಸಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪಡೆಯುವ ಕನಸು ಹೊತ್ತಿರುವ ಬಡ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.

ಈ ವೇಳೆ ಎಸ್ ಯು ಜೆಎಂ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಎಚ್.ಮಲ್ಲಿಕಾರ್ಜುನ, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವೆಂಕಟೇಶ, ಉಪನ್ಯಾ ಸಕ ಹಾಲಪ್ಪ ಸೇರಿದಂತೆ ಇತರರು ಇದ್ದರು.

error: Content is protected !!