ಚಿತ್ರದುರ್ಗ, ಜ. 19- ಮಾತು ಚಿಕ್ಕದಾಗಿ ಕೃತಿ ದೊಡ್ಡದಾಗಿಸುವಂತಹದ್ದು ವಚನ ಸಾಹಿತ್ಯ. ಜಗತ್ತಿನ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುವ ಅಂಶವನ್ನು ವಚನಗಳಲ್ಲಿ ಕಾಣಬಹುದು ಎಂದು ಎಂದು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನುಡಿದರು.
ಚಿತ್ರದುರ್ಗ ಬೃಹನ್ಮಠದಲ್ಲಿ ನಡೆಯುತ್ತಿರುವ 13ನೆಯ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ `ಪ್ರಾತಃ ಸ್ಮರಣೀಯರು’ ವಿಚಾರ ಕುರಿತ ಚಿಂತನ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಜಯದೇವ ಜಗದ್ಗುರುಗಳಿಗೆ ಐತಿಹಾಸ ಸಂಘಟನೆ ಮಾಡಿದ ಕೀರ್ತಿ ದೊರೆಯುತ್ತದೆ. ಈ ಭಾಗದಲ್ಲಿ ತಿಪ್ಪೇರುದ್ರ ಸ್ವಾಮಿಯವರ ಭಕ್ತರು ಅನೇಕ. ಅವರು ಪವಾಡಗಳ ಮೂಲಕ ಪ್ರಸಿದ್ಧರಾಗಿದ್ದಂತಹ ಶ್ರೀಗಳಾಗಿದ್ದರು. ಶಿವಕುಮಾರ ಮಹಾಸ್ವಾಮಿಗಳು ವಚನ ಸಾಹಿತ್ಯವನ್ನು ಕ್ರೋಢೀಕರಿಸುವಲ್ಲಿ ಶ್ರಮ ವಹಿಸಿದ್ದವರಾಗಿದ್ದಾರೆ. ಅವರು ಧಾರ್ಮಿಕ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದವರಾಗಿದ್ದಾರೆ
ಶರಣ ಸಾಹಿತ್ಯ ಪರಿಷತ್ ರಾಜ್ಯವ್ಯಾಪ್ತಿ ಕಾರ್ಯ ನಿರ್ವಹಿಸುತ್ತಿದೆ. ದೆಹಲಿಯಲ್ಲಿ ಅನುಭಾವ ಸಾಹಿತ್ಯದ ಬಗ್ಗೆ ಕಾರ್ಯಕ್ರಮ ನೀಡಿದೆ. ಈ ಸಂಸ್ಥೆಯು ನಿರಂತರ ಕಾರ್ಯ ನಿರ್ವಹಿಸುತ್ತಿದೆ. ಪ್ರತಿನಿತ್ಯ ಕಾರ್ಯಕ್ರಮಗಳು ನಡೆದು ಧಾರ್ಮಿಕ ವಿಚಾರಗಳನ್ನು ಪಸರಿಸುತ್ತಿದೆ ಎಂದರು.
ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಗುರುಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, 20, 21ನೆಯ ಶತಮಾನದಲ್ಲಿ ಇಡೀ ಸಮಾಜದ ಘನತೆ, ಸ್ವಾಭಿಮಾನ ಎತ್ತಿ ಹಿಡಿದವರು ಜಯದೇವ ಜಗದ್ಗುರುಗಳು ಮತ್ತು ಶಿವರಾತ್ರಿ ದೇಶಿಕೇಂದ್ರ ರಾಜೇಂದ್ರ ಸ್ವಾಮಿಗಳು ಎಂದು ಹೇಳಿದರು.
ಶಿಕ್ಷಣ, ಅನ್ನ, ಸಂಸ್ಕಾರ ಈ ಮೂರನ್ನು ಸಮಾಜಕ್ಕೆ ಕೊಟ್ಟವರು ಬಸವಣ್ಣನವರು. ನಂತರ ಅದನ್ನು ಮುಂದುವರೆಸಿಕೊಂಡು ಬಂದದ್ದು ಮುರುಘಾ ಮಠ ಮತ್ತು ಸುತ್ತೂರು ಮಠ. ಸಮಾಜಕ್ಕೆ ತಮ್ಮನ್ನೇ ತಾವು ಸಮರ್ಪಿಸಿಕೊಂಡವರು ಉಭಯ ಸ್ವಾಮಿಗಳು. ಅಸಂಘಟಿತ ಸಮಾಜವನ್ನು ಸಂಘಟಿಸಲು ರಾಜ್ಯವನ್ನು ಸುತ್ತಿದರು ಜಯದೇವ ಜಗದ್ಗುರುಗಳು. ಹಸಿದವರಿಗೆ ಅನ್ನದ ಜೊತೆಗೆ ಶಿಕ್ಷಣ ಕೊಟ್ಟಿದ್ದಾರೆ. ಅವರೆಲ್ಲ ಮಠ ಬಿಟ್ಟು ಸಮಾಜ ಕಟ್ಟುವ ಕೆಲಸ ಮಾಡಿದರು. ಶರಣರಿಗೆ ಸಂಘಟನೆ ಮಾಡುವ ಶಕ್ತಿಯಿದೆ ಎಂದು ತೋರಿಸಿಕೊಟ್ಟವರು ದೇಶಿಕೇಂದ್ರ ಸ್ವಾಮಿಗಳು ಎಂದು ತಿಳಿಸಿದರು.
ಪಂಚಮಸಾಲಿ ಗುರುಪೀಠದ ಡಾ.ಜಗದ್ಗುರು ವಚನಾನಂದ ಮಹಾಸ್ವಾಮಿಗಳು ಮಾತನಾಡಿ, ಬಸವ ತತ್ವ ಹೇಗಿರಬೇಕು ಎಂದು ಹೇಳಿ ಬಾಳಿದವರು ದೇಶಿಕೇಂದ್ರ ಸ್ವಾಮಿಗಳು. ನಮಗೆ ಬದುಕಿನಲ್ಲಿ ಹೇಗೆ ಬಾಳಬೇಕೆಂಬುದನ್ನು ಕಲಿಸಿಕೊಟ್ಟವರು ಸಿದ್ಧೇಶ್ವರ ಸ್ವಾಮಿಗಳು. ಸಾವಿನ ಕೊನೆಯ ಕ್ಷಣದಲ್ಲೂ ಸಹ ವಚನಗಳನ್ನು ಪಸರಿಸಿದವರು. ಸಿದ್ಧೇಶ್ವರ ಸ್ವಾಮಿಗಳು ಸೂಕ್ಷ್ಮಜೀವಿಯಾಗಿದ್ದರು ಎಂದು ನುಡಿದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಶ್ರೀ ಮುರುಘರಾಜೇಂದ್ರ ಮಠದ ಡಾ.ಬಸವಕುಮಾರ ಮಹಾಸ್ವಾಮಿಗಳು ಮಾತನಾಡಿ, ಶ್ರೀ ಜಯದೇವ ಜಗದ್ಗುರುಗಳು ನನಗೆ ಧನ ಸಹಾಯ ಮಾಡಿದ್ದಾರೆಂದು ಹಳಕಟ್ಟಿಯವರು ಬರೆದಿದ್ದಾರೆ. ಹರ್ಡೇಕರ್ ಮಂಜಪ್ಪನವರಿಗೆ ಧನ ಸಹಾಯ ಮಾಡಿಸುತ್ತಾರೆ. 1903ರಲ್ಲಿ ಚಿತ್ರದುರ್ಗ ಸಂಸ್ಥಾನದ ಪೀಠಾಧಿಪತಿಗಳಾಗಿ 1956ರಲ್ಲಿ ಲಿಂಗೈಕ್ಯರಾದರು. ರಾಷ್ಟ್ರಪತಿಗಳು, ಮುಖ್ಯಮಂತ್ರಿಗಳು, ರಾಷ್ಟ್ರಕವಿಗಳು ಶ್ರೀಗಳ ಸಹಾಯ ಪಡೆದು, ಅವರ ಆದರ್ಶಗಳನ್ನು ರೂಢಿಸಿಕೊಂಡು ಮಹಾನ್ ವ್ಯಕ್ತಿಗಳಾಗಿದ್ದರು. ಚಾಮರಾಜಪೇಟೆಯಲ್ಲಿ ಸಾಹಿತ್ಯ ಪರಿಷತ್ ಸ್ಥಾಪಿಸಲು ಶ್ರೀಗಳು ಧನ ಸಹಾಯ ಮಾಡಿದ್ದರು. ಕರ್ನಾಟಕ ಏಕೀಕರಣದ ಚಳವಳಿಗೆ ಮಂಗಳೂರಿಗೆ ಶ್ರೀಗಳನ್ನು ಆಹ್ವಾನಿಸಲಾಗಿತ್ತು. ನಿಜಲಿಂಗಪ್ಪನವರು, ಬಸವಲಿಂಗಪ್ಪನವರ ವಿದ್ಯಾಭ್ಯಾಸಕ್ಕಾಗಿ ಶ್ರೀಗಳು ಸಹಾಯಧನ ನೀಡಿ ಪ್ರೋತ್ಸಾಹಿಸಿರುತ್ತಾರೆ. ಶಿಕ್ಷಣ, ಆರೋಗ್ಯಕ್ಕೆ ಶ್ರೀಗಳು ಹೆಚ್ಚು ಒತ್ತು ನೀಡಿದ್ದರು ಎಂದು ಶ್ರೀಗಳ ಸೇವೆಯನ್ನು ಸ್ಮರಿಸಿದರು.
ಹಿರಿಯ ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ ಆಶಯ ನುಡಿಗಳನ್ನಾಡಿ, 900 ವರ್ಷಗಳಿಂದ ಇಲ್ಲಿಯವರೆಗೆ ಕಲ್ಯಾಣದ ಬಸವಾದಿ ಶರಣರ ಆಶಯದ ರಥವನ್ನು ಎಳೆದುಕೊಂಡು ಬಂದಿದ್ದೇವೆ. ಅವರ ವಿಚಾರಗಳು ಸಮಾಜದಲ್ಲಿ ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿವೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಬಸವಾದಿ ಶರಣರ ತತ್ವಗಳನ್ನು ಸಮಾಜಕ್ಕೆ ತಲುಪಿಸುವ ಕಾರ್ಯಗಳು ನಡೆಯುತ್ತಿವೆ. ಇವರ ವಿಚಾರಗಳನ್ನು ನಡೆ-ನುಡಿಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ. ಕಾಯ, ವಾಚಾ, ಮನಸ್ಸು ಇಟ್ಟುಕೊಂಡವರು, ಶಿಕ್ಷಣ ಮತ್ತು ಸಾಮಾಜಿಕ ಕಾರ್ಯಗಳ ಮೂಲಕ ಸಮಾಜಕ್ಕೆ ಕೊಡುಗೆಯನ್ನು ಕೊಟ್ಟವರು ನಿಜವಾದ ಪ್ರಾತಃ ಸ್ಮರಣೀಯರು ಎಂದು ಬಣ್ಣಿಸಿದರು.
ಚಿತ್ರದುರ್ಗ ಜಿಲ್ಲೆ ತಿಪ್ಪೇರುದ್ರ ಸ್ವಾಮಿಗಳು ಎರಡು ಮಠಗಳು, ಏಳು ಕೆರೆಗಳನ್ನು ನಿರ್ಮಾಣ ಮಾಡಿದರು. ತಿಪ್ಪೇರುದ್ರ ಸ್ವಾಮಿಗಳ ಆದರ್ಶಗಳನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು. ವಚನ ಸಾಹಿತ್ಯವನ್ನು ತಲೆಯ ಮೇಲೆ ಹೊತ್ತು ಜನಮಾನಸಕ್ಕೆ ತಲುಪಿಸಿದ ವಚನ ಪಿತಾಮಹ ಫ.ಗು.ಹಳಕಟ್ಟಿಯವರ ಚಿಂತನೆಗಳನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು. ಸುತ್ತೂರು ಸಂಸ್ಥಾನ ಕೆಳಮಟ್ಟದ ಜನರಿಗೆ ಆಶ್ರಯ, ಶಿಕ್ಷಣ ಹಾಗೂ ದಾಸೋಹವನ್ನು ನೀಡಿದ ಶ್ರೀಮಂತ ಮಠವಾಗಿದೆ. ಸಮ ಸಮಾಜದ ಕಡೆಗೆ ಕೊಂಡೊಯ್ಯುವ ಕೆಲಸ 12ನೇಯ ಶತಮಾನದ ಬಸವಾದಿ ಶರಣರದ್ದಾಗಿತ್ತು. ಈ ಕಾರ್ಯವನ್ನು ಅನುಷ್ಠಾನಕ್ಕೆ ತರದೇ ಹೋದರೆ ಶರಣ ಚಳುವಳಿಯ ಉದ್ದೇಶ ಈಡೇರದು ಎಂದು ನುಡಿದರು.
ವಿಜಯಪುರ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಡಾ. ಮಹಾಂತೇಶ ಬಿರಾದಾರ್, ಮೈಸೂರಿನ ಪ್ರೊ. ಮೊರಬದ ಮಲ್ಲಿಕಾರ್ಜುನ, ತುಮಕೂರು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಪ್ರೊ.ಸಿದ್ದಗಂಗಪ್ಪ, ಹಿರಿಯ ಸಂಶೋಧಕ ಡಾ. ಬಿ.ರಾಜಶೇಖರಪ್ಪ, ಸಾಹಿತಿ ಡಾ.ಲೋಕೇಶ್ ಅಗಸನಕಟ್ಟೆ ಮಾತನಾಡಿದರು.
ಸಮ್ಮೇಳನಾಧ್ಯಕ್ಷರಾದ ಡಾ.ಸಿದ್ದರಾಮ ಬೆಲ್ದಾಳ ಶರಣರು, ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಮಹಾಸ್ವಾಮಿಗಳು, ಗುರುಮಠಕಲ್ ಖಾಸಾ ಶ್ರೀ ಮುರುಘಾ ಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿಗಳು, ಬಿಜಾಪುರ ಶ್ರೀ ಕೈವಲ್ಯನಾಥ ಸ್ವಾಮಿಗಳು ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ್ಷ ಡಾ.ಸಿ.ಸೋಮಶೇSರ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೆ.ಎಂ.ವೀರೇಶ್, ಹರ ಗುರುಚರ ಮೂರ್ತಿಗಳು ಉಪಸ್ಥಿತರಿದ್ದರು.
ಡಾ.ಸಿ.ಸೋಮಶೇಖರ್ ರಚಿಸಿದ ‘ಮಾತೆಂಬುದು ಜ್ಯೋತಿರ್ಲಿಂಗ’ ಕೃತಿ ಲೋಕಾರ್ಪಣೆ ಮಾಡಲಾಯಿತು. ಬಾಪೂಜಿ ವಿದ್ಯಾಸಂಸ್ಥೆಯವರು ದೇವಮಾನವ ಸಿದ್ದೇಶ್ವರ ಶ್ರೀ ಕುರಿತು ರೂಪಕ ನಡೆಸಿಕೊಟ್ಟರು. ತೋಟಪ್ಪ ಉತ್ತಂಗಿ ಸಂಗಡಿಗರು ವಚನ ಪ್ರಾರ್ಥನೆ ಮಾಡಿದರು. ಕೆ.ಬಿ.ಪರಮೇಶ್ವರಪ್ಪ ಸ್ವಾಗತಿಸಿದರು. ಎಸ್. ಷಡಾಕ್ಷರಯ್ಯ ವಂದಿಸಿದರು.
13ನೇಯ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ನಿಮಿತ್ತ ತುಮಕೂರಿನ ಗಮಕಿ ಪೂರ್ಣಿಮಾ ವೆಂಕಟೇಶ್ ಹಾಗೂ ಗಮಕ ಕಲಾಶ್ರೀ ವಿದ್ವಾನ್ ಎಂ ಜಿ ಸಿದ್ಧರಾಮಯ್ಯನವರು ಶಿವಶರಣರ ವಾಚನ ವ್ಯಾಖ್ಯಾನ ಕಾರ್ಯಕ್ರಮ ನಡೆಸಿಕೊಟ್ಟರು.