ಜಗಳೂರು ತಲುಪಿದ ರೈತರ ಪ್ರತಿಭಟನಾ ಪಾದಯಾತ್ರೆ

ಜಗಳೂರು ತಲುಪಿದ ರೈತರ ಪ್ರತಿಭಟನಾ ಪಾದಯಾತ್ರೆ

ದಾವಣಗೆರೆ, ಜ. 19 – ಅರಣ್ಯ ಭೂಮಿ ಅತಿಕ್ರಮಣ ಸಾಗುವಳಿದಾರರನ್ನು ಒಕ್ಕಲೆಬಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮ ಖಂಡಿಸಿ ಜಗಳೂರು ತಾಲ್ಲೂಕು ಗೌಡಗೊಂಡನಹಳ್ಳಿಯಿಂದ ರಾಜ್ಯ ರೈತ ಸಂಘ ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ಹಮ್ಮಿಕೊಂಡಿರುವ ಪಾದಯಾತ್ರೆ ಭಾನುವಾರ ಜಗಳೂರು ತಲುಪಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಅರಣ್ಯ ಇಲಾಖೆ ಮತ್ತು ತಹಶೀಲ್ದಾರ್‌ ದೌರ್ಜನ್ಯ ವಿರೋಧಿಸಿ ಗಡಿಮಾಕುಂಟೆಯಿಂದ ಹೊರಟಿರುವ ಪಾದಯಾತ್ರೆ ಜಗಳೂರುಗೆ ತಲುಪಿದ್ದು, ಸೋಮವಾರ ಜಗಳೂರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.

ಗೌಡಗೊಂಡನ ಹಳ್ಳಿಯ 23 ಕುಟುಂಬಗಳು ಅರಣ್ಯ ಹಕ್ಕು ಸಮಿತಿಗೆ ಅರ್ಜಿ ಸಲ್ಲಿಸಿದರೂ ಕೂಡ ಇದುವರೆಗೂ ಕಸವನಹಳ್ಳಿಯ ಪಿಡಿಒ ಯಾವುದೇ ಕ್ರಮ ಕೈಗೊಳ್ಳದೇ ಅರ್ಜಿಗಳನ್ನು ಹಾಗೆಯೆ ಇಟ್ಟುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸ ಬೇಕು ಎಂದು ಆಗ್ರಹಿಸಿದರು.

ಅರ್ಜಿ ಸಲ್ಲಿಕೆಯಾಗಿ ಆರೇಳು ತಿಂಗಳು ಕಳೆದಿದ್ದರೂ ಪಿಡಿಒ ಯಾವುದೇ ಕ್ರಮ ಕೈಗೊಂ ಡಿಲ್ಲ. ಇದು ಅರಣ್ಯ ಭೂಮಿ ಅತಿಕ್ರಮಣ ಸಾಗುವಳಿದಾರರು ಮತ್ತು ಅರಣ್ಯ ಇಲಾ ಖೆಯ ವಿರುದ್ಧ ಸಂಘರ್ಷಕ್ಕೆ ಕಾರಣವಾಗಿದೆ ಎಂದ ಅವರು, ಜಗಳೂರು ತಾಲ್ಲೂಕಿನಲ್ಲಿ ತಿರಸ್ಕರಿಸಿರುವ  ಫಾರಂ ನಂ. 53 ಮತ್ತು 57 ಅರ್ಜಿಗಳನ್ನು ಮರುಪರಿಶೀಲನೆ ಮಾಡಬೇಕು. ಒಂದು ವೇಳೆ ಫಾರಂ 57 ಅರ್ಜಿ ವಜಾ ಮಾಡಿ ಭೂಮಿ ವಶಪಡಿಸಿಕೊಳ್ಳುವ ಪ್ರಯತ್ನ ಮಾಡಿದರೆ ಒಂದು ಇಂಚು ಭೂಮಿ ಕೂಡ ನೀಡುವುದಿಲ್ಲ. ಇದನ್ನು ಖಂಡಿಸಿ ತಾಲ್ಲೂಕಿನಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈಗಾಗಲೇ ಹೊನ್ನಾಳಿ ತಾಲ್ಲೂಕಿನಲ್ಲಿ ಪಿಎಂ ಕುಸುಮ್ ಯೋಜನೆಯಡಿ ರೈತರ ಭೂಮಿ ಕಸಿದು ಉದ್ಯಮಿಗೆ ನೀಡಲಾಗಿದೆ. ಇದರಿಂದ ನೊಂದ ರೈತ ವಿಷ ಕುಡಿದು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದು, ಭವಿಷ್ಯದಲ್ಲಿ ಅರಣ್ಯ ಇಲಾಖೆ ಈ ರೀತಿಯ ಘಟನೆಗಳಿಗೆ ಅವಕಾಶ ಮಾಡಿಕೊಡದೇ, ಅರ್ಜಿ ಸಲ್ಲಿಸಿರುವ ಎಲ್ಲ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿದರು.

ಪಾದಯಾತ್ರೆಯಲ್ಲಿ ಗೌಡಗೊಂಡನಹಳ್ಳಿ ಮತ್ತು ಚಿಕ್ಕಉಜ್ಜಿನಿ ಗ್ರಾಮದ ಹತ್ತಾರು ರೈತ ಕುಟುಂಬಗಳು ಭಾಗವಹಿಸಿದ್ದವು. ಮೆರವಣಿಗೆಯಲ್ಲಿ ಚಿಕ್ಕಮಲ್ಲನಹೊಳೆ ಚಿರಂಜೀವಿ, ಬೈರನಾಯಕನಹಳ್ಳಿ ರಾಜು, ಕಸವನಹಳ್ಳಿ ನಾಗರಾಜ್, ಸತೀಶ್, ಹನುಮಂತಾಪುರದ ರಂಗನಾಥ್ ಇತರರು ಭಾಗವಹಿಸಿದ್ದರು. ನಾಳೆ ಜಗಳೂರಿನಿಂದ ಹೊರಡಲಿರುವ ಪಾದಯಾತ್ರೆ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಕಡೆಗೆ ಸಂಚರಿಸಲಿದೆ.

error: Content is protected !!