ಪಾಲಿಕೆ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರ ಆಕ್ರೋಶ
ದಾವಣಗೆರೆ, ಜ. 16- ಕೆಲ ಕಾಲ ಮುಂದೂಡಲ್ಪಟ್ಟಿದ್ದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ, ಜಲಸಿರಿ ಯೋಜನೆಯಡಿ ಸಮರ್ಪಕ ಕುಡಿಯುವ ನೀರು ಸರಬರಾಜಾಗದಿದ್ದರೂ, ಅವೈಜ್ಞಾನಿಕವಾಗಿ ನೀರಿನ ಶುಲ್ಕ ವಿಧಿಸುತ್ತಿದ್ದು, ಇದರಿಂದ ಗ್ರಾಹಕರಿಗೆ ಬರ ಸಿಡಿಲು ಬಡಿದಂತಾಗಿದೆ ಎಂದು ಪಾಲಿಕೆ ಸದಸ್ಯ ಕೆ. ಪ್ರಸನ್ನಕುಮಾರ್, ಮಾಜಿ ಮೇಯರ್ ಎಸ್.ಟಿ. ವೀರೇಶ್ ಜಲಸಿರಿ ಬಿಲ್ ಪ್ರದರ್ಶಿಸುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಕೆಲವು ಗಂಟೆಗಳ ಕಾಲ ಮುಂದೂಡಲ್ಪಟ್ಟು ಮತ್ತೆ ನಡೆದ ಸಾಮಾನ್ಯ ಸಭೆ ಮೇಯರ್ ಕೆ. ಚಮನ್ಸಾಬ್ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಜಲಸಿರಿ ಯೋಜನೆಯಡಿ ಸಮರ್ಪಕವಾಗಿ ನೀರು ಸರಬರಾಜಾಗದಿರುವ ಬಗ್ಗೆ ಮತ್ತು ಅಧಿಕ ಶುಲ್ಕ ವಿಧಿಸುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಲಸಿರಿ ಯೋಜನೆಯ ಅಧಿಕಾರಿಗಳು ಮನ ಬಂದಂತೆ ಜಲಸಿರಿ ಕಾಮಗಾರಿ ಮಾಡುತ್ತಿದ್ದು, ಇಚ್ಛೆ ಬಂದಂತೆ ಬಿಲ್ ನೀಡುವ ಮೂಲಕ ಜನರ ಬದುಕಿನೊಂದಿಗೆ ಆಟವಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಹಲವು ತಿಕ್ಕಾಟಗಳ ನಡುವೆ ಮುಂದೂಡಿ, ನಡೆದ ಸಭೆ
ದಾವಣಗೆರೆ, ಜ. 16- ಹಲವು ತಿಕ್ಕಾಟ, ಗೊಂದಲದ ನಡುವೆಯೂ ಮುಂದೂಡಿ ಮತ್ತೆ ಸಭೆ ನಡೆದ ಘಟನೆ ಇಂದು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆಯಿತು.
ಮೇಯರ್ ಕೆ. ಚಮನ್ ಸಾಬ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆ ಆರಂಭದಲ್ಲೇ ತಿಕ್ಕಾಟಗಳಿಗೆ ಎಡೆ ಮಾಡಿಕೊಟ್ಟಿತ್ತು. ಕಾಂಗ್ರೆಸ್ ಸದಸ್ಯರ ಹೈಡ್ರಾಮಾ ಕೂಡ ನಡೆಯಿತು.
ಬೆಳಿಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ಸಾಮಾನ್ಯ ಸಭೆ ಒಂದು ಗಂಟೆಯಾದರೂ ಆರಂಭವಾಗಲೇ ಇಲ್ಲ. ಮೇಯರ್ ಕೆ. ಚಮನ್ ಸಾಬ್ ಹಲವು ಬಾರಿ ರೂಲಿಂಗ್ ನೀಡಿದರೂ ಕಾಂಗ್ರೆಸ್ ಸದಸ್ಯರಾದ ಎ. ನಾಗರಾಜ್, ಗಡಿಗುಡಾಳ್ ಮಂಜುನಾಥ್ ಅವರ ಕೋರಿಕೆಯಂತೆ ಸಮಯ ನೀಡಿದರೂ, ಸ್ಥಾಯಿ ಸಮಿತಿ ಅಧ್ಯಕ್ಷರುಗಳು ಹಾಗೂ ಕಾಂಗ್ರೆಸ್ನ ಕೆಲವು ಸದಸ್ಯರು ಮೇಯರ್ ವಿರುದ್ಧ ಕುಪಿತಗೊಂಡು ಸಭೆಗೆ ಹಾಜರಾಗದೇ ಪಾಲಿಕೆ ಆವರಣದಲ್ಲಿಯೇ ಓಡಾಡುತ್ತಿದ್ದರು.
ಕಾಂಗ್ರೆಸ್ ಸದಸ್ಯ ಎ. ನಾಗರಾಜ್, ಅಬ್ದುಲ್ ಲತೀಫ್, ಮೇಯರ್ ಚಮನ್ಸಾಬ್ ಅವರೊಂದಿಗೆ ಮಾತುಕತೆ ನಡೆಸಿದ ವೇಳೆ ಕುಪಿತರಾದ ಮೇಯರ್, ಇದೇನು ಅಂಗಡಿನಾ ವ್ಯಾಪಾರ ಮಾಡಲು? ಅದೆಲ್ಲ ಅಗೋಲ್ಲ. ಕೆಲವು ಸದಸ್ಯರು ಸಭೆ ಬರದೇ ಇರುವ ಬಗ್ಗೆ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ್ ಅವರ ಗಮನಕ್ಕೆ ತರುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷೆ ಆಶಾ ಉಮೇಶ್ ಅವರ ಪತಿ ಉಮೇಶ್ ಸಹ ಮೇಯರ್ ಅವರಿಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸುವಂತೆ ಮನವಿ ಮಾಡಿದರು. ಇದಕ್ಕೂ ಒಪ್ಪದ ಉಪ ಮೇಯರ್ ಸೋಗಿ ಶಾಂತಕುಮಾರ್, ಆಯುಕ್ತೆ ರೇಣುಕಾ ಅವರು ಸಭೆಯಿಂದ ತೆರಳಿ ಸದಸ್ಯರ ಮನವೊಲಿಸಲು ಪ್ರಯತ್ನಿಸಿದರಾದರೂ ಸಂಧಾನ ಸಫಲವಾಗದ ಕಾರಣ ಸ್ವಲ್ಪ ಸಮಯದಲ್ಲೇ ವಾಪಾಸ್ ಬಂದರು.
ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಸಂಧಾನ ಯಶಸ್ವಿಯಾಯಿತಾ ಮೇಡಂ ಎಂದು ಗೇಲಿ ಮಾಡಿದರು.
ನಂತರ ಮೇಯರ್ ಕೆ. ಚಮನ್ಸಾಬ್ ಮಾತನಾಡಿ, ಪಾಲಿಕೆ ಮಾಜಿ ಸದಸ್ಯ ಹಂಚಿನಮನಿ ತಿಪ್ಪಣ್ಣ ನಿಧನರಾಗಿದ್ದು, ಅವರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕು ಹಾಗಾಗಿ ಸಭೆಯನ್ನು ಅರ್ಧ ಗಂಟೆ ಮುಂದೂಡೋಣ ಎಂದಾಗ ಬಿಜೆಪಿ ಸದಸ್ಯ ಕೆ. ಪ್ರಸನ್ನಕುಮಾರ್ ಮೊದಲು ಸಭೆ ಪ್ರಾರಂಭ ಮಾಡಿ, ಸಭೆಯಲ್ಲಿ ತಿಪ್ಪಣ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸೋಣ ಎಂದು ತಾಕೀತು ಮಾಡಿದರು.
ಸಭೆಯನ್ನು ಅರ್ಧ ಗಂಟೆ ಮುಂದೂಡುವಂತೆ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು. ಕೊನೆಗೂ ಸಭೆ ಆರಂಭಿಸಿದರು. ಶೂನ್ಯ ವೇಳೆಯಲ್ಲಿ ಬಿಜೆಪಿಯ ಕೆ. ಪ್ರಸನ್ನಕುಮಾರ್, ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಮತ್ತು ಮೇಯರ್ ಅವರ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿ, ಮೇಯರ್ ಅವರು ಒಳ್ಳೆಯವರು. ಆದರೆ ಅವರು ಅಭಿವೃದ್ಧಿ, ಅವರದೇ ಪಕ್ಷದ ಸದಸ್ಯರನ್ನು ವಿಶ್ವಾಸಕ್ಕೆ ತೆೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆಂದು ತಿಳಿಸಿದರು. ಇದೇ ವೇಳೆ ಮೇಯರ್ ಫೇಲ್ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದರು.
ಸಾಮಾನ್ಯ ಸಭೆಯಲ್ಲಿ ಭಿತ್ತಿ ಪತ್ರ ಪ್ರದರ್ಶನ ಮಾಡಲು ನಿಷೇಧವಿದೆ. ಭಿತ್ತಿಪತ್ರ ಪ್ರದರ್ಶನ ಮಾಡಿರುವುದರಿಂದ ಸಭೆಯನ್ನು ಒಂದು ಗಂಟೆ ಕಾಲ ಮುಂದೂಡಿರುವುದಾಗಿ ತಿಳಿಸಿ ಹೊರ ನಡೆದರು.
ತಪ್ಪು ಮಚ್ಚಿಕೊಳ್ಳಲು ಸಭೆ ಮುಂದೂಡುತ್ತಿರುವುದಾಗಿ ಬಿಜೆಪಿ ಸದಸ್ಯರು ಘೋಷಣೆ ಕೂಗಿದರು. ಸಭೆಯನ್ನು ಮುಂದೂಡಲಾಯಿತು.
ಮೇಯರ್ ಚಮನ್ಸಾಬ್ ಮಾತನಾಡಿ, ಜಲಸಿರಿ ಕಾಮಗಾರಿ, ನೀರು ಸರಬರಾಜು ವ್ಯವಸ್ಥೆ, ನೀರಿನ ಬಿಲ್ ನೀಡಿಕೆ ಕೇವಲ ಒಂದೇ ವಾರ್ಡಿನ ಸಮಸ್ಯೆಯಾಗಿಲ್ಲ. ಅದರ ಬಿಸಿ ಎಲ್ಲರಿಗೂ ತಟ್ಟುತ್ತಿದೆ. ಜಲಸಿರಿ ಯೋಜನೆಯ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಇಲ್ಲವಾದರೆ ಎಲ್ಲಾ ಸದಸ್ಯರ ಪ್ರತಿರೋಧ ಹಾಗೂ ಪ್ರತಿಭಟನೆಯನ್ನು ಎದುರಿಸಬೇಕಾ ಗುತ್ತದೆ ಎಂದು ಎಚ್ಚರಿಸಿದರು.
ಎಲ್ಲಾ 45 ವಾರ್ಡ್ಗಳಿಗೂ ಸಮರ್ಪಕ ವಾಗಿ ಅನುದಾನ ಹಂಚಿಕೆಯಾಗಬೇಕು. ಸರಿಯಾದ ರೀತಿಯಲ್ಲಿ ಅನುದಾನ ಸಿಗುತ್ತಿಲ್ಲ. ಪ್ರತಿ ವಾರ್ಡ್ಗೆ ಕನಿಷ್ಠ 50 ಲಕ್ಷ ವನ್ನಾದರೂ ನೀಡಬೇಕೆಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮೇಯರ್ ಚಮನ್ಸಾಬ್ ಅವರು, ಎಲ್ಲಿ ಅಗತ್ಯವಿದೆಯೋ ಅಲ್ಲಿ ಅನುದಾನ ನೀಡಿದ್ದೇವೆೆ. ಯಾವುದೇ ತಾರತಮ್ಯ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಮಹಾನಗರ ಪಾಲಿಕೆ ಅರವತ್ತು ಕೋಟಿ ರೂ. ಸಾಲ ಹೊಂದಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಅನುದಾನ ಹಂಚಿಕೆ ಮಾಡೋಣ. ಒಂದಿಷ್ಟು ಏರುಪೇರಾದರೂ ಪಾಲಿಕೆಗೆ ಬಾಗಿಲು ಹಾಕುವ ಪರಿಸ್ಥಿತಿ ಬರುತ್ತದೆ ಎಂದು ಮೇಯರ್ ಹೇಳಿದರು.
ಉಪ ಮೇಯರ್ ಸೋಗಿ ಶಾಂತ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಗಣೇಶ್ ಹುಲ್ಮನಿ, ಆಶಾ ಉಮಾಶಂಕರ್, ವಿಪಕ್ಷ ನಾಯಕ ಆರ್.ಎಲ್. ಶಿವಪ್ರಕಾಶ್, ಕಾಂಗ್ರೆಸ್ ಸದಸ್ಯರಾದ ಅಬ್ದುಲ್ ಲತೀಫ್, ಗಡಿಗುಡಾಳ್ ಮಂಜುನಾಥ್, ಎ. ನಾಗರಾಜ್, ಬಿಜೆಪಿ ಸದಸ್ಯ ವೀರೇಶ್ ಪೈಲ್ವಾನ್, ಆಯುಕ್ತೆ ರೇಣುಕಾ ಮತ್ತಿತರರು ಉಪಸ್ಥಿತರಿದ್ದರು.