ಕಬ್ಬೂರು : ಅಕ್ರಮ ಮಣ್ಣು ಸಾಗಣೆ ನಾಲ್ವರ ವಿರುದ್ಧ ಪ್ರಕರಣ
ಮಾಯಕೊಂಡ, ಜ. 15 – ಸಮೀಪದ ಕಬ್ಬೂರು ಕೆರೆ ಅಂಗಳದಲ್ಲಿ ಅಕ್ರಮ, ಮಣ್ಣು ಸಾಗಣೆ ಮಾಡುತ್ತಿದ್ದ ದೂರು ಆಧರಿಸಿ ಮಾಯಕೊಂಡ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ ಟ್ರ್ಯಾಕ್ಟರ್ ಮತ್ತು ಜೆಸಿಬಿಗಳನ್ನು ವಶಪಡಿಸಿಕೊಂಡಿದ್ದಾರೆ.
ಅಕ್ರಮ ಮಣ್ಣು ಸಾಗಾಟದ ವೇಳೆ ದಲಿತರ ಸಮಾಧಿ ವಿರೂಪಗೊಳಿಸಿರುವ ಕೂಗೂ ಕೇಳಿಬಂದು, ಗ್ರಾಮದಲ್ಲಿ ಬಿಗುವಿನ ವಾತಾವರಣಕ್ಕೆ ಕಾರಣವಾಗಿದೆ.
ಕಬ್ಬುರು ಕೆರೆಯಂಗಳದಲ್ಲಿ ಯಥೇಚ್ಛವಾಗಿ ದೊರೆಯುವ ಮಣ್ಣನ್ನು ಬಹುವರ್ಷಗಳಿಂದ ಅಡಿಕೆ ತೋಟಗಳಿಗೆ ಹಾಕಲು ರೈತರು ಟ್ರ್ಯಾಕ್ಟರ್ಗಳಲ್ಲಿ ತೆಗೆದುಕೊಂಡು ಹೋಗುತ್ತಿದ್ಚರು. ಈಚೆಗೆ ಕೆರೆ ಅಂಗಳದಲ್ಲಿ ಮಣ್ಣನ್ನು ಸಾಗಿಸುವಾಗ ದಲಿತರ ಸಮಾಧಿಗಳನ್ನು ಬಗೆದು, ವಿರೂಪಗೊಳಿಸಲಾಗಿದೆ ಎಂದು ಆರೋಪಿಸಿ ಗ್ರಾಮದ ದಲಿತ ಮುಖಂಡರು, ತಹಶೀಲ್ದಾರ್, ಜಿಲ್ಲಾಧಿಕಾರಿಗೆ ದೂರು ನೀಡಿ, ಪ್ರತಿಭಟನೆ ನಡೆಸಿದ್ದರು.
ಸ್ಥಳಕ್ಕಾಗಮಿಸಿದ ಪಿಡಿಒ ಶೈಲಜಾ, ಕಾರ್ಯದರ್ಶಿ ಸಿದ್ದನಗೌಡ, ಕಂದಾಯ ನಿರೀಕ್ಷಕ ಹಿರೇಗೌಡರು ಮತ್ತು ಸಿಬ್ಬಂದಿ ಸ್ಥಳ ಪರಿಶೀಲಿಸಿದರು.
ಕಂದಾಯ ನಿರೀಕ್ಷಕ ಹಿರೇಗೌಡ ಮಾತನಾಡಿ, ಸ.ನಂ. 32ರಲ್ಲಿ 22 ಎಕರೆ 38 ಗುಂಟೆ ಜಮೀನಿನಲ್ಲಿ ಅಕ್ರಮ ಮಣ್ಣು ಸಾಗಣೆ ನಡೆದಿದೆ. 3ಎಕರೆ ಜಮೀನು ಸ್ಮಶಾನಕ್ಕಾಗಿ ಮೀಸಲಿರಿಸಲಾಗಿದೆ. 2 ಎಕರೆ ಬೆಸ್ಕಾಂಗೆ ಮೀಸಲಿಟ್ಡ ಜಾಗದಲ್ಲೂ ಮಣ್ಣು ಅಗೆದ ಗುರುತಿದೆ. ಈ ಬಗ್ಗೆ ಕ್ರಮಕೈಗೊಳ್ಳಲಾಗುತ್ತದೆ, ಎಂದರು.
ಅತ್ತಿಗೆರೆ ಗ್ರಾಮ ಪಂಚಾಯತಿ ಪಿಡಿಒ ಶೈಲಜಾ ಮಾತನಾಡಿ, ಈ ಕೆರೆ ಜಿಲ್ಲಾ ಪಂಚಾಯತಿ ವ್ಯಾಪ್ತಿಗೆ ಸೇರಿದ್ದು, ಕೆರೆ ಅಂಗಳದಲ್ಲಿ ಅಕ್ರಮ ಮಣ್ಣು ಸಾಗಣೆ ನೆಡೆದಿದೆ. ಹಿಂದಿನಿಂದಲೂ ನಡೆದ ಬಗ್ಗೆ ನಮಗೆ ಮಾಹಿತಿ ಇಲ್ಲ. ಈ ಸಂಬಂಧ ನಾವು ಅಧಿಕಾರಿಗಳೊಂದಿಗೆ ಚರ್ಚಿಸಿ, ದೂರನ್ನು ನೀಡುತ್ತೇವೆ, ಎಂದರು.
ಪಿಡಿಒ ಶೈಲಜಾ ನೀಡಿದ ದೂರು ಆಧರಿಸಿ, ಪ್ರಕರಣ ದಾಖಲಿಸಿಕೊಂಡ ಮಾಯಕೊಂಡ ಪೊಲೀಸರು ಅಕ್ರಮ ಮಣ್ಣು ಸಾಗಿಸಿದ ಕಬ್ಬೂರು ಗ್ರಾಮದ ಮರುಳುಸಿದ್ದಪ್ಪ, ತ್ಯಾಗರಾಜ, ಸಂತೋಷ ಮತ್ತು ಸುರೇಶ ಎಂಬುವವರ ಮೇಲೆ ದೂರು ದಾಖಲಿಸಿಕೊಂಡು ಮಣ್ಣು ಸಾಗಣೆಗೆ ಬಳಸಿದ ಜೆಸಿಬಿ ಮತ್ತು ಟ್ರ್ಯಾಕ್ಟರ್ ಜಪ್ತು ಮಾಡಲು ಮುಂದಾಗಿದ್ದಾರೆ. ಈಗಾಗಲೇ ನಾಲ್ಕು ಟ್ರ್ಯಾಕ್ಟರ್ ಮತ್ತು ಒಂದು ಜೆಸಿಬಿ ವಶಪಡಿಸಿಕೊಳ್ಳಲಾಗಿದೆ.
ದಲಿತರ ಸಮಾಧಿ ಭಗ್ನ ?
ದಲಿತ ಮುಖಂಡ ಗುರುಮೂರ್ತಿ ಮಾತನಾಡಿ, ದಲಿತರಿಗಾಗಿ ಮೀಸಲಿರಿಸಿದ ಸ್ಮಶಾನದಲ್ಲಿ ಮಣ್ಣು ಅಗೆದ್ದಿದ್ದು ಸಮಾಧಿಗಳನ್ನು ವಿರೂಪಗೊಳಿಸಿ, ಅವಮಾನಿಸಲಾಗಿದೆ. ಪ್ರಶ್ನಿಸಿದವರ ಮೇಲೆ ದೌರ್ಜನ್ಯ ಮಾಡುವ ಪ್ರಯತ್ನ ನಡೆದಿದೆ. ಇದರಿಂದ ದಲಿತರಿಗೆ ತುಂಬಾ ಅನ್ಯಾಯವಾಗಿದೆ, ನೀವು ಸೂಕ್ತ ಕ್ರಮ ಜರುಗಿಸದಿದ್ದರೆ ತಮ್ಮ ಮೇಲೆ ಜಾತಿ ನಿಂದನೆ ದೂರು ದಾಖಲಿಸುತ್ತೇವೆ. ಮಣ್ಣು ಗಣಿಗಾರಿಕೆ ಮಾಡುವವರನ್ನು ಪ್ರಶ್ನಿಸಿದರೆ ಅವರು ನಮ್ಮ ಮೇಲೆ ಗಲಾಟೆಗೆ ಬರುತ್ತಾರೆ. ತೋಟಕ್ಕೆ ಮಣ್ಣು ಹೇರಲು ನಮ್ಮ ವಿರೋಧವಿಲ್ಲ. ನಮ್ಮವರ ಸಮಾಧಿ ಬಗೆದದ್ದಕ್ಕೆ ನೋವಾಗಿದ್ದು, ಇದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಎಂದು ದಲಿತ ಯುವಕರು ಕಿಡಿಕಾರಿದರು.