ಗೋವಿನ ಕೆಚ್ಚಲು ಕೊಯ್ದ ದುಷ್ಕೃತ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ

ಗೋವಿನ ಕೆಚ್ಚಲು ಕೊಯ್ದ ದುಷ್ಕೃತ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ

ದಾವಣಗೆರೆ, ಜ. 14- ಗೋವಿನ ಪೂಜೆ ಮಾಡಿ ಸಂಭ್ರಮಿಸುವ ಸಂಕ್ರಾಂತಿ ಹಬ್ಬದ ಎರಡು ದಿನ ಮುನ್ನವೇ ಬೆಂಗಳೂರಿನಲ್ಲಿ ಕಿಡಿಗೇಡಿಗಳು ಮೂರು ಗೋವುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿದ್ದು, ಇಂತಹ ದುಷ್ಕೃತ್ಯ ಖಂಡಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸುವ ಮೂಲಕ ಸಂಕ್ರಾಂತಿಯನ್ನು ಕರಾಳ ದಿನವನ್ನಾಗಿ ಆಚರಿಸಲಾಯಿತು.

ನಗರದ ಗುಂಡಿ ಮಹದೇವಪ್ಪ ವೃತ್ತದಲ್ಲಿ ಗೋವುಗಳೊಂದಿಗೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಇಂದಿನ ಸಂಕ್ರಾಂತಿಯನ್ನು ಕರಾಳ ದಿನವನ್ನಾಗಿ ಆಚರಿಸಿದರು.

ಇದೇ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ ಮಾತನಾಡಿ, ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅತಿಯಾದ ಮುಸ್ಲಿಂರ ತುಷ್ಟೀಕರಣದಿಂದ ರಾಜ್ಯದಲ್ಲಿ ಇಂತಹ ಅಮಾನವೀಯ ಘಟನೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲವಾ ಗಿದೆ. ಸರ್ಕಾರ ಮತ್ತು ಪೊಲೀಸ್ ಇಲಾಖೆ ಗಳು ನಿರ್ಜೀವಗೊಂಡಿವೆ. ಪುಂಡ ಪೋಕರಿ ಗಳ ನಾಡಾಗಿ ಬಿಂಬಿತವಾಗಿದೆ. ದುಷ್ಕೃತ್ಯ ಎಸಗಿರುವ ಕ್ರೂರಿಗಳಿಗೆ ಸರಿಯಾದ ಶಿಕ್ಷೆ ವಿಧಿಸಲೇಬೇಕೆಂದು ಆಗ್ರಹಿಸಿದರು.

ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್ ಮಾತನಾಡಿ, ಭಾರತದಲ್ಲಿ ಗೋವುಗಳಿಗೆ ಪೂಜ್ಯನೀಯ ಸ್ಥಾನ ಇದೆ. ಗೋವುಗಳಲ್ಲಿ ಮುಕ್ಕೋಟಿ ದೇವರುಗಳು ನೆಲೆಸಿದ್ದಾರೆಂದು ಹಿಂದೂಗಳ ಪ್ರಬಲ ನಂಬಿಕೆ. ಹೀಗಿರುವಾಗ ಕರ್ನಾಟಕದ ರಾಜಧಾನಿಯಾಗಿರುವ ಬೆಂಗಳೂರಿನ ಹೃದಯ ಭಾಗ ಚಾಮರಾಜಪೇಟೆಯ ಕೆ.ಆರ್.ಮಾರುಕಟ್ಟೆ ಸಮೀಪದ ವಿನಾಯಕ ಚಿತ್ರಮಂದಿರದ ಹಿಂಭಾಗ ಈ ದುಷ್ಕೃತ್ಯ ನಡೆದಿದೆ. ಇದೊಂದು ಪೈಶಾಚಿಕ ಮತ್ತು ಅಮಾನವೀಯ ಕೃತ್ಯವಾಗಿದೆ ಎಂದು ಕಿಡಿಕಾರಿದರು.

ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಮಾತನಾಡಿ, ಭಾರತ ದೇಶದ ರೈತರು ಗೋವುಗಳ ಮೇಲೆ ಹೆಚ್ಚು ಅವಲಂಬಿತರಾಗಿ ದ್ದಾರೆ. ಹಸುವಿನ ಹೈನುತ್ಪನ್ನ ಉದ್ಯಮ ದೊಡ್ಡದಾಗಿ ಬೆಳೆದಿದೆ. ಈ ಹೈನುಗಾರಿಕೆ ಯಿಂದ ಲಕ್ಷಾಂತರ ಜನ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ರೈತರು ಹಸುವನ್ನು ಗೋಮಾತೆ ಎಂದೇ ಪೂಜಿಸುತ್ತಾರೆ. ಕಸವನ್ನು ತಿಂದು ಅಮೃತವನ್ನೇ ಕೊಡುವ ಗೋಮಾತೆ ಕೆಚ್ಚಲು ಕೊಯ್ದಿರುವ ಪೈಶಾಚಿಕ ಕೃತ್ಯವನ್ನು ಯಾರೂ ಕ್ಷಮಿಸಲಾರರು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ರೈತ ಮೋರ್ಚಾ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್ ಮಾತನಾಡಿ, ರೈತ ಸ್ನೇಹಿ, ಸಾಕು ಪ್ರಾಣಿ ಹಾಲು ಕೊಡುವ ಹಸುವಿನ ಕೆಚ್ಚಲು ಕೊಯ್ದಿರುವುದು ಮನುಷ್ಯ ಮಾಡುವ ಕೃತ್ಯವಲ್ಲ. ಬಂಧಿತ ಆರೋಪಿಯನ್ನು ತಪಾಸಣೆಗೆ ಒಳಪಡಿಸಿ, ಈ ಕೃತ್ಯದ ಹುನ್ನಾರವನ್ನು ಬಯಲಿಗೆಳೆಯಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಜಯಪ್ರಕಾಶ್, ಎನ್‌.ಎ. ಮುರುಗೇಶ್, ಜಿ.ಎಸ್. ಶ್ಯಾಮ್, ಅನಿಲ್, ಕುಮಾರನಾಯ್ಕ, ನನ್ನಯ್ಯ, ನಾಗರಾಜ್ ರೆಡ್ಡಿ, ಹೆಚ್.ಎನ್. ಹಾಲೇಶ್, ಪಂಜು ಪೈಲ್ವಾನ್, ಪ್ರವೀಣ್ ಜಾಧವ್, ಕೆ.ಎನ್. ವೆಂಕಟೇಶ್, ಹೆಚ್.ಎನ್. ಶಿವಕುಮಾರ್, ತೋಳಹುಣಸೆ ಮುಪ್ಪಣ್ಣ, ಮಳಲ್ಕೆರೆ ಸದಾನಂದ್, ಪಿ.ಸಿ. ಶ್ರೀನಿವಾಸ್,  ರಘುನಂದನ್ ಅಂಬರ್‌ಕರ್, ಲೋಹಿತ್ ಚನ್ನಗಿರಿ, ಶಿವನಹಳ್ಳಿ ರಮೇಶ್, ಶಿವಕುಮಾರ್ ಮತ್ತಿತರರಿದ್ದರು. 

error: Content is protected !!