ಶ್ರೀ ಶರಣ ಬಸವೇಶ್ವರರ 40 ಮೂರ್ತಿಗಳ ಪ್ರತಿಷ್ಠಾಪನೆ

ಶ್ರೀ ಶರಣ ಬಸವೇಶ್ವರರ 40 ಮೂರ್ತಿಗಳ ಪ್ರತಿಷ್ಠಾಪನೆ

ಮಹಾಪ್ರತ್ಯಂಗಿರಾ ದೇವಿ ಯಾಗ, ಕಂಕಣ ಭಾಗ್ಯ ಪೂಜೆ, ಪುರಾಣ: ಪ್ರಣಾವಾನಂದರಾಮ್ ಶ್ರೀ

ಜಾತಿಗಣತಿ ವರದಿ ಬಿಡುಗಡೆಗೆ ಒತ್ತಾಯ

ಸರ್ಕಾರವು ಈ ಕೂಡಲೇ ಜಾತಿ ಗಣಪತಿ ವರದಿ ಬಿಡುಗಡೆ ಮಾಡಬೇಕು ಎಂದು ಡಾ.ಪ್ರಣಾವನಂದರಾಮ್ ಸ್ವಾಮೀಜಿ ಒತ್ತಾಯಿಸಿದರು.

ಬ್ರಹ್ಮಶ್ರೀ ನಾರಾಯಣ ಗುರು ನಿಗಮವೂ ಸೇರಿದಂತೆ ಹಿಂದುಳಿದ ವರ್ಗಗಳ ನಿಗಮಗಳಿಗೆ ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡುವಂತೆ ಸ್ವಾಮೀಜಿ ಆಗ್ರಹಿಸಿದರು.

ಸರ್ಕಾರ 23 ನಿಗಮಗಳ ಪೈಕಿ 5 ನಿಗಮಗಳಿಗೆ ಮಾತ್ರ ಹಣ ನೀಡಿದ್ದು, ಹಿಂದುಳಿದ ವರ್ಗಕ್ಕೂ ಎಲ್ಲಾ ಸೌಲಭ್ಯಗಳು ಸಿಗಲಿ ಎಂಬ ಹಿನ್ನೆಲೆಯಲ್ಲಿ ಬರುವ ಬಜೆಟ್ ಅಧಿವೇಶನದಲ್ಲಿ ಎಲ್ಲಾ ಹಿಂದುಳಿದ ವರ್ಗಗಳ ನಿಗಮಗಳಿಗೆ ಅನುದಾನ ನೀಡಬೇಕು. ಮಠಗಳಿಗೂ ಸರ್ಕಾರ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ದಾವಣಗೆರೆ, ಜ. 13- ರಾಣೇಬೆನ್ನೂರು ತಾಲ್ಲೂಕು ಅರೇಮಲ್ಲಾಪುರ ಗ್ರಾಮದ ಶ್ರೀ ಶರಣ ಬಸವೇಶ್ವರ ಮಹಾಸಂಸ್ಥಾನದಲ್ಲಿ ಇದೇ ಏಪ್ರಿಲ್ 28ರ ಸೋಮವಾರ ಶ್ರೀ ಶರಣ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಶರಣ ಬಸವೇಶ್ವರ 40 ಮೂರ್ತಿಗಳ ಪುನರ್ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಂಸ್ಥಾನದ ಪೀಠಾಧಿಪತಿ ಡಾ.ಪ್ರಣವಾನಂದರಾಮ್ ಸ್ವಾಮೀಜಿ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸ್ವಾಮೀಜಿ, 108 ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸಂಕಲ್ಪ ನಮ್ಮದಾಗಿದ್ದು, ಈ ಪೈಕಿ ಅಂದು  ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ 40 ಮೂರ್ತಿಗಳ ಪ್ರತಿಷ್ಠಾಪನೆ ನಡೆಯಲಿದೆ ಎಂದರು. ಅದಕ್ಕೂ ಮುನ್ನಾ ದಿನ ಏ.27ರ ಭಾನುವಾರ ಸಂಜೆ 5 ಗಂಟೆಗೆ ಉಪ್ಪಿನ ಮಾಳಿ ಶ್ರೀ ಚೌಡೇಶ್ವರಿ ದೇವಸ್ಥಾನದಿಂದ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು. ನೆಗಳೂರು ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ ಎಂದರು.

ಮಹಾಪ್ರತ್ಯಂಗಿರಾ ದೇವಿ ಯಾಗ:  ದಿ.28ರಂದು ಬೆಳಿಗ್ಗೆ ಮಹಾ ಪ್ರತ್ಯಂಗಿರಾ ದೇವಿ ಯಾಗ ಹಮ್ಮಿಕೊಂಡಿದ್ದು, ಯಾಗದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ. ಯಾಗದ ಯಜಮಾನನ ಸ್ಥಾನದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಇರಲಿದ್ದು, ಕೇರಳದ ಕಾಲಭೈರವಾನಂದ ಸ್ವಾಮೀಜಿ ಯಾಗ ನಡೆಸಿಕೊಡಲಿದ್ದಾರೆ. ಆರೋಗ್ಯ, ಶತ್ರುನಾಶ ಮೊದಲಾದ ಕಾರಣಕ್ಕಾಗಿ ಈ ಯಾಗ ಮಾಡಲಾಗುತ್ತದೆ ಎಂದರು.

ಕೇರಳದ ತಾಂತ್ರಿಕ ವಿಧಿಗಳ ಪ್ರಕಾರ ನಡೆಯುವ ಈ ಯಾಗದಲ್ಲಿ 400 ಕೆ.ಜಿ ಮೆಣಸಿನಕಾಯಿ, 600 ಕೆಜಿ ತುಪ್ಪ, 150 ಕೆಜಿ ಸಾಸಿವೆ, 100 ಕೆಜಿ ಬತ್ತಿ, 51 ಬಗೆಯ ಹಣ್ಣು ಸೇರಿದಂತೆ 300 ಪದಾರ್ಥಗಳನ್ನು ಬಳಕೆ ಮಾಡಲಾಗುತ್ತದೆ ಎಂದು ಸ್ವಾಮೀಜಿ ವಿವರಿಸಿದರು.

ದಿ.26ರಂದು ಮಹಾ ಕಂಕಣ ಭಾಗ್ಯ ಪೂಜೆ, ಧನ್ವಂತರಿ ಹೋಮವೂ ನಡೆಯಲಿದೆ.  ಏ.17 ರಿಂದ 27ರವರೆಗೆ ಶರಣಬಸವೇಶ್ವರರ ಪುರಾಣ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಮಹಾಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪನವರು ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆರ್.ಪ್ರತಾಪ್, ರಾಜೇಶ್ ಈಳಿಗೇರ, ಮಹಾಂತೇಶ್ ಆರ್., ರಮೇಶ್  ಬೆಳಲಗೆರೆ ಇದ್ದರು.

error: Content is protected !!