ಹರಿಹರ, ಜ. 14 – ನಗರದ ತುಂಗಭದ್ರಾ ನದಿ ದಡದಲ್ಲಿ ಮಂಗಳವಾರ ಸಹಸ್ರಾರು ಜನರು ಸೇರಿ ಗಂಗಾ ಪೂಜೆ ನೆರೆವೇರಿಸಿ, ಸಹ ಭೋಜನ ಮಾಡಿ ಮಕರ ಸಂಕ್ರಾಂತಿಯನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.
ಬೆಳಿಗ್ಗೆಯಿಂದಲೇ ಬೈಕ್, ಆಟೋ, ಕಾರು, ಟ್ರ್ಯಾಕ್ಟರ್, ಎತ್ತಿನ ಗಾಡಿಯಲ್ಲಿ ಕುಟುಂಬದ ಸದಸ್ಯರೊಂದಿಗೆ ನದಿಯ ಎರಡೂ ಭಾಗದ ದಡಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಜನರು ನದಿಯಲ್ಲಿ ಸ್ನಾನ ಮಾಡಿ, ಗಂಗಾ ಪೂಜೆ ಮಾಡುತ್ತಿದ್ದರು, ನಂತರ ಕುಟುಂಬದ ಸದಸ್ಯರೊಂದಿಗೆ ಸೇರಿ ಸಹ ಭೋಜನ ಮಾಡಿದರು.
ಮೆನು : ಜೋಳದ ರೊಟ್ಟಿ, ಖಡಕ್ ರೊಟ್ಟಿ, ಎಳ್ಳಿನ ರೊಟ್ಟಿ, ಚಪಾತಿ, ಶೇಂಗಾ, ಎಳ್ಳು, ಕಡ್ಲೆ ಚಟ್ನಿ, ಹೆಸರ ಕಾಳು, ಕಡಲೆ ಕಾಳು, ತೊಗರಿ ಇತರೆ ಧಾನ್ಯಗಳ ಪಲ್ಯ, ಚಿತ್ರಾನ್ನ, ಮೊಸರನ್ನ, ಪಲಾವ್, ಗೀ ರೈಸ್, ಕೋಸಂಬರಿ, ಶ್ಯಾವಿಗೆ ಪಾಯಸ, ಲಾಡು, ಬೂಂದಿಯಂತಹ ಸಿಹಿ ತಿನಿಸು, ಅನ್ನ ಸಾಂಬಾರ್, ಮಜ್ಜಿಗೆ ಹೀಗೆ ಬಗೆ, ಬಗೆಯ ಭಕ್ಷ್ಯ ಭೋಜನ ಕಂಡು ಬಂದವು.
ನದಿಯ ಪಶ್ಚಿಮ ದಿಕ್ಕಿನ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮುಂಭಾಗದ ವಿಶಾಲವಾದ ದಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಡು ಬಂದರು, ಉಳಿದಂತೆ ಪೂರ್ವ ಭಾಗದ ರಾಘವೇಂದ್ರ ಸ್ವಾಮಿ ಮಠದ ಸಮೀಪದ ತುಂಗಭದ್ರಾರತಿ ಮಂಟಪದ ಆವರಣದಲ್ಲೂ ಜನರು ಹಬ್ಬದಾಚರಣೆ ಮಾಡಿದರು.
ಉಳಿದಂತೆ ಹುಬ್ಬಳ್ಳಿಯ ವರದಶ್ರೀ ಫೌಂಡೇಶನ್ ಸಂಸ್ಥೆಯ ಪದಾಧಿಕಾರಿಗಳು ನದಿ ದಡದಲ್ಲಿ ಸ್ನಾನ ಮಾಡಲು ಉಪಯೋಗಿಸುವ ಕಡಲೆ ಹಿಟ್ಟಿನ ಪೊಟ್ಟಣಗಳನ್ನು ಜನರಿಗೆ ಉಚಿತವಾಗಿ ವಿತರಿಸಿದರು. ಸಾಬೂನಿನಿಂದ ಸ್ನಾನ ಮಾಡುವುದರಿಂದ ಜಲಚರಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ ಕಡಲೆ ಹಿಟ್ಟನ್ನು ಬಳಸಿ ಎಂದು ಜಾಗೃತಿ ಮೂಡಿಸಿದರು. ದಾವಣಗೆರೆಯ ಸಿದ್ಧಗಂಗಾ ಶ್ರೀ ಸ್ವಯಂ ಪ್ರೇರಿತ ರಕ್ತ ಕೇಂದ್ರದವರು ಆಸಕ್ತ ದಾನಿಗಳಿಂದ ರಕ್ತ ಸಂಗ್ರಹಿಸಿದರು.
ಅವ್ಯವಸ್ಥೆ: ಸಂಕ್ರಾಂತಿ ನಿಮಿತ್ತ 10 ಸಾವಿರಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದ್ದರೂ ಹರಿಹರ ಮತ್ತು ಕುಮಾರ ಪಟ್ಟಣಂ ಪೊಲೀಸ್ ಠಾಣೆಯ ಕೆಲವೇ ಸಿಬ್ಬಂದಿ ಕಂಡು ಬಂದರು, ವಾಹನಗಳ ಸಂಚಾರ ನಿಯಂತ್ರಣ ಮಾಡಲಾಗದೆ, ಸೇತುವೆ ಮೇಲೆ ಹಾಗೂ ನದಿ ದಡಕ್ಕೆ ಇಳಿಯುವ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.
ನದಿ ದಡದಲ್ಲಿ ಮೊಬೈಲ್ ಶೌಚಾಲಯ, ಸ್ನಾನದ ನಂತರ ಬಟ್ಟೆ ಬದಲಿಸಲು ಮೊಬೈಲ್ ಬಾತ್ ರೂಂ ವ್ಯವಸ್ಥೆ ಮಾಡಲು ನನ್ನ ಊರು, ನನ್ನ ಹೊಣೆ ಸಂಸ್ಥೆಯವರು ಹರಿಹರ ನಗರಸಭೆ ಹಾಗೂ ರಾಣೇಬೆನ್ನೂರು ತಾಲ್ಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮ ಪಂಚಾಯ್ತಿಯವರಿಗೆ ಕೋರಿದ್ದರೂ ಕೂಡ ಈ ಸೌಲಭ್ಯ ಸಿಗದೇ ಜನರು ಪರದಾಡಿದರು.