ಬಹುತ್ವ, ಭಾವೈಕ್ಯತೆ ಉಳಿಸುವವನೇ ಕನ್ನಡಿಗ

ಬಹುತ್ವ, ಭಾವೈಕ್ಯತೆ ಉಳಿಸುವವನೇ ಕನ್ನಡಿಗ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ 

ಜಗಳೂರು, ಜ.12- ಕನ್ನಡದ ಸಂವೇದನೆ ಅರ್ಥಮಾಡಿಕೊಂಡು ಬಹುತ್ವ ಮತ್ತು ಭಾವೈಕ್ಯತೆ, ಬಹುಸಂಸ್ಕೃತಿಯನ್ನು ಉಳಿಸುವವರು ನಿಜವಾದ ಕನ್ನಡಿಗರು ಎಂದು ಖ್ಯಾತ ಸಾಹಿತಿ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಸೋಮವಾರ ಪಟ್ಟಣದ ಬಯಲು ರಂಗಮಂದಿರದಲ್ಲಿ 14ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲಾ ಜಾತಿ ಧರ್ಮದವರು ಕನ್ನಡ ಉಳಿಸಿದ್ದಾರೆ. ಕನ್ನಡಿಗರನ್ನು ಉಳಿಸಿದರೆ ಕನ್ನಡ ಭಾಷೆ ಉಳಿಯುತ್ತದೆ ಎಂದರು.

ಕನ್ನಡ ಭಾಷೆಗೆ ಸಾವಿಲ್ಲ, ಸವಾಲುಗಳು ಇವೆ. ಆಳುವವರನ್ನು ಅರಗಿಸಿಕೊಂಡು ಬೆಳೆದಿರುವ ಶಕ್ತಿ ಕನ್ನಡ ಭಾಷೆಗೆ ಇದೆ. ಸಾವಿರಾರು ವರ್ಷಗಳಿಂದ ಕನ್ನಡ ಭಾಷೆ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ ಎಂದರು.

ಪ್ರಪಂಚದಲ್ಲಿ 6703 ಭಾಷೆಗಳಿವೆ. ಎಷ್ಟೋ ಭಾಷೆಗಳು ವಿನಾಶ ಹೊಂದಿವೆ. ಆದರೆ ಭಾಷಾ ವಿಜ್ಞಾನಿಗಳ ಅನ್ವೇಷಣೆಯಂತೆ ಜಗತ್ತಿನ ಮೊದಲ 20 ಭಾಷೆಗಳಲ್ಲಿ ಕನ್ನಡವೂ ಒಂದು ಎಂಬುದನ್ನು ನಂಬಬೇಕಿದೆ ಎಂದರು.

ಸಾಹಿತ್ಯ ಸಮ್ಮೇಳನಗಳು ಕೋಟಿ ಕೋಟಿ ಹಣ ದಿಂದ ಕನ್ನಡ ಭಾಷೆಯ ಮೌಲ್ಯ  ಅಳೆಯದೆ, ಸರಳವಾಗಿದ್ದು ಸಾಮಾಜಿಕ, ಸಾಂಸ್ಕೃತಿಕ ವೇದಿಕೆಯಾಗಬೇಕು ಎಂಬುದು ನನ್ನ  ಆಶಯ ಎಂದರು.

ರಾಜಪ್ರಭುತ್ವದ ಒಡೆಯನಾಗಿದ್ದುಕೊಂಡು ನಾಲ್ವಡಿ ಕೃಷ್ಣ ರಾಜ್ ಒಡೆಯರ್ ಅವರು ಪ್ರಜಾಸತ್ತಾತ್ಮಕ ಸ್ವಾಯತ್ತ ಸಂಸ್ಥೆ ಕಸಾಪ ಸ್ಥಾಪಿಸಿದರು. ಮಾಜಿ ಸಿಎಂ ದೇವರಾಜ ಅರಸು ಅವರ ಕಲ್ಪನೆಯಂತೆ ಅಕಾಡೆಮಿಗಳು ಸ್ಥಾಪನೆಯಾದವು. ಸಾಂಸ್ಕೃತಿಕ ಅಕಾಡೆಮಿಗಳ ಮೇಲೆ ಆಡಳಿತ ಸರ್ಕಾರಗಳಿಂದ ಆರ್ಥಿಕ ಕಡಿವಾಣವಿರಲಿ. ಸಾಂಸ್ಕೃತಿಕ ಕಡಿವಾಣ ಹಾಕಬಾರದು. ಎಲ್ಲದಕ್ಕೂ ಸರ್ಕಾರಗಳ ಬಾಗಿಲು ಬಡಿಯಬಾರದು ಎಂದರು.

ಕನ್ನಡ ನಾಡಿನಲ್ಲಿ ಸಾಹಿತಿಗಳು ಬಹಳ ವಿಶೇಷವೇನಲ್ಲ. ಬರೆಯದ ಬರಹಗಾರರನ್ನು, ಹಾಡದ ಹಾಡುಗಾರರನ್ನು, ಓದುಬಾರದ ಸಾಹಿತ್ಯಾಸಕ್ತಿಗಳನ್ನು, ನೃತ್ತಿಸದ ನೃತ್ಯಗಾರರನ್ನು ಗೌರವಿಸುವವರೇ ನಿಜವಾದ ಸಾಹಿತಿಗಳು ಎಂದರು.

ಸಮಾಜದಲ್ಲಿ ಚಿಂತಕರು, ಕಲಾವಿದರು ಜನರಿಂದ ಮನ್ನಣೆ ಬಯಸಿದರೆ, ಜನಗಳಿಗೆ ಜವಾಬ್ದಾರಿಯಾಗುವ ಸಾಹಿತಿಗಳ ಅಗತ್ಯವಿದೆ. ಕನ್ನಡ ಜನರನ್ನು ಉಳಿಸಿದರೆ ಕನ್ನಡ ಭಾಷೆ ಉಳಿಯುವಂತವಾಗಬೇಕು. ಕನ್ನಡದ ಮಾಧ್ಯಮದಲ್ಲಿ ಓದಿದರೆ ಉದ್ಯೋಗ ಸಿಗುತ್ತದೆ ಎಂಬ ವಾತಾವರಣ ನಿರ್ಮಾಣ ವಾಗಬೇಕು ಎಂದರು.

ಜಿಲ್ಲಾಧಿಕಾರಿ ಡಾ. ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ,  ಮಾತೃಭಾಷೆಯ ಕಲಿಕೆಯಿಂದ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.

ಬಳ್ಳಾರಿಯಂತಹ ಗಡಿಭಾಗಗಳಲ್ಲಿ ಪತ್ರಿಕಗಳೂ ಅನ್ಯಭಾಷೆಯಲ್ಲಿವೆ. ಕನ್ನಡ ಎಂಬುದು ಹಿರಿಮೆ, ಕೀಳಿರಿಮೆಯಲ್ಲ. ಇಂಗ್ಲೀಷ್ ಮಾಧ್ಯಮದಿಂದ ಸಾಧನೆ ಮಾಡುತ್ತೇವೆ ಎಂಬುದು ಸುಳ್ಳು ಎಂದು ಪ್ರತಿಪಾದಿಸಿದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಚಿಂತಕ, ಡಾ.ಎ.ಬಿ.ರಾಮಚಂದ್ರಪ್ಪ, ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷ ಜಯದೇವನಾಯ್ಕ, ಶಾಸಕ ಬಸವಂತಪ್ಪ, ಸರ್ಕಾರಿ ನೌಕರ ಸಂಘದ ತಾಲ್ಲೂಕು ಅಧ್ಯಕ್ಷ ಎ.ಎಲ್.ತಿಪ್ಪೇಸ್ವಾಮಿ, ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ, ಜಿ.ಪಂ‌ ಮಾಜಿ ಸದಸ್ಯ ಕೆಪಿ.ಪಾಲಯ್ಯ, ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ, ನಿಕಟಪೂರ್ವ ಜಿಲ್ಲಾಧ್ಯಕ್ಷ  ಮಂಜುನಾಥ್ ಕುರ್ಕಿ, ಮಾಜಿ ಅಧ್ಯಕ್ಷ ಸದಾಶಿವ ಶ್ಯಾಗಲೆ, ಕೆ.ಎಸ್.ಎಸ್ ಶಿಕ್ಷಣ ಸಂಸ್ಥೆಯ ಎಚ್.ಕೆ.ಬಸವರಾಜ್, ಕಸಾಪ ಜಿಲ್ಲಾ ಕೋಶಾಧ್ಯಕ್ಷ ರಾಘವೇಂದ್ರ ನಾಯರಿ, ಕಸಾಪ ಜಿಲ್ಲಾ ಸಹಕಾರ್ಯದರ್ಶಿ ಕೆ.ಎಸ್. ವೀರೇಶ್ ಪ್ರಸಾದ್ ,ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಜಿಗಳಿ ಪ್ರಕಾಶ್, ಬ್ರಹ್ಮಾಕುಮಾರಿ ಈಶ್ವರಿ ವಿದ್ಯಾಲಯದ ಭಾರತಿ ಅಕ್ಕ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ  ಇ.ಎಂ ಮಂಜುನಾಥ್, ಕಸಾಪ ತಾಲ್ಲೂಕು ಅಧ್ಯಕ್ಷೆ ಸುಜಾತಮ್ಮ ಇದ್ದರು.

error: Content is protected !!