ಹಿಂದು ಧರ್ಮದಲ್ಲಿ ಮಹಿಳೆಗೆ ಗೌರವ ಸ್ಥಾನ

ಹಿಂದು ಧರ್ಮದಲ್ಲಿ ಮಹಿಳೆಗೆ ಗೌರವ ಸ್ಥಾನ

ಹಿಂದು ಧರ್ಮದಲ್ಲಿ ಮಹಿಳೆಗೆ ಗೌರವ ಸ್ಥಾನ - Janathavaniದಾವಣಗೆರೆ, ಡಿ. 27 – ಹಿಂದು ಧರ್ಮದಲ್ಲಿ ಸ್ತ್ರೀಯರಿಗೆ ಗೌರವದ ಸ್ಥಾನವಿದೆ ಎಂದು ವೇದ ಪಂಡಿತ ನರಹರಿ ಆಚಾರ್ಯ ಮುತ್ತಗಿ ಹೇಳಿದರು. 

ನಗರದ ಲಾಯರ್ ರಸ್ತೆಯ ಸರ್ವಜ್ಞಾಚಾರ್ಯ ಸಂಘದಲ್ಲಿ ನಡೆದ ಶ್ರೀ ಮಾಧ್ವ ಯುವಕ ಸಂಘದ 44ನೇ ವಾರ್ಷಿಕೋತ್ಸವ ‘ಸಮಾಜಕ್ಕೆ ರಾಮಾಯಣದ ಕೊಡುಗೆ’ ವಿಷಯದ ಕುರಿತು ಪ್ರವಚನ ನೀಡಿದರು.

ಹಿಂದು ಧರ್ಮವು ಮಹಿಳೆಯರನ್ನು ಎಂದಿಗೂ ದೂಷಣೆ ಮಾಡಿಲ್ಲ. ಸಮಾನ ಸ್ಥಾನವನ್ನೇ ನೀಡಿದೆ. ಲಂಕಾ ದಹನದ ಸಂದರ್ಭದಲ್ಲಿ ರಾಮ ದೇವರ ಭಕ್ತ ಹನುಮಂತ ಇದನ್ನು ನಿರೂಪಿಸಿದ್ದಾರೆ ಎಂದು ರಾಮಾಯಣದ ಆ ಸಂದರ್ಭವನ್ನು ವಿವರಿಸಿದರು.

ರಾಮಾಯಣದಲ್ಲಿ ಬರುವ ಆಂಜನೇಯನ ಪಾತ್ರ, ಸೀತೆಯನ್ನು ಹುಡುಕಲು ಹನುಮಂತ ದೇವರು ಲಂಕೆಗೆ ಹಾರಿದ್ದು, ಆ ನಗರವನ್ನು ದಹಿಸಿದ್ದು, ಸೀತಾ ದೇವಿಯನ್ನು ಭೇಟಿಯಾಗಿ ಶ್ರೀರಾಮ ಚಂದ್ರನ ಸಂದೇಶವನ್ನು ತಲುಪಿಸಿದ್ದನ್ನು ವಿವರಿಸಿದರು.

ನಾವು ಧರ್ಮದ ರಕ್ಷಣೆ ಮಾಡಿದಾಗ ಧರ್ಮವು ನಮ್ಮನ್ನು ರಕ್ಷಿಸುತ್ತದೆ. ಗುರುಗಳ ಆಜ್ಞೆಯನ್ನು ಪರಿಪಾಲಿಸಬೇಕು. ದೊಡ್ಡವರ ಮಾತಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು ಎಂದು ತಿಳಿಸಿದರು.

ಪ್ರಸ್ತುತ ಸಂದರ್ಭದಲ್ಲಿ ನಮ್ಮ ಸನಾತನ ಧರ್ಮವನ್ನು ಉಳಿಸಿಕೊಳ್ಳಬೇಕಿದೆ. ಮಕ್ಕಳಲ್ಲಿ ಆ ಸಂಸ್ಕಾರವನ್ನು ಬೆಳೆಸಬೇಕಿದೆ. ಪ್ರತಿಯೊಂದು ವಿಷಯದಲ್ಲೂ ಮಕ್ಕಳು ನಮ್ಮನ್ನು ಅನುಕರಿಸುತ್ತಾರೆ. ನಮ್ಮ ಪರಂಪರೆಯನ್ನು ನಾವು ಕಾಪಾಡಿದರೆ ಮಕ್ಕಳು ಅದನ್ನು ಮುಂದುವರಿಸುತ್ತಾರೆ. ನಮ್ಮ  ಧರ್ಮದ ಶ್ರೇಷ್ಠತೆ ಕಾಪಾಡಬೇಕು. ನಮ್ಮ ವೇಷ ಭೂಷಣ, ನಡವಳಿಕೆಗಳು ಧರ್ಮದ ಘನತೆಯನ್ನು ಕಾಪಾಡುವಂತಿರಬೇಕು ಎಂದು ಹೇಳಿದರು.

ನಾವು ಭಗವಂತನ ನಾಮ ಸ್ಮರಣೆ ಮಾಡಬೇಕು. ನಮ್ಮ ಸತ್ಕರ್ಮಗಳ ಮೂಲಕ ದೇವರ ಅನುಗ್ರಹಕ್ಕೆ ಪಾತ್ರವಾಗಬೇಕು ಎಂದು ತಿಳಿಸಿದರು. ಪಂಡಿತ ಗೋಪಾಲಾಚಾರ್ ಮಣ್ಣೂರು, ಕೃಷ್ಣಾಚಾರ್ಯ ಮಣ್ಣೂರು ಇದ್ದರು.

error: Content is protected !!