ಹರಿಹರ, ಡಿ. 27 – ನಗರಸಭೆ ಪೌರಾಯುಕ್ತರ ವರ್ತನೆ ವಿರೋಧಿಸಿ ಸದಸ್ಯರೊಬ್ಬರು ಹಿಂಬರಹ ಪತ್ರವನ್ನು ಹರಿದು ತೂರಿದರೆ, ಮತ್ತೊಬ್ಬ ಸದಸ್ಯ ಸಭಾಂಗಣದ ನೆಲದ ಮೇಲೆ ಕುಳಿತು ಆಕ್ರೋಶ ವ್ಯಕ್ತಪಡಿಸಿದ ಘಟನೆ ಹರಿಹರ ಅಧಿವೇಶನದಲ್ಲಿ ಘಟಿಸಿದವು.
ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕೆಲವು ಸದಸ್ಯರು ಪೌರಾ ಯುಕ್ತರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ವಿವಿಧ ಶಾಖೆಗೆ ಬದಲಾವಣೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಹರಿದು ಹಾಕಿದ ಸದಸ್ಯ ದಾದಾಖಲಂದರ್, ಪೌರಾಯುಕ್ತರ ಕಡೆಗೆ ತೂರಿ ಧಿಕ್ಕಾರ ಕೂಗಿದರು.
ಸಾರ್ವಜನಿಕರಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ಪೌರಾಯುಕ್ತರಿಗೆ ತಿಳಿಸಿದರೂ ಸಹ, ಅದಕ್ಕೆ ಉತ್ತರ ನೀಡದೆ ಉದ್ಧಟತನ ತೋರಿ ದ್ದಾರೆ ಮತ್ತು ಜಿಲ್ಲೆಯ ಯೋಜನಾ ಅಧಿಕಾರಿಗಳು ಸೂಚನೆ ನೀಡಿದ್ದರೂ ಸ್ಪಂಧಿಸಿಲ್ಲ ಎಂದು ಹಿರಿಯ ಸದಸ್ಯ ಎ.ವಾಮನಮೂರ್ತಿ ಸಭಾಂಗಣದ ನೆಲದ ಮೇಲೆ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯ ಶಂಕರ್ ಖಟಾವ್ಕಾರ್ ಮಾತನಾಡಿ, ಪೌರಾಯುಕ್ತರು ಎಸ್.ಎಫ್.ಸಿ. ಮತ್ತು ಜನರಲ್ ಫಂಡ್ ಎಸ್.ಎಪ್.ಸಿ ಸೇರಿದಂತೆ ಇತರೆ ಹಣಕಾಸು ಯೋಜನೆಗಳ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಆದಷ್ಟು ಬೇಗ ಮುಗಿಸಿ ಕಾಮಗಾರಿಯನ್ನು ಪ್ರಾರಂ ಭಿಸಬೇಕು. ಸಬೂಬು ಹೇಳಿಕೊಂಡು ಈ ಕೆಲಸ ವನ್ನು ಮುಂದಕ್ಕೆ ಹಾಕುತ್ತಾ ಹೋದರೆ, ಜನರ ಆಕ್ರೋಶಕ್ಕೆ ಒಳಗಾಗಬೇಕಾಗುತ್ತದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅನೇಕ ಕನ್ನಡ ಪರ ಸಂಘಟನೆಯವರು ಕನ್ನಡ ಭವನ ನಿರ್ಮಾಣಕ್ಕೆ ನಿವೇಶನ ನೀಡುವಂತೆ ಮನವಿಯನ್ನು ಸಲ್ಲಿಸಿದ್ದಾರೆ. ಮುಂದಿನ ಸಭೆಯ ಅಜೆಂಡಾದಲ್ಲಿ ವಿಷಯ ಚರ್ಚೆಗೆ ತಂದು ನಿವೇಶನ ನೀಡಬೇಕು ಇದಕ್ಕೆ ಸರ್ವ ಸದಸ್ಯರ ಒಪ್ಪಿಗೆ ಕೂಡ ಇರುತ್ತದೆ ಎಂದು ಹೇಳಿದರು.
ಸದಸ್ಯ ಮುಜಾಮಿಲ್ ಬಿಲ್ಲು ಮಾತನಾಡಿ, ನಮ್ಮ ವಾರ್ಡಿನಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಮುತುವರ್ಜಿಯಿಂದ ಕೆಲಸವನ್ನು ಮಾಡದೇ ಇರುವು ದರಿಂದ ಸಾರ್ವಜನಿಕರ ನಿಂದನೆಗೆ ನಾವು ಗುರಿಯಾ ಗಿದ್ದೇವೆ. ಇದನ್ನು ಸರಿಪಡಿಸಬೇಕು ಮತ್ತು ಭಾರತ್ ಆಯಿಲ್ ಮಿಲ್ ಕಾಂಪೌಂಡ್ ಬಳಿ ವ್ಯಾಯಾಮ ಶಾಲೆ ಆರಂಭಿಸಬೇಕು ಎಂದು ಹೇಳಿದರು.
ಸದಸ್ಯ ವಸಂತ್ ಮಾತನಾಡಿ, 6 ಕೋಟಿ ರೂಪಾಯಿ ಕಲ್ಯಾಣ ಮಂಟಪದ ಕಂದಾಯ ಬಾಕಿ ಇದ್ದು, ಅದನ್ನು ಏಕೆ ವಸೂಲಿ ಮಾಡುತ್ತಿಲ್ಲ. ಬಡವರು ಸಣ್ಣ ಪುಟ್ಟ ಕಂದಾಯದ ಹಣವನ್ನು ಕಟ್ಟದೇ ಇದ್ದರೆ ಹಗಲು-ರಾತ್ರಿ ಅವರ ಮನೆಗಳಿಗೆ ಓಡಾಡಿ ಕಟ್ಟಿಸಿಕೊಳ್ಳುತ್ತೀರಿ ಎಂದರು. ಅಲ್ಲದೇ ದೂಡ ಕಚೇರಿ ಹರಿಹರದಲ್ಲಿ ಸ್ಥಾಪನೆ ಆಗಿ ಎರಡು ತಿಂಗಳು ಕಳೆದರೂ ಒಂದು ಕಟ್ಟಡದ ಲೈಸೆನ್ಸ್ ಕೂಡಾ ನೀಡದೇ ಇರುವುದರಿಂದ ಕಚೇರಿ ಇದ್ದೂ ಇಲ್ಲದಂತೆ ಆಗಿದೆ ಎಂದು ದೂರಿದರು.
ನಗರದಲ್ಲಿ ಹಿಂದೂ ರುದ್ರಭೂಮಿ ಬಹಳಷ್ಟು ಚಿಕ್ಕದಾಗಿರುತ್ತದೆ. ಶವ ಸಂಸ್ಕಾರಕ್ಕೆ ತೊಂದರೆ ಅಗಿದೆ. ಹಾಗಾಗಿ ರುದ್ರಭೂಮಿಗೆ ಹೆಚ್ಚಿನ ಜಮೀನನ್ನು ನೀಡುವುದಕ್ಕೆ ಮುಂದಾಗಬೇಕು ಮತ್ತು ಕಸವನ್ನು ಸಾಗಿಸುವ ವಾಹನಗಳಿಗೆ ಅಗತ್ಯ ಸಿಬ್ಬಂದಿ ಒದಗಿಸಬೇಕು ಎಂದು ಸದಸ್ಯೆ ರತ್ನ ಡಿ. ಉಜ್ಜೇಶ್ ಒತ್ತಾಯಿಸಿದರು.
ಸದಸ್ಯೆ ಅಶ್ವಿನಿ ಕೃಷ್ಣ ಮಾತನಾಡಿ, ಕಳೆದ 3 ವರ್ಷಗಳಿಂದ ನೀರಿನ ಸಮಸ್ಯೆ ಬಗ್ಗೆ ಸಭೆಯ ಗಮನಕ್ಕೆ ತಂದರೂ ಯಾವುದೇ ಪರಿಹಾರ ಸಿಕ್ಕಿಲ್ಲ ಮತ್ತು ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ವಿಚಾರಕ್ಕೆ ಸಂಬಂಧಿಸಿದಂತೆ ಎಷ್ಟೆಲ್ಲ ಮನವಿಯನ್ನು ಮಾಡಿಕೊಂಡರೂ ಉಪಯೋಗವಾಗಿಲ್ಲ ಎಂದು ಹೇಳಿದರು.
ಪಿ.ಎನ್ ವಿರೂಪಾಕ್ಷಪ್ಪ ಮತ್ತು ರಜನಿಕಾಂತ್ ಮಾತನಾಡಿ, ಗುತ್ತೂರು ಗ್ರಾಮದಲ್ಲಿ ದಲಿತರಿಗೆ ಅಂತ್ಯಕ್ರಿಯೆ ನಡೆಸಲು ಸ್ಥಳ ಇಲ್ಲವಾಗಿದೆ . ಇತ್ತೀಚೆಗೆ ಮಳೆ ಬಂದಾಗ ನೀರಿನಲ್ಲಿ ಹೋಗಿ ಅಂತ್ಯಸಂಸ್ಕಾರ ಮಾಡಿ ರಾಜ್ಯದಾದ್ಯಂತ ಸುದ್ದಿ ಹರಡಿತ್ತು. ಹಾಗಾಗಿ ಸ್ಮಶಾನಕ್ಕೆ ಎರಡು ಎಕರೆ ಜಮೀನನ್ನು ನೀಡುವಂತೆ ಆಗ್ರಹಿಸಿದರು.
ಸದಸ್ಯ ದಿನೇಶ್ ಬಾಬು ಮಾತನಾಡಿ, ನಗರದ ಹಳ್ಳದಕೇರಿ ಬಡಾವಣೆಯ ವಾಲ್ಮೀಕಿ ಭವನಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಹೇಳಿದರು.
ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ, ಎಲ್ಲದಕ್ಕೂ ಪೌರಾಯುಕ್ತರೇ ಕಾರಣ ಎಂದು ಹೇಳಿದರೆ ಹೇಗೆ, ನಾನು ಟೆಂಡರ್ ಸಮಸ್ಯೆಯನ್ನು ನಿಭಾಯಿಸಲು ಮುಂದಾಗಿರುವೆ. ಆದರೆ ನಮಗೆ ಒಂದಿಷ್ಟು ತೊಡಕುಗಳು ಎದುರಾದವು. ಈಗ ನಾನು ಮತ್ತು ಅಧ್ಯಕ್ಷರು ಸೇರಿ ನಗರದ ಅಭಿವೃದ್ಧಿಗೆ ಹೆಚ್ಚಿನ ಮಹತ್ವವನ್ನು ನೀಡುವುದಾಗಿ ಹೇಳಿದರು.
ನಗರಸಭೆ ಅಧಿಕಾರಿ ಲಕ್ಷ್ಮಣ ಮಾತನಾಡಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್ನ 400 ಅರ್ಜಿಗಳು ವಿಲೇವಾರಿ ಆಗದೆ ಇರುತ್ತವೆ. ಈಗ ಸರ್ಕಾರದ ಸುತ್ತೋಲೆ ಬಂದಿದ್ದು, ಆದಷ್ಟು ಬೇಗ ವಿಲೇವಾರಿ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಗುತ್ತೂರು ಜಂಬಣ್ಣ, ಸದಸ್ಯರಾದ ಕೆ.ಜಿ. ಸಿದ್ದೇಶ್, ಆರ್.ಸಿ ಜಾವೇದ್, ಹನುಮಂತಪ್ಪ, ನಿಂಬಕ್ಕ ಚಂದಪೂರ್, ಲಕ್ಷ್ಮೀ ಮೋಹನ್, ಶಾಹಿನಾಬಾನು, ಶಹಜಾದ್ , ಬಿ.ಅಲ್ತಾಫ್, ಎಂ.ಎಸ್. ಬಾಬುಲಾಲ್, ಸುಮಿತ್ರಮ್ಮ, ನಾಗರತ್ನ, ಅಬ್ದುಲ್ ಅಲಿಂ, ನಾಮನಿರ್ದೇಶನ ಸದಸ್ಯರಾದ ಕೆ.ಬಿ. ರಾಜಶೇಖರ, ಸಂತೋಷ ದೊಡ್ಡಮನಿ, ದಿವಾಕರ್, ನಗರಸಭೆ ಎಇಇ ನವೀನ್ಕುಮಾರ್, ಮ್ಯಾನೇಜರ್ ನಿರಂಜನಿ ಇತರರು ಹಾಜರಿದ್ದರು.