`ಸರ್.ಎಂ.ವಿ ವೈಭವ್’ ಕಾರ್ಯಕ್ರಮದಲ್ಲಿ ರೈತ ಮಹಿಳೆ ಡಾ. ಕವಿತಾ ಮಿಶ್ರಾ ಅಭಿಮತ
ದಾವಣಗೆರೆ, ಡಿ.22- ವಿದ್ಯಾರ್ಥಿಗಳು, ಪಾಲಕರ ತ್ಯಾಗ ಮತ್ತು ಕನಸನ್ನು ಅರಿತು, ಕಠಿಣ ಶ್ರಮವಹಿಸಿ ವಿದ್ಯಾಭ್ಯಾಸದಲ್ಲಿ ತೊಡಗಬೇಕು ಎಂದು ಪ್ರಗತಿಪರ ರೈತ ಮಹಿಳೆ ಡಾ. ಕವಿತಾ ಮಿಶ್ರಾ ತಿಳಿಸಿದರು.
ಸ್ಥಳೀಯ ಸರ್.ಎಂ.ವಿ ಸಮೂಹ ಸಂಸ್ಥೆಗಳ ವತಿಯಿಂದ ಸರ್.ಎಂ.ವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ `ಸರ್.ಎಂ.ವಿ ವೈಭವ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾಭ್ಯಾಸದಲ್ಲಿ ಅಧಿಕ ಅಂಕ ಗಳಿಸಿ, ಉತ್ತಮ ಸ್ಥಾನ ಹೊಂದುವುದಷ್ಟೇ ಸಾಧನೆ ಅಲ್ಲ. ಉತ್ತಮ ತಾಯಿ, ಹೆಂಡತಿ, ಮಗ-ಮಗಳು ಮತ್ತು ಉತ್ತಮ ಸೊಸೆಯಾಗುವ ಜತೆಗೆ ಜವಾಬ್ದಾರಿ ಜೀವನ ನಡೆಸುವುದೂ ಸಹ ಸಾಧನೆ ಎಂದು ತಿಳಿಸಿದರು. ಯಾವ ಕೆಲಸವು ಸಣ್ಣದಲ್ಲ, ದೊಡ್ಡದೂ ಅಲ್ಲ. ಪ್ರತಿಯೊಂದು ಕೆಲಸಕ್ಕೂ ತನ್ನದೇ ಆದ ಮಹತ್ವವಿದೆ. ಈ ನಿಟ್ಟಿನಲ್ಲಿ ಸಾಧನೆಗೆ ಹಿಗ್ಗದೆ, ಸೋಲಿಗೆ ಕುಗ್ಗದೆ ಸರಳ ಜೀವನ ನಡೆಸಬೇಕು ಎಂದು ಕಿವಿಮಾತು ನೀಡಿದರು.
ಐಐಟಿ, ಐಎಎಸ್, ಇಂಜಿನಿಯರ್ ಮತ್ತು ಡಾಕ್ಟರ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಿಂಚಬೇಕೆನ್ನುವ ವಿದ್ಯಾರ್ಥಿ ಗಳು, ಕೃಷಿ ಕ್ಷೇತ್ರದಲ್ಲೂ ಸಾಧನೆ ಮಾಡಬೇಕು. ಆದರೆ ಯುವಕರು ರೈತರಾಗಲು ಹಿಂಜರಿಯುತ್ತಿರುವುದು ಶೋಚನೀಯ ಎಂದರು.
ಗದ್ದೆ ಇದ್ದವನೇ ಶ್ರೀಮಂತ. ಆದರೂ, ರೈತರು ಸೊಕ್ಕು ತೋರುವುದಿಲ್ಲ. ಈ ನಿಟ್ಟಿನಲ್ಲಿ ಜಗತ್ತು ರೈತನ ಕುಟುಂಬಕ್ಕೆ ನೀಡುವ ಗೌರವ ಬದಲಾಗ ಬೇಕು ಎಂದು ಹೇಳಿದರು.
ಅದ್ಭುತ ಹಾಗೂ ಅಚ್ಚರಿ ಗಳನ್ನು ಸೃಷ್ಟಿಸಲೆಂದೇ ದೇವರು ಮಹಿಳೆಯರನ್ನು ಸೃಷ್ಟಿಸಿದ್ದಾನೆ. ಮನಸ್ಸು ಮಾಡಿದರೆ ಜಗತ್ತನ್ನೇ ಅಲ್ಲಾಡಿಸುವ ಶಕ್ತಿ ಮಹಿಳೆಯ ರಿಗಿದೆ. ಆದ್ದರಿಂದ ಹೆಣ್ಣನ್ನು ಗೌರವಿಸುವ ಸಂಸ್ಕಾರ ವನ್ನು ಎಲ್ಲರು ಬೆಳೆಸಿಕೊಳ್ಳಬೇಕು ಎಂದರು.
ಇದೇ ವೇಳೆ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಸಾಧನೆಗೈದ ಕಾಲೇಜಿನ 24 ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು. ಕೆ.ಎಂ. ಸೃಷ್ಟಿ ಎಂಬ ವಿದ್ಯಾರ್ಥಿನಿಗೆ ಸಂಸ್ಥೆಯ ವತಿಯಿಂದ 3 ಲಕ್ಷ ನಗದು ಬಹುಮಾನ ನೀಡಲಾಯಿತು. ಸಂಸ್ಥೆಯ ಕಾರ್ಯದರ್ಶಿ ಎಸ್.ಜೆ. ಶ್ರೀಧರ್ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿ. ಸುರೇಶ್ ಕುಮಾರ್, ಜಗನ್ ಮೋಹನ್, ಎಲ್.ವಿ ಪ್ರದೀಪ್ ಕುಮಾರ್, ಸೈಯದ್ ಸಂಶೀರ್, ಪದ್ಮನಾಭ, ಕಾಲೇಜಿನ ಸಿಬ್ಬಂದಿ, ಪಾಲಕರಿದ್ದರು.