ಹರಿಹರ: ನಾಳೆ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ

ದಾವಣಗೆರೆ, ಡಿ. 11- ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ, ಕಾಂತರಾಜ್ ವರದಿ ಸಾರ್ವಜನಿಕಗೊಳಿಸಿ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ, ಸಾಮಾಜಿಕ ನ್ಯಾಯಕ್ಕಾಗಿ ಆಗ್ರಹಿಸಿ ಎಸ್.ಡಿ.ಪಿ.ಐ. ಉಡುಪಿಯಿಂದ ಡಿ. 10 ರಂದು ಪ್ರಾರಂಭಿಸಿರುವ `ಚಲೋ ಬೆಳಗಾವಿ, ಅಂಬೇಡ್ಕರ್ ಜಾಥಾ- 2′ ನಾಡಿದ್ದು ದಿನಾಂಕ 13 ರಂದು ಹರಿಹರ ತಲುಪಲಿದೆ ಎಂದು ಸಂಘಟನೆಯ ಖಜಾಂಚಿ ಎಂ.ಆರ್. ತಾಹೀರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರೊ. ಬಿ. ಕೃಷ್ಣಪ್ಪ ಅವರ ಸಮಾಧಿಗೆ ಮಾಲಾರ್ಪಣೆ ಮಾಡಿದ ನಂತರ ಜಾಥಾವು ಪಕ್ಕೀರಸ್ವಾಮಿ ಮಠದವರೆಗೆ ಸಾಗಿ, ನಂತರ ಜಾಥಾವು ಕಾಲ್ನಡಿಗೆಯೊಂದಿಗೆ ಶಿವಮೊಗ್ಗ ವೃತ್ತ, ಹರಪನಹಳ್ಳಿ ವೃತ್ತದ ಮೂಲಕ ಹರಿಹರ ತಾಲ್ಲೂಕು ಕಚೇರಿ ತಲುಪಲಿದೆ. ಅಲ್ಲಿ ಸಭಾ ಕಾರ್ಯಕ್ರಮ ನಡೆಸಿದ ನಂತರ ರಾಣೇಬೆನ್ನೂರು ಮಾರ್ಗದ ಕಡೆ ಸಾಗಲಿದೆ ಎಂದು ಹೇಳಿದರು.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಕರ್ನಾಟಕ ವತಿಯಿಂದ ಸಾಮಾಜಿಕ ನ್ಯಾಯಕ್ಕಾಗಿ ಒತ್ತಾಯಿಸಿ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ- 2 ಕಾರ್ಯಕ್ರಮ ನಡೆಯಲಿದೆ. ನಮ್ಮದು ಅಹಿಂದ ಸರ್ಕಾರ, ಸಾಮಾಜಿಕ ನ್ಯಾಯದ ಪರ ಇದ್ದೇವೆ ಎಂದು ಹೇಳಿಕೊಳ್ಳುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಅನೇಕ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಿಲ್ಲ ಎಂದು ದೂರಿದರು.

ಕೇವಲ ನೆಪ ಮಾತ್ರದ ಮೌಖಿಕ ಹೇಳಿಕೆಗಳನ್ನು ನೀಡಿ ಕಣ್ಣೊರೆಸುವ ತಂತ್ರವನ್ನು ಮಾಡುತ್ತಿದೆ. ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯನ್ನು ಕೂಡಲೇ ಜಾರಿಗೊಳಿಸಬೇಕು. ಮುಸ್ಲಿಮರ 2ಬಿ ಮೀಸಲಾತಿಯನ್ನು ಪುನರ್  ಪರಿಶೀಲಿಸಿ ಶೇ. 8 ಕ್ಕೆ ಏರಿಸಬೇಕು. ಕಾಂತರಾಜ್ ಆಯೋಗದ ವರದಿಯನ್ನು ಸಾರ್ವಜನಿಕ ಗೊಳಿಸಿ, ಜಾರಿಗೊಳಿಸಬೇಕು. ವಕ್ಫ್ ಆಸ್ತಿಗಳ ರಕ್ಷಣೆ, ಒಕ್ಕೂಟ ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿಯಾಗಿ ಜಾರಿಗೆ ತರಲು ಹೊರಟಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಬಾರದು ಎನ್ನುವ ನಿರ್ಣಯವನ್ನು ಸದನದಲ್ಲಿ ಕೈಗೊಳ್ಳಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿರುವ ಎಸ್‌ಸಿಪಿ, ಟಿಎಸ್‌ಪಿ ಹಣವನ್ನು ಬೇರೆ ಯಾವುದೇ ಯೋಜನೆಗಳಿಗೆ ಬಳಸಬಾರದು. 25-26 ನೇ ಸಾಲಿನ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 10 ಸಾವಿರ ಕೋಟಿ ಮೀಸಲಿಡಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಯಾಹ್ಯ, ರಿಜ್ವಿ ರಿಯಾಜ್ ಅಹ್ಮದ್, ಸಮೀವುಲ್ಲಾ ಮುಲ್ಲಾ, ಮೊಹಮ್ಮದ್ ಅಜರುದ್ದೀನ್  ಉಪಸ್ಥಿತರಿದ್ದರು.  

error: Content is protected !!