ಹಿಮೋಫಿಲಿಯಾ ಸೊಸೈಟಿ 34ನೇ ವಾರ್ಷಿಕ ಮಹಾಸಭೆಯಲ್ಲಿ ಡಾ|| ಸುರೇಶ್ ಹನಗವಾಡಿ ವ್ಯಾಕುಲತೆ
ದಾವಣಗೆರೆ, ಡಿ.2- ನಗರದ ಶ್ರೀ ಎಸ್. ನಿಜಲಿಂಗಪ್ಪ ಬಡಾವಣೆಯಲ್ಲಿ ರುವ ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯ 2023-24ನೇ ಸಾಲಿನ 34ನೇ ವಾರ್ಷಿಕ ಮಹಾಸಭೆಯು ಕಳೆದ ವಾರ ಜರುಗಿತು.
ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯ ಅಧ್ಯಕ್ಷ ಡಾ|| ಸುರೇಶ್ ಹನಗವಾಡಿ ಮಾತನಾಡಿ, ಸಂಸ್ಥೆಯ ಏಳಿಗೆಯಲ್ಲಿ ಕೈಜೋಡಿಸಿದ ಎಲ್ಲಾ ಸ್ನೇಹಿತರು, ಶಿಷ್ಯಂದಿರು, ದಾನಿಗಳು, ಜನಪ್ರತಿನಿಧಿ ಗಳನ್ನು ಸ್ಮರಿಸಿದರು.
ಹಿಮೋಫಿಲಿಯಾವು ದುಬಾರಿ ಕಾಯಿಲೆಯಾಗಿದ್ದು, ಸರ್ಕಾರವು ರೋಗಿಗಳ ಚಿಕಿತ್ಸೆಗೆ ಇನ್ನು ಹೆಚ್ಚಿನ ಅನುದಾನ ನೀಡಬೇಕು. ಆದರೆ, ಈಗ ನೀಡುತ್ತಿರುವ ಅನುದಾನದಲ್ಲಿ ಶೇಕಡ 40 ರಿಂದ 50 ರಷ್ಟು ಅನುದಾನ ಕಡಿತಗೊಂಡಿದೆ ಹಾಗು ವಿಕಲಚೇತನರ ಪುನರ್ವಸತಿ ಹಾಗು ಶ್ರೇಯೊಭಿವೃದ್ದಿಗೆ ಶೇ.80 ರಷ್ಟು ಅನುದಾನ ಕಡಿತ ಮಾಡಿರುವುದು ಎಲ್ಲಾ ವಿಕಲಚೇತನರಿಗೆ ಆತಂಕ ಮುಡಿಸಿದೆ ಎಂದರು. ಅದಕ್ಕೂ ಮುಂಚೆ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ರೋಗಿಗಳು, ಪೋಷಕರು, ಕಾರ್ಯಕಾರಿಣಿ ಮಂಡಳಿ ಸದಸ್ಯರು ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಆಗ್ರಹಪಡಿಸಿದರು.
ಶ್ರೀ ಸರ್ ಎಂ. ವಿಶ್ವೇಶ್ವರಯ್ಯ ಕಾಲೇಜ್ ಇನ್ಸಿಸ್ಟೂಟ್‌ನ ಮುಖ್ಯಸ್ಥ ಶ್ರೀಧರ್ ಮುಖ್ಯ ಅತಿಥಿಗಳ ಭಾಷಣದಲ್ಲಿ ಹಿಮೋಫಿಲಿಯಾ ನ್ಯೂನತೆ ವಿರಳವಾಗಿದ್ದು, ಆದರೆ ಅವರ ನೋವು, ಬವಣೆ ಹೇಳತೀರದು. ರೋಗಿಗಳ ಸಂಕಷ್ಟ ನಿವಾರಿಸಲು ಇನ್ನೂ ಹೆಚ್ಚಿನ ರೀತಿಯಲ್ಲಿ ಕೈಜೋಡಿಸುತ್ತೇನೆಂದು ಭರವಸೆ ನೀಡಿದರು.
ಹಿಮೋಫಿಲಿಯಾ ಸಂಸ್ಥೆಯ ಉಪಾಧ್ಯಕ್ಷರಾದ (ಅಭಿವೃದ್ಧಿ) ಡಾ|| ಬಿ.ಟಿ. ಅಚ್ಯುತ್ ಅವರು ಸಂಸ್ಥೆಯ ಎಲ್ಲಾ ಅಭಿವೃದ್ದಿ ಕಾರ್ಯಗಳ ಬಗ್ಗೆ ಮಾತನಾಡಿದರು.
ಮಹಾಸಭೆಯಲ್ಲಿ ಪ್ರತಿ ವರ್ಷ ನೀಡುವ ಶ್ರೀ ಎನ್. ಕೃಷ್ಣಮೂರ್ತಿ ಸ್ಮಾರಕ ಪ್ರಶಸ್ತಿಯನ್ನು ಈ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 90 ರಷ್ಟು ಅಂಕ ಗಳಿಸಿದ ಹಿಮೋಫಿಲಿಯಾ ಬಾಧಿತ ಎನ್. ಸುಹಾಸ್ ಅವರಿಗೆ ನೀಡಿ ಪುರಸ್ಕರಿಸಲಾಯಿತು.
ಸಭೆಯಲ್ಲಿ ಸಂಸ್ಥೆಯ ಗೌರವಾನ್ವಿತ ಅಧ್ಯಕ್ಷೆ ಶ್ರೀಮತಿ ಕಿರುವಾಡಿ ಗಿರಿಜಮ್ಮ, ವೃಷಬೇಂದ್ರಪ್ಪ, ಡಾ|| ಮೀರಾ ಹನಗವಾಡಿ,
ಡಾ|| ಶಾಂತಭಟ್,
ಡಾ|| ತಿಪ್ಪೇಸ್ವಾಮಿ, ಸದಾಶಿವಪ್ಪ, ಶ್ರೀ ನವೀನ್ ಹವಳಿ ಹಾಗೂ ಇತರರು ಉಪಸ್ಥಿತರಿದ್ದರು.