ಅರಿತು ನಡೆದರೆ ಬದುಕು ಬಂಗಾರ ಮರೆತು ನಡೆದರೆ ಬದುಕು ಬಂಧನಕಾರಿ

ಅರಿತು ನಡೆದರೆ ಬದುಕು ಬಂಗಾರ  ಮರೆತು ನಡೆದರೆ ಬದುಕು ಬಂಧನಕಾರಿ

ಹೊನ್ನಾಳಿ ತಾಲ್ಲೂಕಿನ ಕಾರ್ಯಕ್ರಮಲ್ಲಿ ರಂಭಾಪುರಿ ಜಗದ್ಗುರುಗಳು

ಹೊನ್ನಾಳಿ, ನ. 13 – ಸಂಪತ್ತು ಬೆಳೆದಂತೆಲ್ಲ ಮಾನವೀಯ ಸಂಬಂಧಗಳು ಸಡಿಲಗೊಳ್ಳ ಬಾರದು. ಸಂತೃಪ್ತಿ, ಸಮೃದ್ಧಿಗಾಗಿ ಧರ್ಮಾಚರಣೆ ಬೇಕು. ಅರಿವುಳ್ಳ ಮಾನವ ಜನ್ಮದಲ್ಲಿ ಅರಿತು ನಡೆದರೆ ಬದುಕು ಬಂಗಾರಗೊಳ್ಳುತ್ತದೆ. ಮರೆತು ನಡೆದರೆ ಬದುಕು ಬಂಧನಕಾರಿಯಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. 

ಅವರು ಬುಧವಾರ ತಾಲ್ಲೂಕಿನ ಕ್ಯಾಸಿನಕೆರೆ ಗ್ರಾಮದಲ್ಲಿ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣದ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಅದರೊಂದಿಗೆ ಧರ್ಮಪ್ರಜ್ಞೆ ಮತ್ತು ಸದಾಚಾರ ಬೆಳೆದು ಬರಬೇಕು. ಧರ್ಮ ಮತ್ತು ಧರ್ಮಾಚರಣೆ ಮರೆತರೆ ಅಪಾಯ ತಪ್ಪಿದ್ದಲ್ಲ. ಜೀವನ ಮೌಲ್ಯಗಳನ್ನು ನಿರ್ಲಕ್ಷಿಸಿದರೆ ಅಧ:ಪತನ ನಿಶ್ಚಿತ. ಜ್ಞಾನ ಕ್ರಿಯಾತ್ಮಕ ಧರ್ಮಪಾಲನೆಯಿಂದ ಜಗದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ. ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಭಾವನೆಗಳು ಬೆಳೆಯದಿರುವುದೇ ಇಂದಿನ ಆವಾಂತರಗಳಿಗೆ ಕಾರಣವೆಂದರೆ ತಪ್ಪಾಗದು. ಸುಳ್ಳಿಗೆ ಸಾವಿರ ಮಿತ್ರರು. ಆದರೆ ಸತ್ಯಕ್ಕೆ ಎಲ್ಲರೂ ಶತ್ರುಗಳೇ. ಜನ ಸುಳ್ಳನ್ನು ನಂಬುವಷ್ಟು ಸತ್ಯವನ್ನು ನಂಬುವುದಿಲ್ಲ. ಸತ್ಯ ಸೈದ್ಧಾಂತಿಕ ತಳಹದಿಯ ಮೇಲೆ ಮಾನವ ಜೀವನ ರೂಪಿತಗೊಳ್ಳಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಬೋಧಿಸಿದ್ದಾರೆ. ದುಷ್ಟರ ಸಂಹಾರ ಶಿಷ್ಟರ ಸಂರಕ್ಷಣೆಗಾಗಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಅವತಾರವಾಗಿದೆ. ದಕ್ಷ ಬ್ರಹ್ಮನ ದುರಹಂಕಾರ ಹೆಚ್ಚಾದಾಗ ಶಿವ ಸಂಸ್ಕೃತಿ ಎತ್ತಿ ಹಿಡಿಯಲು ಪರಮಾತ್ಮನ ಜಟಾ ಮುಕುಟದಿಂದ ಅವತರಿಸಿ ಬಂದಾತ ಶ್ರೀ ವೀರಭದ್ರಸ್ವಾಮಿ. ಅನ್ಯಾಯ ಅಧರ್ಮದ ಇಂದಿನ ದಿನಮಾನಗಳಲ್ಲಿ ಮತ್ತೊಮ್ಮೆ ಶ್ರೀ ವೀರಭದ್ರಸ್ವಾಮಿ ಅವತರಿಸಿ ಜನಸಮುದಾಯವನ್ನು ಸನ್ಮಾರ್ಗಕ್ಕೆ ಕರೆತರುವ ಅವಶ್ಯಕತೆಯಿದೆ  ಎಂದು ಹೇಳಿದರು.

ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ  ಸಮಾರಂಭವನ್ನು ಉದ್ಘಾಟಿಸಿದರು. ರಾಂಪುರದ ಶಿವಕುಮಾರ ಹಾಲಸ್ವಾಮೀಜಿ ನುಡಿ ನಮನ ಸಲ್ಲಿಸಿದರು.

ವಿಠಲಾಪುರ ಗಂಗಾಧರ ಶಾಸ್ತ್ರಿಗಳಿಂದ ಪ್ರಾರ್ಥನೆ ಜರುಗಿತು. ಕೆ.ವಿ. ಬಸವನಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಸಿ.ನಾಗರಾಜ್ ಸ್ವಾಗತಿಸಿದರು. ಕೆ.ಸಿ.ಚಂದ್ರಪ್ಪ ಶ್ರೀ ಜಗದ್ಗುರುಗಳಿಗೆ ಮಾಲಾರ್ಪಣೆ ಮಾಡಿ ಗೌರವಿ ಸಿದರು. ಸುಧಾ ಪಂಚಾಕ್ಷರಯ್ಯ ನಿರೂಪಿಸಿದರು. ಹೆಚ್.ಪಿ.ಪರಮೇಶ ಹಿತ್ತಲಮನೆ ವಂದಿಸಿದರು.

error: Content is protected !!