ವರ್ಷದ ಮುಂಗಾರು – ಪೂರಕವಾಗದ ಕೃಷಿ ಕ್ಷೇತ್ರ
ಮೂರು ನಾಲ್ಕು ವರ್ಷಗಳಲ್ಲಿ ಮಳೆ ಅವಲಂಬಿತ ರೈತ ಸಮೂಹ ಒಮ್ಮೆ ಭೂಮಿಯೆಡೆಗೆ ಕಣ್ಣು ನೆಟ್ಟರೆ 10 ಬಾರಿ ಆಕಾಶದೆಡೆಗೆ ತನ್ನ ದೃಷ್ಟಿ ಬೀರಿ ಮಳೆಯ ಬರುವಿಕೆಗೆ ಕಾಯುತ್ತಾ ಪ್ರಾರ್ಥಿಸುತ್ತಿದ್ದ. ಈ ವರ್ಷದ ಮುಂಗಾರು ಬೇಗನೆ ಪ್ರಾರಂಭ ಗೊಂಡು ರೈತರಲ್ಲಿ ಉತ್ಸಾಹದ ಬಿತ್ತನೆ ಕಾರ್ಯಕ್ಕೆ ಅನುವು ಮಾಡಿಕೊಟ್ಟರೂ, ನಂತರ ಕೆಲವು ದಿನ ಮಳೆ ಬಾರದೇ ಎರಡೆರಡು ಸಲ ಬಿತ್ತನೆ ಮಾಡಿ ದ್ದುಂಟು. ಬಿತ್ತಿದ ಕೆಲವು ದಿನಗಳ ನಂತರ ಅಧಿಕ ಮಳೆಯಿಂದಾಗಿ ಬೆಳೆ ಕುಂಠಿತಗೊಂಡು ರೈತರೂ ಸಹ ಬೆಳೆಯ ಜೊತೆ ಸಹಗಮವಾದರು.
ಸಂತೆಬೆನ್ನೂರು ಗ್ರಾಮದ ಸುತ್ತಮುತ್ತ ಪಾಪ್ಕಾರ್ನ್ ಮೆಕ್ಕೆಜೋಳ ಬೆಳೆಗೆ ಕೃಷಿ ಭೂಮಿ ಪೂರಕವಾಗಿದ್ದು, ಅದರಂತೆ ಹಲವಾರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಪಾಪ್ಕಾರ್ನ್ ಮೆಕ್ಕೆಜೋಳ ಬಿತ್ತಲಾಗಿತ್ತು, ಬೇಗನೆ ಕಟಾವಿಗೆ ಬರುವ ಈ ಬೆಳೆ ಕಟಾವಾದ ತಕ್ಷಣ ಹೊಲ ಸಿದ್ದಗೊಳಿಸಿಕೊಂಡು ಹಿಂಗಾರು ಮಳೆಗೆ ಅಲಸಂದೆ, ಕಡಲೆ, ಅವರೆ, ರಾಗಿ, ಜೋಳ, ಸೂರ್ಯ ಕಾಂತಿ ಬಿತ್ತಲು ಪ್ರಾರಂಭಿಸುತ್ತಾರೆ. ಜೋಳ ಮತ್ತು ಸೂರ್ಯಕಾಂತಿ ಬೆಳೆ ತೆನೆ ಆದಾಗ ಪಕ್ಷಿಗಳ ಕಾಟದಿಂದ ಅಶಕ್ತರಾದ ರೈತರು ಸಂಪೂರ್ಣ ಭೂಮಿ ಒಳಗೆ ಬೆಳೆಯಲ್ಪಡುವ ಅಲಸಂದಿ, ಕಡ್ಲೆ, ಶೇಂಗಾ ಬೆಳೆಗೆ ಮಾರುಹೋದರು. ಅದರಂತೆ ಈ ವರ್ಷ ಚನ್ನಗಿರಿ ತಾಲ್ಲೂಕಿನಲ್ಲಿ ಹೆಚ್ಚಾಗಿ ಅಲಸಂದೆ ಬೆಳೆ ಬೆಳೆಯಲಾಗಿದ್ದು, ತದನಂತರ ಕಡಲೆ, ಅವರೆ, ರಾಗಿ, ಶೇಂಗಾ ಬೆಳೆ ಗಳು ಹಸಿರಿನಿಂದ ಕಂಗೊಳಿಸುತ್ತಿವೆ.
ಎಕರೆಗೆ 10 ಕೆಜಿ ಬೀಜ 10 ಕೆಜಿ ಗೊಬ್ಬರದೊಡನೆ ಬೆರೆಸಿ ಬಿತ್ತಲ್ಪಡುವ ಅಲಸಂದಿ 15-20 ದಿನಗಳ ನಂತರ ಕಳೆನಾಶಕ ಒಮ್ಮೆ ಸಿಂಪಡಿಸಿ ರೋಗ, ಕೀಟಗಳು ಬಂದರೆ ರೋಗಬಾಧೆ ಮತ್ತು ಕೀಟಬಾಧೆ ಔಷಧಿಗಳನ್ನು ಸಿಂಪಡಿಸಿದರೆ ಸಾಕು. ಬೆಳೆದ ಬೆಳೆಗೆ ಇಬ್ಬನಿ ನೀರಿಗೆ ಒಳ್ಳೆಯ ಇಳುವರಿಯ ಅಲಸಂದಿ ಕಾಯಿಗಳನ್ನು ಕಾಣ ಬಹುದು. ಅದರಂತೆ ಚನ್ನಗಿರಿ ತಾಲ್ಲೂಕಿನಲ್ಲಿ ಸುಮಾರು 2200 ರಿಂದ 2300 ಹೆಕ್ಟೇರ್ನಲ್ಲಿ ಅಲಸಂದಿ ಮತ್ತು ಕಡ್ಲೆ 600 ರಿಂದ 700 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದು, ಹಿಂಗಾರು ಪ್ರಾರಂಭಗೊಂಡ ಸಮಯದಿಂದ ಪ್ರತಿಯೊಂದು ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬೇಕಾಗುವ ಹಿಂಗಾರು ಬೆಳೆಗಳ ಬೀಜಗಳನ್ನು ಮತ್ತು ಅವಕ್ಕೆ ಸಿಂಪಡಿ ಸುವ ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ಕೃಷಿ ಇಲಾಖೆಯ ಮಾಹಿತಿಗಳೊಡನೆ ರೈತರಿಗೆ ವಿತರಿಸ ಲಾಗಿದೆ ಎಂದು ಚನ್ನಗಿರಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್. ಹೆಚ್. ಅರುಣ್ ಕುಮಾರ್ ತಿಳಿಸಿದರು.
ಅಲಸಂದಿ ಬೆಳೆ ಎಕರೆಗೆ ಮೂರರಿಂದ ಆರು ಕ್ವಿಂಟಾಲ್ ಇಳುವರಿ ಬರುವ ಬೆಳೆಯಾಗಿದ್ದು, ಈಗ ನಡೆಯುತ್ತಿರುವ ಧಾರಣೆ 9,500/ರೂ ರಿಂದ 10,500/ರೂ ಕ್ವಿಂಟಾಲ್ ವರೆಗೆ ಮಾರುಕಟ್ಟೆಯಲ್ಲಿ ನಡೆಯುತ್ತಿದೆ. ಅದೇ ರೀತಿ ಕಡ್ಲೆ ಎಕರೆಗೆ ನಾಲ್ಕರಿಂದ ಎಂಟು ಕ್ವಿಂಟಾಲ್ ಇಳುವರಿ ಬರುವ ಮುನ್ಸೂಚನೆ ಇದ್ದು, ಅದಕ್ಕೂ ಸಹ ಮಾರುಕಟ್ಟೆಯಲ್ಲಿ ಒಳ್ಳೆಯ ಧಾರಣೆ ಇದೆ ಎಂದು ಗ್ರಾಮದ ಪ್ರಗತಿಪರ ರೈತರಾದ ಶ್ರೀಕಾಂತ್ ಪೂಜಾರ್ ತಮ್ಮ ಹೊಲದ ಬೆಳೆ ತೋರಿಸುತ್ತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕೃಷಿ ಇಲಾಖೆಯಲ್ಲಿ ವಿತರಿಸಿದ ಸಬ್ಸಿಡಿ ಬಿತ್ತನೆ ಬೀಜಗಳನ್ನು ಹೊರತು ಪಡಿಸಿ ಖಾಸಗಿ ಅಂಗಡಿಗಳಲ್ಲಿ ಮತ್ತು ಮನೆಯಲ್ಲಿನ ಬಿತ್ತನೆ ಬೀಜಗಳು ಹಿಂಗಾರು ಬೆಳೆಗೆ ಸಹಕಾರಿಯಾಗಿವೆ.
ಸಂತೇಬೆನ್ನೂರು ಗ್ರಾಮದ ಸುತ್ತ ಈ ವರ್ಷ ಹಿಂಗಾರು ಮಳೆಗೆ ಯಥೇ ಚ್ಛವಾಗಿ ಬೆಳೆದಿರುವ ಅಲಸಂದಿ ಬೆಳೆಯ ಹಚ್ಚಹಸಿರಿನ ಬೆಳೆಯ ದೃಶ್ಯ ನೋಡಲು ಚಂದ.
– ಕೆ. ಸಿರಾಜ್ ಅಹಮ್ಮದ್, ಸಂತೆಬೆನ್ನೂರು