ಸಿರಿಗೆರೆಯಲ್ಲಿ ನಾಳೆಯಿಂದ 3 ದಿನಗಳ ತರಳಬಾಳು ನುಡಿಹಬ್ಬ – 2024

ದಾವಾಗೆರೆ, ನ.6- ಕನ್ನಡ ರಾಜ್ಯೋತ್ಸವ ನಿಮಿತ್ತ್ಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ (ಸಿರಿಗೆರೆ) ಹಾಗೂ ಕನ್ನಡ ಸಾಹಿತ್ಯ ಪರಿಷತ್ತು (ಬೆಂಗಳೂರು) ಇವರ ಸಂಯುಕ್ತಾಶ್ರಯದಲ್ಲಿ ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ಮಂಟಪದಲ್ಲಿ `ತರಳಬಾಳು ನುಡಿಹಬ್ಬ-2024′ ಅನ್ನು ನಾಡಿದ್ದು ದಿನಾಂಕ 8, 9 ಹಾಗೂ 10 ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದರು.

ಈ ನುಡಿಹಬ್ಬವು  ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಏರ್ಪಾಡಾಗಿದೆ. ಮೂರು ದಿನಗಳ ಕಾಲ ವಿಚಾರ ಗೋಷ್ಠಿಗಳು, ಕವಿಗೋಷ್ಠಿ, ರಾಜ್ಯೋತ್ಸವ ಪ್ರಶಸ್ತಿ
ಪುರಸ್ಕೃತರಿಗೆ ಅಭಿನಂದನೆ, ನಾಟಕ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ನಾಡಿನ ಹೆಸರಾ೦ತ ವಿದ್ವಾಂಸರು, ಕವಿಗಳು, ಕಲಾವಿದರು ಭಾಗವಹಿಸಲಿದ್ದಾರೆ.

ನಾಡಿದ್ದು ದಿನಾಂಕ 8 ರ ಶುಕ್ರವಾರ ಬೆಳಗ್ಗೆ 9 ಗಂಟೆಗೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಡಾ. ಪ್ರದೀಪ್ ಕುಮಾರ್ ಹೆಬ್ರಿ ತರಳಬಾಳು ನುಡಿಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಅದಕ್ಕೂ ಮುನ್ನ ಬೆಳಗ್ಗೆ 8 ಗಂಟೆಗೆ ಪ್ರಭಾತ್‌ ಫೇರಿ ಮತ್ತು ವಿವಿಧ ಕಲಾತಂಡಗಳೊಂದಿಗೆ ಭುವನೇಶ್ವರಿ ದೇವಿ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಕನ್ನಡ ಧ್ವಜಾರೋಹಣ ನೆರವೇರಲಿದೆ. ಇದೇ ವೇಳೆ ಸಿರಿಗೆರೆ ಶಾಲಾ-ಕಾಲೇಜುಗಳ 4000 ವಿದ್ಯಾರ್ಥಿಗಳಿಂದ `ಸಹಸ್ರ ಕಂಠ ಕನ್ನಡ ಗೀತ ಗಾಯನ’ ನೆರವೇರಲಿದೆ.

ಅಂದು ಬೆಳಿಗ್ಗೆ 10 ಗಂಟೆಗೆ `ಕನ್ನಡ ಸಾಹಿತ್ಯ ಮತ್ತು ಪರಂಪರೆ’ ವಿಷಯ ಕುರಿತು ಮೊದಲ ಗೋಷ್ಠಿ ನಡೆಯಲಿದೆ. ಡಾ. ಕುಮಾರಚಲ್ಯ, ನೀಲಾವರ ಸುರೇಂದ್ರ ಅಡಿಗ, ಡಾ. ಭೀಮಾಶಂಕರ ಜೋಷಿ ಅವರು ವಿಷಯ ಮಂಡಿಸುವರು. ಸರ್ವಜ್ಞ ಕವಿಯ ತ್ರಿಪದಿಗಳು ಮತ್ತು ಡಿವಿಜಿ ಯವರ `ಮಂಕುತಿಮ್ಮನ ಕಗ್ಗ’ದ ಮೊಬೈಲ್‌ ತಂತ್ರಾಂಶ (ಆಫ್) ವನ್ನು ಈ ನುಡಿಹಬ್ಬದಲ್ಲಿ ಪ್ರಸಿದ್ಧ ಕವಿ ಡಾ. ಪ್ರದೀಪ್ ಕುಮಾರ್ ಹೆಬ್ರಿ ಲೋಕಾರ್ಪಣೆ ಮಾಡಲಿದ್ದಾರೆ. ನೇ.ಭ. ರಾಮಲಿ೦ಗಾ ಶೆಟ್ಟಿ ಹಾಗೂ ಡಾ. ಪದ್ಮಿನಿ ನಾಗರಾಜು ಉಪಸ್ಥಿತರಿರುವರು.

ಮಧ್ಯಾಹ್ನ 2.30ಕ್ಕೆ ದಾವಣಗೆರೆ ವಿವಿಯ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ `ಕನ್ನಡದ ಅಸ್ಮಿತೆ ಕನ್ನಡಿಗರಿಂದ ಸಾಧ್ಯ’ ಹಾಗೂ `ಕನ್ನಡ ಮಾಧ್ಯಮದ ಕಲಿಕೆ ಉದ್ಯೋಗಕ್ಕೆ ಪೂರಕ’ ವಿಷಯ ಕುರಿತು ಚರ್ಚಾ ಸ್ಪರ್ಧೆ ನಡೆಯಲಿದೆ. ಎಂ.ಜಿ. ರಂಗಸ್ವಾಮಿ, ಡಾ. ವಿ. ಜಯರಾಮಯ್ಯ ಎಂ. ಪ್ರಕಾಶಮೂರ್ತಿ ಪಾಲ್ಗೊಳ್ಳುವರು. ಸಂಜೆ 6.30 ಕ್ಕೆ ನಡೆಯುವ ನಾಟಕೋತ್ಸವದಲ್ಲಿ ರೈತರ ಧ್ವನಿ, ಬೆಟ್ಟದ ಮೇಲೊಂದು ಮನೆಯ ಮಾಡಿ ಹಾಗೂ ಟ್ಯಾಬ್ಲೆಟ್ ನಾಟಕಗಳು ಪ್ರದರ್ಶನಗೊಳ್ಳಲಿವೆ.

ತರಳಬಾಳು ಕನ್ನಡ ನುಡಿಹಬ್ಬದ ಸಂಚಾಲಕರಾದ ನಾಗರಾಜ ಸಿರಿಗೆರೆ ಮಾತನಾಡಿ,  ದಿನಾಂಕ 9 ರ ಶನಿವಾರ ಬೆಳಿಗ್ಗೆ 10 ಗಂಟೆಗೆ ಕವಿಗೋಷ್ಠಿ ನಡೆಯಲಿದ್ದು, ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸುವರು. ಎಲ್.ಎನ್. ಮುಕುಂದರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾ.ವೆಂ. ಶ್ರೀನಿವಾಸಮೂರ್ತಿ, ಆರಿಫ್‌ ರಜಾ, ಲಿಂಗಯ್ಯ ಬಿ. ಹಿರೇಮಠ, ಕೆ.ಎಂ. ಶಿವಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಕವಿಗೋಷ್ಟಿಯಲ್ಲಿ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಕವಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಅಂದು ಮಧ್ಯಾಹ್ನ 2.30 ಕ್ಕೆ 4ನೇ ಗೋಷ್ಠಿಯಲ್ಲಿ `ಜಾನಪದ ಸಂಸ್ಕೃತಿಯ ತಾಯಿಬೇರು’ ವಿಷಯ ಕುರಿತು ಗೋಷ್ಠಿ ನಡೆಯಲಿದ್ದು, ಡಾ.ಚಿಕ್ಕಣ್ಣ ಎಣ್ಣೆಕಟ್ಟೆ, ಡಾ. ಕುರುವ ಬಸವರಾಜ್‌, ಡಾ. ನಾಗಪುಷ್ಪಲತಾ ವಿಷಯ ಮಂಡಿಸಲಿದ್ದು, ಎಂ. ಶೈಲಕುಮಾರ್, ಬಿ.ಟಿ. ನಾಗೇಶ್‌ ಉಪಸ್ಥಿತರಿರುವರು.

ಸಂಜೆ 6.30 ಕ್ಕೆ `ಸುಗಮ ಸಂಗೀತ ಮತ್ತು ಕವಿ ನಮನ’ ಕಾರ್ಯಕ್ರಮದಲ್ಲಿ ಹಾಸನದ ಬನುಮ ಗುರುದತ್ತ ಮತ್ತು ತಂಡದವರು ಸುಗಮ ಸಂಗೀತ ನಡೆಸಿಕೊಡಲಿದ್ದಾರೆ. ನಂತರ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಕನ್ನಡದ ಪ್ರಖ್ಯಾತ ಕವಿಗಳ ಕವಿತೆಗಳಿಗೆ ನೃತ್ಯ ಸಂಯೋಜನೆ ನಡೆಯಲಿದೆ.

ದಿನಾಂಕ 10 ಭಾನುವಾರ ಬೆಳಿಗ್ಗೆ 10 ಗಂಟೆಗೆ `ಮಹಿಳೆ ಮತ್ತು ಯುವಜನತೆ’ ವಿಷಯ ಕುರಿತು ಗೊಷ್ಠಿ ನಡೆಯಲಿದ್ದು, ಶ್ರೀ ಅಭಿನವ ಚೆನ್ನಬಸವ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಡಾ. ಗೀತಾ ಬಸವರಾಜ್, ಸಂಧ್ಯಾ ಶೆಣೈ, ಅಶೋಕ ಎಸ್‌. ಹಂಚಲಿ ವಿಷಯ ಮಂಡನೆ ಮಾಡಲಿದ್ದಾರೆ. ಡಾ. ಎಚ್‌.ಎಲ್.ಮಲ್ಲೇಶ್ ಗೌಡ ಹಾಗೂ ನಿಷ್ಟಿ ರುದ್ರಪ್ಪ ಉಪಸ್ಥಿತರಿರುವರು.

ಭಾನುವಾರ ಮಧ್ಯಾಹ್ನ 2.30ಕ್ಕೆ `ಮರೆಯಲಾಗದ ಮಹನೀಯರು’ ವಿಷಯ ಕುರಿತು 6ನೇ ಗೋಷ್ಠಿ ನಡೆಯಲಿದೆ. ಶ್ರೀ ಅಭಿನವ ಚನ್ನಬಸವ ಸ್ವಾಮಿಗಳು, ಡಾ. ಮಹಾಂತೇಶ ಬಿರಾದಾರ್, ಅನಂತ ದೇಶಪಾ೦ಡೆ, ಡಾ. ಎಚ್‌.ಟಿ, ಶೈಲಜಾ ಅವರು ಅಕ್ಕಮಹಾದೇವಿ, ಫ.ಗು. ಹಳಕಟ್ಟಿ, ಬೇ೦ದ್ರೆ ದರ್ಶನ ಹಾಗೂ ಡಾ. ಎಚ್‌. ತಿಪ್ಪೇರುದ್ರಸ್ವಾಮಿ ಅವರ ಕುರಿತು ವಿಷಯ ಮ೦ಡನೆ ಮಾಡಲಿದ್ದಾರೆ. ಡಾ. ಲಿಂಗರಾಜ ಅಂಗಡಿ, ಸೂರಿ ಶ್ರೀನಿವಾಸ್‌ ಉಪಸ್ಥಿತರಿರುವರು.

ಭಾನುವಾರ ಸಂಜೆ 6.30 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಡಿ, ಕುಂಬಾರ ಸಮಾರೋಪ ನುಡಿಗಳನ್ನು ಡಾ. ಎಚ್‌.ಎಸ್. ಹರಿಶ೦ಕರ್ ಆಡಲಿದ್ದಾರೆ. ಡಾ. ಬಿ.ಎಂ. ಪಟೇಲ್ ಪಾಂಡು, ಬಿ. ವಾಮದೇವಪ್ಪ. ಕೆ.ಎಸ್. ಸಿದ್ಧಲಿಂಗಪ್ಪ, ಉಪಸ್ಥಿತರಿರುವರು.

error: Content is protected !!