ಭತ್ತದ ಬೆಳೆ ಕ್ಷೇತ್ರೋತ್ಸವದಲ್ಲಿ ಬೇಸಾಯ ತಜ್ಞ ಮಲ್ಲಿಕಾರ್ಜುನ್ ಪ್ರಶಂಸೆ
ದಾವಣಗೆರೆ, ಅ.30 – ಮಳೆಯಾಶ್ರಿತ ಪ್ರದೇಶವಾದ ಹಾಲುವರ್ತಿ ಗ್ರಾಮದಲ್ಲಿ ಕಡಿಮೆ ನೀರು ಬಳಸಿ ಭತ್ತ ಬೆಳೆಯಲಾಗಿದ್ದು, ಉತ್ತಮ ಇಳುವರಿ ಬಂದಿದೆ ಎಂದು ಬೇಸಾಯ ತಜ್ಞ ಬಿ.ಓ ಮಲ್ಲಿಕಾರ್ಜುನ್ ಪ್ರಶಂಸೆ ವ್ಯಕ್ತಪಡಿಸಿದರು.
ತಾಲ್ಲೂಕಿನ ಹಾಲುವರ್ತಿ ಗ್ರಾಮದಲ್ಲಿ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹಾಗೂ ಆತ್ಮ ಯೋಜನೆ, ಕೃಷಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ನೇರ ಕೂರಿಗೆ ಭತ್ತ ಬಿತ್ತನೆಯ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.
ಇಲ್ಲಿ ಭತ್ತ ಪ್ರಮುಖವಾದ ಆಹಾರ ಬೆಳೆಯಾಗಿದ್ದು, ಪ್ರಗತಿಪರ ಕೃಷಿಕ ದ್ಯಾಮಪ್ಪ ಅವರು ಮಳೆಯಾಶ್ರಿತ ಪ್ರದೇಶದಲ್ಲಿ ಎಕರೆಗೆ 8 ರಿಂದ 10 ಕೆ.ಜಿ. ಬೀಜ, ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಮಾಡಿ, ಬಿತ್ತನೆ ಸಮಯದಲ್ಲಿ ರಾಸಾಯನಿಕ ಗೊಬ್ಬರದ ಬಳಕೆ ಹಾಗೂ ಲಘು ಪೋಷಕಾಂಶಗಳಾದ ಜಿಂಕ್ ಮತ್ತು ಕಬ್ಬಿಣ ಎಕರೆಗೆ 8 ಕೆ.ಜಿ ಬಳಸಿ, ನೀರು ನಿಲ್ಲಿಸದೆ, ಬೆಳೆಗೆ ತುರ್ತು ಅಗತ್ಯ ಇರುವ ಸಮಯದಲ್ಲಿ ಮಾತ್ರ ನೀರನ್ನು ಬಳಸಿ ಉತ್ತಮವಾದ ಭತ್ತವನ್ನು ಬೆಳೆದಿದ್ದಾರೆ.
ಒಂದು ಕೆ.ಜಿ ಭತ್ತ ಉತ್ಪಾದನೆ ಮಾಡಬೇಕಾದರೆ 5000 ಲೀಟರ್ ನೀರು ಬೇಕಾಗುತ್ತದೆ. ಈ ಪದ್ಧತಿಯಲ್ಲಿ 1500 ಲೀಟರ್ ನಷ್ಟು ಮಾತ್ರ ನೀರು ಬೇಕಾಗುತ್ತದೆ. ಹಾಗಾಗಿ ಇವರು ಕಡಿಮೆ ಉತ್ಪಾದನಾ ವೆಚ್ಚದಲ್ಲಿ ಹಾಗೂ ಮಳೆಯಾಶ್ರಿತ ಪ್ರದೇಶದಲ್ಲಿ ಭತ್ತವನ್ನು ಕಡಿಮೆ ನೀರು ಬಳಸಿ, ಬೆಳೆದು ತೋರಿಸಿರುತ್ತಾರೆ ಎಂದು ತಿಳಿಸಿದರು.
ಪ್ರಗತಿಪರ ಹಾಗೂ ಭತ್ತ ಬೆಳೆದ ಕೃಷಿಕ ದ್ಯಾಮಣ್ಣ ಮಾತನಾಡುತ್ತಾ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಸಲಹೆ ಪಡೆದುಕೊಂಡು, ಬಿತ್ತನೆಯಿಂದ ಹಿಡಿದು ಕಟಾವಿನವರೆಗೂ ಮಾಹಿತಿಯನ್ನು ಪಡೆದುಕೊಂಡು ಭತ್ತವನ್ನು ಬೆಳೆದಿರುತ್ತೇನೆ. ಎಕರೆಗೆ 20 ರಿಂದ 22 ಕ್ವಿಂಟಾಲ್ ಇಳುವರಿ ಬರಬಹುದು ಎಂದರು. ಇದು ನನ್ನ ಎರಡನೇ ಯಶಸ್ವಿ ಪ್ರಯತ್ನವಾಗಿದೆ ಎಂದರು.
ಈ ಪದ್ಧತಿಯನ್ನು ಮಾಡುವುದರಿಂದ ಮಣ್ಣಿನ ಫಲ ವತ್ತತೆಯನ್ನು ಹಾಗೂ ಮನೆಗೆ ಬೇಕಾಗುವಷ್ಟು ಭತ್ತವನ್ನು ಸುಲಭವಾಗಿ ಬೆಳೆದುಕೊಳ್ಳಬಹುದು ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕರು ಹಾಗೂ ಮಹಿಳೆಯರು ನಡೆಸಿಕೊಟ್ಟರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಧರ್ ಮೂರ್ತಿ ಮಾತನಾಡಿ, ಕೃಷಿ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ರೈತರು ಹೆಚ್ಚಿನ ಇಳುವರಿ ಮತ್ತು ಆದಾಯವನ್ನು ಪಡೆದುಕೊಳ್ಳಬೇಕು. ಪ್ರಸ್ತುತ ಮುಂಗಾರಿನಲ್ಲಿ ತೊಗರಿ ಬೆಳೆ ಹೆಚ್ಚಾಗಿದ್ದು, ಸರಿಯಾದ ಸಂರಕ್ಷಣಾ ಕ್ರಮವನ್ನು ಮಾಡುವುದರಿಂದ ಉತ್ತಮ ಇಳುವರಿ ಪಡೆಯಬಹುದು ಎಂದರು.
ಆತ್ಮ ಯೋಜನೆಯ ಅಧಿಕಾರಿಗಳಾದ ವೆಂಕಟೇಶ್, ರೇಷ್ಮಾ, ಪ್ರಗತಿಪರ ಕೃಷಿಕರು ಹಾಗೂ ಕೃಷಿ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.