ಅಹಿಂದ ಮಂತ್ರವನ್ನು ಜಪಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಸರ್ವೋಚ್ಛ ನ್ಯಾಯಾಲಯದ ಸೂಚನೆಯಂತೆ ಒಳ ಮೀಸಲಾತಿ ಜಾರಿಗೊಳಿಸಿ ಶೋಷಿತ ಸಮುದಾಯಗಳಿಗೆ ನ್ಯಾಯ ಕಲ್ಪಿಸಬೇಕು.
-ಆಲೂರು ನಿಂಗರಾಜ್, ಮುಖಂಡರು, ಜಿಲ್ಲಾ ಮಾದಿಗ ಜಾಗೃತಿ ಸಮಿತಿ
ದಾವಣಗೆರೆ, ಅ. 29- ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಒಳ ಮೀಸಲಾತಿ ಜಾರಿಗೊಳಿಸಿ, ಶೋಷಿತ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಜಿಲ್ಲಾ ಮಾದಿಗ ಜಾಗೃತಿ ಸಮಿತಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಇದೇ ವೇಳೆ ಮಾತನಾಡಿದ ಸಮಿತಿ ಮುಖಂಡ ಆಲೂರು ನಿಂಗರಾಜ್, ಒಳ ಮೀಸಲಾತಿಗಾಗಿ ಕಳೆದ 30 ವರ್ಷಗಳಿಂದ ಅನೇಕ ಹೋರಾಟಗಳನ್ನು ಮಾಡುತ್ತಾ ಬಂದಿದ್ದು, 2004 ರಲ್ಲಿ ಅಂದು ಅಧಿಕಾರದಲ್ಲಿದ್ದ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೋರಾಟಕ್ಕೆ ಸ್ಪಂದಿಸಿ, ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎ.ಜಿ. ಸದಾಶಿವ ಅವರ ಆಯೋಗ ರಚಿಸಿ ನೂರಾರು ಕೋಟಿ ಹಣ ವ್ಯಯಿಸಿ ನಿಖರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು ಎಂದರು.
ನಂತರ ಅನೇಕ ಸಮಸ್ಯೆಗಳ ನೆಪವೊಡ್ಡಿ ಸದಾಶಿವ ಆಯೋಗದ ವರದಿ ಮೂಲೆಗುಂಪಾಯಿತು. ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಈ ಸಮುದಾಯದ ನ್ಯಾಯಕ್ಕೊಸ್ಕರ ಮಾಧುಸ್ವಾಮಿ ಆಯೋಗ ರಚನೆ ಮಾಡಿತ್ತು. ಈ ಆಯೋಗವು ವರದಿಯ ಎಲ್ಲಾ ದತ್ತಾಂಶಗಳನ್ನು ಕೂಲಂಕುಶವಾಗಿ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಅದರ ಫಲವಾಗಿ ಬೊಮ್ಮಾಯಿ ಸರ್ಕಾರ ಪ.ಜಾತಿಯ ಮೀಸಲಾತಿಯನ್ನು ಶೇ. 2 ರಷ್ಟು ಹೆಚ್ಚಿಸುವುದರೊಂದಿಗೆ ಮಾದಿಗ ಸಮುದಾಯಕ್ಕೆ ಶೇ.6, ಛಲವಾದಿ ಸಮಾಜಕ್ಕೆ ಶೇ. 5.5, ಕೊರಚ, ಲಂಬಾಣಿ, ಭೋವಿ ಸಮುದಾಯಗಳಿಗೆ ಶೇ. 4 ರಷ್ಟು ಇತರೆ 1.5 ರಷ್ಟು ಸಣ್ಣಪುಟ್ಟ ಸಮುದಾಯಗಳಿಗೆ ನ್ಯಾಯ ಸಮ್ಮತವಾಗಿ ಮೀಸಲಾತಿಯನ್ನು ಹಂಚಿಕೆ ಮಾಡಿತ್ತು ಎಂದು ಹೇಳಿದರು.
ಸಮಾಜವಾದಿ ಹಿನ್ನೆಲೆಯುಳ್ಳ ಸಿಎಂ ಸಿದ್ದರಾಮಯ್ಯ ಅವರು ನಮ್ಮ ಬೇಡಿಕೆಗಳನ್ನು ಲಘುವಾಗಿ ಪರಿಗಣಿಸಿರು ವುದನ್ನು ನಮ್ಮ ಸಮುದಾಯ ಉಗ್ರವಾಗಿ ಖಂಡಿಸುತ್ತದೆ. ಈಗಲೂ ಸಹ ಮೂರು ತಿಂಗಳೊಳಗಾಗಿ ಹೊಸದಾಗಿ ಆಯೋಗ ರಚಿಸಿ ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂದು ಹೇಳುತ್ತಿರುವುದು ಸಮುದಾಯಕ್ಕೆ ಮಾಡುತ್ತಿರುವ ಮತ್ತೊಂದು ಮೂರ್ಖ ಭರವಸೆ ಎಂದರು.
ಮಾದಿಗ ಜಾಗೃತಿ ಸಮುದಾಯದ ಮುಖಂಡರಾದ ಹೆಚ್.ಸಿ. ಗುಡ್ಡಪ್ಪ, ಜಯಪ್ರಕಾಶ್, ಚಂದ್ರಪ್ಪ, ಜಿ.ಹೆಚ್. ನಾಗರಾಜ್, ಪಾಲಿಕೆಯ ಮಾಜಿ ಸದಸ್ಯ ಎಂ.ಹಾಲೇಶ್, ರವಿ, ಹೆಗ್ಗೆರೆ ರಂಗಪ್ಪ, ಆವರಗೆರೆ ನಾಗರಾಜ್, ಶಿವಪ್ಪ ಸೇರಿದಂತೆ ಅನೇಕರಿದ್ದರು.