ಬೆಂಗಳೂರು, ಅ.29 – ದಾವಣಗೆರೆ ನಗರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನೂರಾರು ಕೋಟಿ ರೂ.ಗಳ ಅನುದಾನ ಅತ್ಯಗತ್ಯವಾಗಿದ್ದು, ತತ್‌ಕ್ಷಣದ ಅತ್ಯಗತ್ಯ ಕಾಮಗಾರಿಗಳನ್ನು ಕೈಗೊಳ್ಳಲು 500 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡುವಂತೆ ಮಹಾನಗರ ಪಾಲಿಕೆಯ ನಿಯೋಗವು ಮುಖ್ಯಮಂತ್ರಿಗಳನ್ನು ಆಗ್ರಹಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ಪಾಲಿಕೆ ಮಹಾಪೌರರಾದ ಕೆ. ಚಮನ್ ಸಾಬ್ ಮತ್ತು ಉಪ ಮಹಾಪೌರರಾದ ಸೋಗಿ ಶಾಂತಕುಮಾರ್ ಅವರುಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದಿಲ್ಲಿ ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಲಿಖಿತ ಮನವಿ ಪತ್ರ ಸಲ್ಲಿಸಿದರು.
ಸುಗಮ ಸಂಚಾರ, ಅತ್ಯುತ್ತಮ ರಸ್ತೆಗಳು, ಮಳೆ ನೀರು – ಒಳ ಚರಂಡಿ, ಬೀದಿ ದೀಪಗಳು, ಸ್ವಚ್ಛತೆಗಾಗಿ ಅಗತ್ಯವಾಗಿರುವ ಅನುದಾನವನ್ನು ಬಿಡುಗಡೆ ಮಾಡುವಂತೆ ಮತ್ತು ನಾಗರಿಕರ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಕಸಾಯಿಖಾನೆ ಹಾಗೂ ಅವಶ್ಯವಿರುವ ಹೆಚ್ಚಿನ ಪೌರ ಕಾರ್ಮಿಕರ ನೇಮಕಾತಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿಯೋಗವು ಮುಖ್ಯಮಂತ್ರಿಗಳನ್ನು ವಿನಂತಿಸಿಕೊಂಡಿತು.
ವರ್ತುಲ ರಸ್ತೆ : ದಾವಣಗೆರೆ ನಗರದಲ್ಲಿ ಹೆಚ್ಚುತ್ತಿರುವ ವಾಹನಗಳ ದಟ್ಟನೆಯನ್ನು ಕಡಿಮೆಗೊಳಿಸುವ ಸದುದ್ದೇಶದಿಂದ ಪಿ.ಬಿ. ರಸ್ತೆ ಗೋಶಾಲೆಯಿಂದ ಬಸಾಪುರ ಮೂಲಕವಾಗಿ ಬೇತೂರು ರಸ್ತೆವರೆಗೆ ವರ್ತುಲ ರಸ್ತೆ ನಿರ್ಮಾಣ ಕಾಮಗಾರಿಗೆ ಅತೀ ಅವಶ್ಯಕವಾಗಿದೆ. ಸುಮಾರು 6 ಕಿ. ಮೀ. ನಷ್ಟು ರಿಂಗ್ ರಸ್ತೆಯನ್ನು ಪೂರ್ಣಗೊ ಳಿಸಲು 120.00 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಮಂಜೂರು ಮಾಡಬೇಕು.
ಪಾಲಿಕೆ ವ್ಯಾಪ್ತಿಯ ಹೊರ ವಲಯದ ಬಡಾವಣೆಗಳಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡುವುದು ಅವಶ್ಯಕವಾಗಿದೆ. ಇದಕ್ಕಾಗಿ 200.00 ಕೋಟಿ ರೂ.ಗಳ ಎಸ್.ಎಫ್.ಸಿ. ವಿಶೇಷ ಅನುದಾನವನ್ನು ಬಿಡುಗಡೆ ಮಾಡಬೇಕು.
ಒಳಚರಂಡಿ ವಲಯ -2ರ ಒಳಚರಂಡಿ ಹಾಗೂ ಎಸ್.ಟಿ.ಪಿ. ಘಟಕದ ನಿರ್ಮಾಣ ಕಾಮಗಾರಿ ಅಗತ್ಯವಾಗಿದ್ದು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಸರ್ವೇ ಮಾಡಿ 142.00 ಕೋಟಿ ರೂ.ಗಳಿಗೆ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸದರಿ ಕಾಮಗಾರಿಗಳಿಗೆ ಸರ್ಕಾರದಿಂದ ಮಂಜೂರಾತಿ ನೀಡಿ ಅನುದಾನ ಬಿಡುಗಡೆ ಮಾಡಬೇಕು.
ದಾವಣಗೆರೆಯಲ್ಲಿ ಕಸಾಯಿಖಾನೆ ಅವಶ್ಯವಾಗಿದ್ದು, ಅತ್ಯಾಧುನಿಕ ಯಂತ್ರೋಪಕರಣಗಳನ್ನೊಳಗೊಂಡ ಸುಸಜ್ಜಿತ ಕಸಾಯಿಖಾನೆಯನ್ನು ನಿರ್ಮಾಣ ಮಾಡಲು ವಿಸ್ತೃತ ವರದಿಯನ್ನು 22.00 ಕೋಟಿ ರೂ.ಗಳಿಗೆ ತಯಾರಿಸಿದ್ದು, ಈ ಕಾಮಗಾರಿಗಳನ್ನು ಕೈಗೊಳ್ಳಲು ವಿಶೇಷ ಅನುದಾನ ಬಿಡುಗಡೆ ಮಾಡಬೇಕು.
ಸಾರ್ವಜನಿಕ ಸುರಕ್ಷತೆಯಿಂದ ಬೀದಿ ದೀಪಗಳನ್ನು ಅಳವಡಿಸುವ ಕಾಮಗಾರಿ ಕೈಗೊಳ್ಳಲು 8 ಕೋಟಿ ಅನುದಾನ ಬಿಡುಗಡೆ ಮಾಡಬೇಕು.
ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿದ್ದು, ಬೀದಿ ಗುಡಿಸುವಿಕೆ, ಕ್ರಿಮಿನಾಶಕ ಸಿಂಪಡಣೆ, ಘನ ತ್ಯಾಜ್ಯ ನಿರ್ವಹಣೆಗಾಗಿ ಅಗತ್ಯವಾಗಿರುವ 440 ಪೌರ ಕಾರ್ಮಿಕರನ್ನು ಹೊರ ಗುತ್ತಿಗೆ ಮೂಲಕ ನಿರ್ವಹಿಸಲು ಅನುಮತಿ ನೀಡಬೇಕು.