ಸಮಾಜದ ಹಿತಕ್ಕೆ ಪಕ್ಷಾತೀತವಾಗಿ ಒಗ್ಗೂಡಿ

ಸಮಾಜದ ಹಿತಕ್ಕೆ ಪಕ್ಷಾತೀತವಾಗಿ ಒಗ್ಗೂಡಿ

ಶಿವಸೈನ್ಯ ಸಂಘದ ರಾಜ್ಯ ಘಟಕದ ಪದಾಧಿಕಾರಿಗಳ ಪದಗ್ರಹಣದಲ್ಲಿ ಬಿ.ವಾಮದೇವಪ್ಪ

ದಾವಣಗೆರೆ, ಅ. 27- ಸಾಧು ಸದ್ಧರ್ಮ ಸಮಾಜವನ್ನು ಸದೃಢಗೊಳಿಸಲು ಮತ್ತು ತರಳ ಬಾಳು ಪರಂಪರೆಯನ್ನು ಉಳಿಸಲು ತರಳಬಾಳು ಶಿವಸೈನ್ಯ ಸಂಘದ ಮೂಲಕ ಯುವಪಡೆಯನ್ನು ರಚಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ತರಳಬಾಳು ಶಿವಸೈನ್ಯ ಸಂಘದ ರಾಜ್ಯ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಸಾಧು ಸದ್ಧರ್ಮ ಸಮಾಜದಲ್ಲಿ ಒಡಕಿನ ಧ್ವನಿ ಕೇಳಿ ಬರುತ್ತಿದ್ದು, ಸಮಾಜದ ಪ್ರಶ್ನೆ ಬಂದಾಗ ವ್ಯಕ್ತಿಗಿಂತ ಸಮಾಜ ಮುಖ್ಯ ಎಂಬ ಮನೋಭಾವನೆ ಪ್ರತಿಯೊಬ್ಬರಲ್ಲೂ ಬರಬೇಕೆಂದು ಹೇಳಿದರು.

ಸಂಘದ ಯಾವುದೇ ಪದಾಧಿಕಾರಿಗಳು ಸಹ ರಾಜಕೀಯ ಪಕ್ಷಗಳಿಗೆ ದುಂಬಾಲು ಬೀಳದೇ ಪಕ್ಷಭೇದ ಮರೆತು ಸಮಾಜದ ಹಿತಕ್ಕಾಗಿ ಒಂದಾಗಬೇಕಾದ ಅನಿವಾರ್ಯತೆ ಇದೆ ಎಂದರು.

ಸರ್ವ ಸಮಾಜಗಳನ್ನು ಅತ್ಯಂತ ಪ್ರೀತಿ, ಗೌರವದಿಂದ ಕಾಣುವ ಸಮಾಜ ನಮ್ಮ ಸಾಧು ಸದ್ಧರ್ಮ ಸಮಾಜವಾಗಿದೆ. 900 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಈ ಸಮಾಜಕ್ಕೆ ಗಟ್ಟಿತನ, ಭದ್ರ ನೆಲೆ ಮತ್ತು ಸಂಸ್ಕಾರವನ್ನು ತಂದುಕೊಟ್ಟವರು ಲಿಂ. ಗುರುಶಾಂತ ದೇಶಿಕೇಂದ್ರ ಸ್ವಾಮೀಜಿಯವರು. ಅಸಂಘಟಿತವಾಗಿದ್ದ ಸಮಾಜವನ್ನು ಸಂಘಟಿಸುವಲ್ಲಿ ಅತ್ಯಂತ ಶ್ರಮವಹಿಸಿದ್ದರು ಎಂದು ಶ್ರೀಗಳ ಸಮಾಜದ ಬಗೆಗಿನ ಕಳಕಳಿಯನ್ನು ಕೊಂಡಾಡಿದರು.

ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ, ಸಮಾಜದ ಭಕ್ತರನ್ನು ಸುಶಿಕ್ಷಿತರನ್ನಾಗಿ ಮಾಡುವುದಲ್ಲದೇ ಸಮಾಜವನ್ನು ಸುಭದ್ರಗೊಳಿಸಿದರು ಎಂದು ಹೇಳಿದರು. ತರಳಬಾಳು ಶಿವಸೈನ್ಯ ಸಂಘ ಕೇವಲ ರಾಜ್ಯ, ಜಿಲ್ಲೆಗೆ ಸೀಮಿತವಾಗದೇ ತಾಲ್ಲೂಕು, ಹೋಬಳಿ ಮತ್ತು ಗ್ರಾಮ ಮಟ್ಟದಲ್ಲಿ ಸಂಘಟನೆ ಮಾಡುವ ಮೂಲಕ ಸಮಾಜ ಮುಖಿ ಕಾರ್ಯಚಟುವಟಿಕೆಗಳನ್ನು ನಡೆಸಬೇಕೆಂದು ಸಲಹೆ ನೀಡಿದರು.

ತರಳಬಾಳು ಶಿವಸೈನ್ಯ ಸಂಘವು ಯಾವುದೇ ಸಮಾಜದ ಪ್ರತಿಸ್ಪರ್ಧಿಯಲ್ಲ. ಬದಲಾಗಿ ಸಮಾಜವನ್ನು ಮತ್ತಷ್ಟು ಸದೃಢಗೊಳಿಸಲು, ಸಮಾಜ ಮುಖಿ ಕಾರ್ಯಗಳನ್ನು ಮಾಡುವ ಸಲುವಾಗಿ ರಚನೆಗೊಂಡಿದೆ ಎಂದು ಸಮಾಜದ ಮುಖಂಡರಾದ ಪಿ. ಮಹಾಬಲೇಶ್ವರ ಗೌಡ್ರು ಹೇಳಿದರು.

ಸಮಾಜದಲ್ಲಿ ಏನೇ ಭಿನ್ನಾಭಿಪ್ರಾಯಗಳು, ನಿಲುವುಗಳು, ವ್ಯತ್ಯಾಸಗಳಿದ್ದರೂ ನಮ್ಮ ಸಮಾಜಕ್ಕೆ ತರಳಬಾಳು ಜಗದ್ಗುರುಗಳೇ ಪಿತಾಮಹಾ ಹೊರತು ಬೇರೆಯವರಲ್ಲ ಎಂಬುದನ್ನು ನಾವೆಲ್ಲರೂ ಮನಗಾಣಬೇಕೆಂದರು.

ನಮ್ಮ ಸಮಾಜ ಮತ್ತು ಸಂಘ ತರಳಬಾಳು ಗುರುಪರಂಪರೆಯ ಗುರುಪೀಠದ ಆದೇಶದಂತೆ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತಿದೆ ಎಂದರು.

ಮಹಾನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಮಾತನಾಡಿ, ತರಳಬಾಳು ಶಿವಸೈನ್ಯ ಸಂಘ ತನ್ನ ಜಿಲ್ಲಾ ವ್ಯಾಪ್ತಿಯಿಂದ ರಾಜ್ಯ ವ್ಯಾಪ್ತಿಯವರೆಗೂ ವಿಸ್ತರಿಸಿಕೊಂಡಿದ್ದು, ಇದರಿಂದ ಪದಾಧಿಕಾರಿಗಳಿಗೆ, ಸದಸ್ಯರಿಗೆ ಇನ್ನೂ ಜವಾಬ್ದಾರಿ ಹೆಚ್ಚಿದೆ ಎಂದರು.

ಸಂಘದ ಉತ್ತಮ ಕೆಲಸಗಳಿಗೆ ನನ್ನ ಸಹಕಾರ ಯಾವತ್ತೂ ಇರುತ್ತದೆ. ಸಮಾಜದಲ್ಲಿ ಯಾರೇ ಆಗಲಿ ಸಮಾಜಮುಖಿ ಕೆಲಸಗಳನ್ನು ಮತ್ತು ಸಮಾಜದ ಒಳಿತಿಗೆ ದುಡಿಯುವವರನ್ನು ಪ್ರೋತ್ಸಾಹಿಸಬೇಕೆಂದು ಹೇಳಿದರು.

ರೈತ ಮುಖಂಡ ಹೊನ್ನೂರು ಮುನಿಯಪ್ಪ ಮತ್ತಿತರೆ ಗಣ್ಯರು ಸಮಾಜ ಸಂಘಟನೆ ಬಗ್ಗೆ ಮಾತನಾಡಿದರು.

ಇದೇ ವೇಳೆ 2003 ರಿಂದ ಇದುವರೆಗೂ ತರಳಬಾಳು ಶಿವಸೈನ್ಯ ಸಂಘದಲ್ಲಿ ಕೆಲಸ ಮಾಡಿದ ಪದಾಧಿಕಾರಿಗಳು ಮತ್ತು ನೂತನ ರಾಜ್ಯ ಘಟಕದ ಪದಾಧಿಕಾರಿಗಳನ್ನು ಗೌರವಿಸಲಾಯಿತು.

ಕಕ್ಕರಗೊಳ್ಳ ಜಿ.ಪಂ. ಮಾಜಿ ಸದಸ್ಯರಾದ ಕೆ.ಜಿ.ಬಸವನಗೌಡ್ರು ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಮುಖಂಡರಾದ ರಾಮಗೊಂಡನಹಳ್ಳಿ ಜಯಣ್ಣ, ಬೇತೂರು ರೇವಣಸಿದ್ಧಪ್ಪ ಮರಡಿ, ಕಂಸಾಗರದ ಪಂಚಣ್ಣ, ಬೇತೂರು ಸಂಗನಗೌಡ್ರು, ಮಾಗನೂರು ಉಮೇಶ ಗೌಡ್ರು, ಯಶವಂತಗೌಡ್ರು, ಶ್ರೀನಿವಾಸ ಶಿವಗಂಗಾ, ಕ್ಯಾರಕಟ್ಟೆ ನಾಗಪ್ಪ ಮೇಷ್ಟ್ರು, ಕಾವಲಹಳ್ಳಿ ಪ್ರಭು, ಶಶಿಧರ ಹೆಮ್ಮನಬೇತೂರು, ಶಿವರಾಜ ಕಬ್ಬೂರು, ಬಿ.ಎಸ್.ಪ್ರಕಾಶ್,  ಕೊರಟಿಕೆರೆ ಶಿವಕುಮಾರ್ ಉಪಸ್ಥಿತರಿದ್ದರು.

ಜಗದೀಶ್ ಕೂಲಂಬಿ ಸ್ವಾಗತಿಸಿದರು, ಶಿವರಾಜ್ ಕಬ್ಬೂರು ನಿರೂಪಿಸಿ, ವಂದಿಸಿದರು.

ರಾಜ್ಯ ಘಟಕದ ಪದಾಧಿಕಾರಿಗಳು ಆಯ್ಕೆ: ಶಶಿಧರ ಹೆಮ್ಮನಬೇತೂರು (ಅಧ್ಯಕ್ಷರು), ಪಿ. ಮಹಾಬಲೇಶ್ವರ ಗೌಡ್ರು, ಶ್ರೀನಿವಾಸ ಶಿವಗಂಗಾ ( ಗೌರವಾಧ್ಯಕ್ಷರು), ಕೆ.ಬಿ. ಮೋಹನ್ ಸಿರಿಗೆರೆ, ಅಶ್ವಿನ್ ಕೆ.ಪಿ. ನಿಂಬೆಗುಂದಿ, ಶಿಕಾರಿಪುರ ವೀರಣ್ಣ ಮಾಕನೂರು, ಕೆ.ಬಿ. ಶ್ರೀಧರ್ ಪಾಟೀಲ್  ಭದ್ರಾವತಿ, ಲಿಂಗರಾಜ್ ಅಗಸನಕಟ್ಟೆ (ಉಪಾಧ್ಯಕ್ಷರು), ವಕೀಲರಾದ ಬಸವನಗೌಡರು ವಿಜಯನಗರ (ಕಾರ್ಯದರ್ಶಿ), ಶಿವಕುಮಾರ್ ಕೊರಟಿಕೆರೆ (ಕೋಶಾಧ್ಯಕ್ಷ) ಸೇರಿದಂತೆ 39 ಪದಾಧಿಕಾರಿಗಳು ಸೇವಾ ದೀಕ್ಷೆ ಸ್ವೀಕರಿಸಿದರು.

error: Content is protected !!