ದಾವಣಗೆರೆ, ಸೆ. 25- ಭಾರತೀಯ ಸಂಸ್ಕೃತಿ ಪ್ರಸರಣ ಪ್ರತಿಯೊಬ್ಬರ ಆದ್ಯ ಕರ್ತವ್ಯ. ವಿವೇಕಾನಂದರ ಚಿಂತನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ವೀರೇಶಾನಂದ ಸರಸ್ವತಿ ಹೇಳಿದರು.
ನಗರದ ವರ್ತುಲ ರಸ್ತೆಯಲ್ಲಿರುವ ಶ್ರೀ ಶಂಕರ ಸಮುದಾಯ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ `ವಿವೇಕಧಾರಾ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಉತ್ತಮ ಪುಸ್ತಕ ಪ್ರಸರಣಕ್ಕೆ ದಾರಿ ಮಾಡಿಕೊಡಬಲ್ಲದು. ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ದಿವ್ಯ ವ್ಯಕ್ತಿತ್ವದ ವಿವಿಧ ಆಯಾಮಗಳನ್ನಾಧರಿಸಿ ಸುಮಾರು 37 ಲೇಖನಗಳನ್ನು ಪ್ರಮುಖ ದಿನಪತ್ರಿಕೆಗಳಲ್ಲಿ ಬರೆಯುವ ಸೌಭಾಗ್ಯ ನನ್ನದಾಯಿತು. ಈ ಎಲ್ಲಾ ಲೇಖನಗಳ ಸಂಗ್ರಹವೇ `ವಿವೇಕಧಾರಾ’ ಕೃತಿ ಎಂದು ಹೇಳಿದರು.
ಕೃತಿ ಮುದ್ರಣಕ್ಕೂ ಮುನ್ನವೇ 11,463 ಪುಸ್ತಕಗಳನ್ನು ಓದುಗರು ಕಾಯ್ದಿರಿಸಿದ್ದು, ಅಚ್ಚರಿಯ ಸಂಗತಿ. ರಾಜ್ಯದ ವಿವಿಧ ಕಡೆ ಗಳಿಂದಲೂ ಇನ್ನೂ ಬೇಡಿಕೆ ಹೆಚ್ಚಾಗುತ್ತಿದ್ದು, 25 ಸಾವಿರ ಪ್ರತಿಗಳು ಮುದ್ರಣಗೊಳ್ಳಲಿದ್ದು, ವಿವೇಕಾನಂದರ ಭಕ್ತರ ಸಹಕಾರ ಸ್ಮರಣೀಯ ಎಂದರು.
ಉತ್ತಮ ಪುಸ್ತಕಗಳ ಸಂಗ್ರಹದೊಟ್ಟಿಗೆ ಉನ್ನತ ಚಿಂತನೆಗಳನ್ನು ಮಾಡುವತ್ತ ಚಿತ್ತ ಹರಿಸಬೇಕಾಗಿದೆ. ವಿವೇಕಾನಂದರ ಬದುಕಿನ ಹಲವು ಆಯಾಮಗಳನ್ನು ಅಧ್ಯಯನ ಮಾಡುವುದೇ ಒಂದು ವಿಸ್ಮಯ ಎಂದು ಹೇಳಿದರು.
ಇಂಜಿನಿಯರಿಂಗ್ ಪದವೀಧರನಾದ ನನಗೆ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಮೂಡಿಸಿದವರು ಸ್ವಾಮಿ ಪುರುಷೋತ್ತಮಾನಂದರು. ನನ್ನ ಮಾತೃಭಾಷೆ ತೆಲುಗು. ಆದರೂ ಕನ್ನಡ ಭಾಷೆಯಲ್ಲಿ ಬರೆಯಲು ಪ್ರೇರೇಪಿಸಿದರು ಎಂದು ಅಭಿಮಾನಪೂರ್ವಕವಾಗಿ ನುಡಿದರು.
`ವಿವೇಕಧಾರಾ’ ಕೃತಿ ಲೋಕಾರ್ಪಣೆ ಮಾಡಿದ ದಾವಣಗೆರೆ ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ತ್ಯಾಗೀಶ್ವರಾನಂದ ಜೀ ಮಹಾರಾಜ್ ಮಾತನಾಡಿ, `ವಿವೇಕಧಾರಾ’ ಕೃತಿಯನ್ನು ಅಧ್ಯಯನ ಮಾಡುವ ಜೊತೆಗೆ ಅಮೃತಧಾರೆಯನ್ನಾಗಿಸಬೇಕಾಗಿದೆ. ಅಧ್ಯಾತ್ಮಿಕ ಮೌಲ್ಯಗಳನ್ನು ಮತ್ತು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕೆಂದರು.
ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಭಾರತೀಯ ಸಂಸ್ಕೃತಿ, ಸನಾತನ ಧರ್ಮವನ್ನು ಇಡೀ ಜಗತ್ತಿಗೇ ಬೋಧಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ಚಿಕಾಗೋ ಭಾಷಣದಿಂದ ಅನೇಕರು ಪ್ರಭಾವಿತರಾಗಿದ್ದರು ಎಂದರು.
ಹಿಂದೂ ಧರ್ಮ ಎಲ್ಲಾ ಧರ್ಮಗಳಿಗೆ ಬುನಾದಿಯಾಗಿದ್ದು, ವಿವೇಕಾನಂದರ ವ್ಯಕ್ತಿತ್ವ ಎಲ್ಲರ ಮೇಲೂ ಪ್ರಭಾವ ಬೀರಿತ್ತು. ಅವರ ಚಿಂತನೆಗಳನ್ನು ಪ್ರತಿಯೊಬ್ಬರೂ ಸಹ ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ರಾಣೇಬೆನ್ನೂರಿನ ಪ್ರಕಾಶಾನಂದ ಜೀ, ಹರಿಹರದ ಶಾರದೇಶಾನಂದ ಜೀ ಮಹಾರಾಜ್, ಸರ್ ಎಂ.ವಿ. ಕಾಲೇಜಿನ ಕಾರ್ಯದರ್ಶಿ ಎಸ್.ಜೆ. ಶ್ರೀಧರ್, ಎಸ್.ಎಸ್.ಆಸ್ಪತ್ರೆ ಉಪ ಪ್ರಾಚಾರ್ಯರಾದ ಡಾ. ಶಶಿಕಲಾ ಕೃಷ್ಣಮೂರ್ತಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ. ಬಿ.ಟಿ. ಅಚ್ಯುತ್, ವೀರೇಶ್, ಎನ್.ಎಂ. ಶಾಂತಿನಥ್, ನಳಿನಾ ಅಚ್ಯುತ್ ಮತ್ತಿತರರು ಭಾಗವಹಿಸಿದ್ದರು.