ಮೆಕ್ಯಾನಿಕಲ್ ಇಂಜಿನಿಯರ್‌ಗಳಿಗೆ ಹೆಚ್ಚಿದ ಬೇಡಿಕೆ

ಮೆಕ್ಯಾನಿಕಲ್ ಇಂಜಿನಿಯರ್‌ಗಳಿಗೆ ಹೆಚ್ಚಿದ ಬೇಡಿಕೆ

ಬಿಐಇಟಿ ಸ್ವಾಯತ್ತ ಸಂಸ್ಥೆ ಉದ್ಘಾಟನೆಯಲ್ಲಿ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಡಾ.  ವಿದ್ಯಾಶಂಕರ್

ದಾವಣಗೆರೆ, ಸೆ.25- ಉತ್ಪಾದನಾ ವಲಯ ವಿಸ್ತರಣೆಯಾಗುತ್ತಿರುವುದರಿಂದ ಮೆಕ್ಯಾನಿಕಲ್  ಇಂಜಿನಿಯರಿಂಗ್ ಪದವೀಧರರಿಗೆ ಬೇಡಿಕೆ ಹೆಚ್ಚಾಗಲಿದೆ. ದೇಶ ಮತ್ತು ರಾಜ್ಯದಲ್ಲಿ ಮೆಕ್ಯಾನಿಕಲ್ ಕ್ಷೇತ್ರದ ಬೆಳವಣಿಗೆಯ ವೇಗ ಕೂಡ ಹೆಚ್ಚುತ್ತಿದೆ ಎಂದು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಡಾ.ಎಸ್. ವಿದ್ಯಾಶಂಕರ್ ಹೇಳಿದರು.

ನಗರದ ಬಿಐಇಟಿ ಕಾಲೇಜು ಆವರಣದಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ಬಿಐಇಟಿ ಸ್ವಾಯತ್ತ ಸಂಸ್ಥೆ ಉದ್ಘಾಟನೆ ಹಾಗೂ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್‌ಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಇಂಜಿನಿಯರಿಂಗ್ ಕೋರ್ಸ್‌ಗಳ ಬೇಡಿಕೆ ಚಕ್ರ ಬದಲಾಗುತ್ತಿದೆ. ಮೆಕ್ಯಾನಿಕಲ್ ವಿದ್ಯಾರ್ಥಿಗಳಿಗೆ ಮುಂದೆ ಉತ್ತಮ ಭವಿಷ್ಯ ಇದೆ ಎಂದರು. ಭವಿಷ್ಯದ ಬದಲಾವಣೆಗಳನ್ನು ಗಮನಿಸಿ ಕೋರ್ಸ್‌ಗಳ ಆಯ್ಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಇಂಜಿನಿಯರಿಂಗ್ ಶಿಕ್ಷಣದ ಗುಣಮಟ್ಟ ಕುಸಿದರೆ ಪದವೀಧರರು ಕೈಗಾರಿಕಾ ವಲಯದಲ್ಲಿ ಉದ್ಯೋಗ ಪಡೆಯಲು ಸಾಧ್ಯವಾಗದು. ಉತ್ತೀರ್ಣತೆಯ ಪ್ರಮಾಣ ಹೆಚ್ಚಿಸಲು ಶಿಕ್ಷಣದ ಗುಣಮಟ್ಟದಲ್ಲಿ ರಾಜೀ ಸಲ್ಲದು ಎಂದರು.

ಕೆಲವು ಸ್ವಾಯತ್ತ ಸಂಸ್ಥೆಗಳಲ್ಲಿ ಪಠ್ಯಕ್ರಮದ ಗುಣಮಟ್ಟ ಕಳಪೆಯಾಗಿರು ವುದು ಕಂಡು ಬರುತ್ತಿದೆ. ಇದು ಆಗಬಾರದು. ಮುಂದಿನ ದಿನಗಳಲ್ಲಿ ಸ್ವಾಯತ್ತ ಇಂಜಿನಿ ಯರಿಂಗ್ ಕಾಲೇಜುಗಳ ಪ್ರಶ್ನೆಪತ್ರಿಕೆಗಳ ಗುಣಮಟ್ಟದ ಬಗ್ಗೆ ತೀವ್ರ ನಿಗಾವಹಿಸಲು ಸಮಿತಿ ರಚಿಸಲಾಗುವುದು ಎಂದು ಹೇಳಿದರು.

ಸ್ವಾಯತ್ತ ಸಂಸ್ಥೆಗಳಲ್ಲಿ ಉತ್ತೀರ್ಣರಾಗುವುದು ಸುಲಭ ಎನ್ನುವ ಭಾವನೆ ಇದೆ. ಅಂತಹ ಮನಸ್ಥಿತಿಯಲ್ಲಿ ವಿದ್ಯಾರ್ಥಿಗಳು ಓದು ಮುಂದುವರೆಸಿದರೆ ಪದವಿ ನಂತರ ಉದ್ಯೋಗ ಪಡೆಯುವುದು ಕಷ್ಟವಾಗಲಿದೆ. ಐಐಟಿಯಂತಹ ಉನ್ನತ ಸಂಸ್ಥೆಗಳಲ್ಲಿ ಓದಿದರೂ ಶೇ. 50 ರಷ್ಟು ಪದವೀಧರರಿಗೆ ಉದ್ಯೋಗ ಸಿಕ್ಕಿಲ್ಲ. ಹಾಗಾಗಿ ಎಲ್ಲಾ ಸ್ವಾಯತ್ತ ಇಂಜಿನಿಯರಿಂಗ್ ಕಾಲೇಜುಗಳು ಗುಣಮಟ್ಟದ ಕಡೆ ಗಮನಹರಿಸುವಂತೆ ಸಲಹೆ ನೀಡಿದರು.

ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಇಂಜಿನಿಯರಿಂಗ್ ಪದವಿ ನಂತರ ಉದ್ಯೋಗ ಹುಡುಕಿ ಹೋಗುವ ಬದಲು ಉದ್ಯೋಗ ಸೃಷ್ಠಿ ಮಾಡುವ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ಸಾಮಾನ್ಯ ಜನರಿಗೂ ಅನುಕೂಲವಾ ಗುವ ನಿಟ್ಟಿನಲ್ಲಿ ಸಂಶೋಧನೆಗಳಾಗಬೇಕು.ಸರ್ಕಾರಿ ಸವಲತ್ತುಗಳು ಅರ್ಹರಿಗೆ ತಲುಪುವುದಕ್ಕೆ ನೆರವಾಗುವ ತಂತ್ರಜ್ಞಾನ ಅಭಿವೃದ್ಧಿಪಡಿಸಬೇಕೆಂದು ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ವೃತ್ತಿ ಕೌಶಲ್ಯ ಶಿಕ್ಷಣಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸುವಂತೆ ಸಲಹೆ ನೀಡಿದರು.

ವಿಟಿಯು ಕುಲಸಚಿವ ಡಾ. ಬಿ.ಇ. ರಂಗಸ್ವಾಮಿ, ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಹೆಚ್.ಬಿ. ಅರವಿಂದ್, ಮಹಾವಿದ್ಯಾಲಯದ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಸೇರಿದಂತೆ, ಇತರೆ ಗಣ್ಯರು ಉಪಸ್ಥಿತರಿದ್ದರು.

error: Content is protected !!