ಗೋಷ್ಠಿ, ಮೇಳಗಳ ಫಲಶೃತಿ ಸಾರ್ವಜನಿಕರಿಗೆ ಲಭಿಸಲಿ

ಗೋಷ್ಠಿ, ಮೇಳಗಳ ಫಲಶೃತಿ ಸಾರ್ವಜನಿಕರಿಗೆ ಲಭಿಸಲಿ

ಶರಣ ಸಂಸ್ಕೃತಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಡಾ.ಬಸವಕುಮಾರ ಶ್ರೀ ಅಭಿಮತ

ಚಿತ್ರದುರ್ಗ, ಸೆ.11- ಶರಣ ಸಂಸ್ಕೃತಿ ಉತ್ಸವದಲ್ಲಿ ನಡೆಯುವ ವಿವಿಧ ಗೋಷ್ಠಿಗಳು ಹಾಗೂ ಮೇಳಗಳ ಫಲಶೃತಿ ಸಾರ್ವಜನಿಕರಿಗೆ ಸ್ವಲ್ಪವಾದರೂ ತಟ್ಟಬೇಕು ಎಂದು ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.  ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.

ಇಲ್ಲಿನ ಮುರುಘಾ ಮಠದ ಆವರಣದಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಈಚೆಗೆ ನಡೆದ ಕೃಷಿ ಮೇಳದ ಪೂರ್ವಭಾವಿ ಸಭೆಯಲ್ಲಿ ಶ್ರೀಗಳು ಮಾತನಾಡಿದರು.

ಚಿತ್ರದುರ್ಗದ ಮುರುಘಾಮಠವು ತನ್ನ ಪರಿಧಿಯೊಳಗೆ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕವಾಗಿ ಸಾರ್ವಜನಿಕ ಹಿತಕ್ಕೋಸ್ಕರ ಶ್ರಮಿಸುತ್ತಿದ್ದು, ಶರಣ ಸಂಸ್ಕೃತಿ ಉತ್ಸವವು ಬರುವ ಅಕ್ಟೋಬರ್ 5ರಿಂದ 13ರ ವರೆಗೆ ನಡೆಯಲಿದೆ. ಅದರಲ್ಲಿ ನಡೆಯುವ ಮೇಳಗಳು ಎಲ್ಲರ ಗಮನ ಸೆಳೆಯುವ ನಿಟ್ಟಿನಲ್ಲಿ ಜರುಗಬೇಕು ಎಂದು ಹೇಳಿದರು.

ಕೃಷಿ, ತೋಟಗಾರಿಕೆ, ಕೈಗಾರಿಕೆಗೆ ಸಂಬಂಧ ಪಟ್ಟ ಸರ್ಕಾರಿ ಮತ್ತು ಖಾಸಗಿ ಇಲಾಖೆಯ ಅಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಅಭಿಪ್ರಾಯ ಸಂಗ್ರಹಿಸಿದ ಶ್ರೀಗಳು, ಪೀಠ ಪರಂಪರೆಯ ಎಲ್ಲ ಶ್ರೀಗಳೂ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಹಾಗಾಗಿ ಈ ಪದ್ಧತಿ ಉಳಿಸುವ ಸಲುವಾಗಿ ಕೃಷಿ, ತೋಟಗಾರಿಕೆ ಮತ್ತು ಕೈಗಾರಿಕಾ ಮೇಳ ಯಶಸ್ವಿಗೊಳಿಸೋಣ ಎಂದು ಮನವಿ ಮಾಡಿದರು.

ಮೇಳದಲ್ಲಿ ತೋಟಗಾರಿಕೆ ಬೆಳೆಗಾರರಿಗೆ ಅವಶ್ಯವಿರುವ ಸಾಮಾನುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲಿದ್ದೇವೆ ಎಂದು ವರ್ಷಾ ಏಜೆನ್ಸೀಸ್‌ನ ರಂಗಸ್ವಾಮಿ ತಿಳಿಸಿದರು.

ಎಸ್‌ಜೆಎಂ ಮುರುಘರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯದ ಬಯೋಡೀಸೇಲ್‌ ವಿಭಾಗದ ಮುಖ್ಯಸ್ಥ ಜ್ಞಾನಾನಂದ ಮಾತನಾಡಿ, ಕಾಲೇಜಿನಲ್ಲಿ ಬಯೋಡೀಸೆಲ್‌ ಉತ್ಪಾದನಾ ಘಟಕವಿದ್ದು, ಅದರಿಂದಲೇ ಕಾಲೇಜಿನ ಅನೇಕ ಬಸ್ಸುಗಳು ಓಡುತ್ತಿವೆ. ಅದರ ಪ್ರಾತ್ಯಕ್ಷಿಕೆಯನ್ನು ವಸ್ತು ಪ್ರದರ್ಶನದಲ್ಲಿ ಇಡುವ ಬಗ್ಗೆ ಮಾತನಾಡಿದರು.

ಪಶು ಪಾಲನೆ ಇಲಾಖೆಯ ಅಧಿಕಾರಿ ಡಾ. ಮುರುಘೇಶ್, ಆಯುಷ್ ಇಲಾಖೆಯ ಡಾ. ಶಿವಕುಮಾರ್, ಮೌನೇಶ್ ಪತ್ತಾರ್, ಧರ್ಮಸ್ಥಳ ಸ್ವಸಹಾಯ ಸಂಘದ ವ್ಯವಸ್ಥಾಪಕಿ ಮಂಜುಳಾ, ಪ್ರಭುಶಂಕರ್, ಸಂಘಟಕ ಪಿ. ವೀರೇಂದ್ರ ಕುಮಾರ್, ಅಪ್ಪರ್ ಭದ್ರಾ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

error: Content is protected !!