ರಾಣೇಬೆನ್ನೂರು ರಂಗಭೂಮಿ ಕಲಾವಿದರನ್ನು ಕೈಬಿಟ್ಟಿಲ್ಲ

ರಾಣೇಬೆನ್ನೂರು ರಂಗಭೂಮಿ ಕಲಾವಿದರನ್ನು ಕೈಬಿಟ್ಟಿಲ್ಲ

ಸಹಾಯಾರ್ಥ ನಾಟಕ ಪ್ರದರ್ಶನದಲ್ಲಿ ರವೀಂದ್ರಗೌಡ ಪಾಟೀಲ

ರಾಣೇಬೆನ್ನೂರು, ಸೆ. 10- ರಾಣೇಬೆನ್ನೂರಿನ ಜನತೆ ವೃತ್ತಿರಂಗಭೂಮಿ ಕಲಾವಿದರನ್ನು ಯಾವತ್ತೂ  ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ  ಎಂದು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಹೇಳಿದರು

ನಿನ್ನೆ ರಾತ್ರಿ  ಇಲ್ಲಿನ ನಗರಸಭೆಯ ಬಸಪ್ಪ ಗುಡ್ಡದ ಸ್ಮಾರಕ ಭವನದಲ್ಲಿ ಇಳಕಲ್ ತಾಲ್ಲೂಕು ರಂಗಸಂಗಮ ಕಲೆ ಮತ್ತು ಸಾಂಸ್ಕೃತಿಕ ಸಂಘವು   ವೃತ್ತಿ ರಂಗಭೂಮಿ ಕಲಾವಿದೆ ಶ್ರೀಮತಿ ರೇಷ್ಮಾ ಇಳಕಲ್ ಇವರ ಸಹಾಯಾರ್ಥ ಪ್ರದರ್ಶಿಸಿದ `ಕಿವುಡ ಮಾಡಿದ ಕಿತಾಪತಿ’ ಹಾಸ್ಯಭರಿತ   ನಾಟಕದ ಉದ್ಘಾಟನೆ ನೆರೆವೇರಿಸಿ ಅವರು ಮಾತನಾಡಿದರು.

ಟಿ.ವಿ ಮತ್ತು ಸಿನಿಮಾ ಹಾಗೂ ಯು ಟ್ಯೂಬ್ ಹಾವಳಿಯಲ್ಲಿ ನಲುಗಿ ಹೋಗಿರುವ ನಾಟಕ ಕಂಪನಿಗಳು ಹಸಿವು, ಕಷ್ಟ ಆವರಿಸಿದಾಗ ರಾಣೇಬೆನ್ನೂರನ್ನು ನೆನೆಸಿಕೊಂಡು ಬರುತ್ತಾರೆ. ಪ್ರತಿಬಾರಿ ಬಂದಾಗ ಅವರ ಕೈಹಿಡಿದು ಆಶ್ರಯ ನೀಡುತ್ತಿರುವವರು ಇಲ್ಲಿನ ಪ್ರೇಕ್ಷಕರು ಮತ್ತು  ಪ್ರೋತ್ಸಾಹಕರು ಎಂದರು. 

ಕಳೆದ 40 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ   ನಟಿ ಆರತಿ  ಅಭಿನಯದ ‘ರಂಗನಾಯಕಿ’ ಚಲನಚಿತ್ರ ಕಾಲದಿಂದಲೇ   ನಾಟಕ ಕಂಪನಿಗಳಿಗೆ, ವೃತ್ತಿ ರಂಗಭೂಮಿ ಕಲಾವಿದರಿಗೆ ಸಹಾಯ, ಸಹಕಾರ ನೀಡಿ ಪ್ರೋತ್ಸಾಹಿಸುತ್ತಿದ್ದ  ರಾಣೇಬೆನ್ನೂರಿನ ಜನತೆಯ ಕಾರ್ಯವು ಜನಮಾನಸದಲ್ಲಿ ಉಳಿದಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ  ಬಯಲಾಟ ಕಲೆಯಲ್ಲಿ ರಾಜ್ಯ ಪ್ರಶಸ್ತಿ ಪಡೆದ ಕೆ.ಪಿ. ಭೂತಯ್ಯನವರನ್ನು ಸನ್ಮಾನಿಸಲಾಯಿತು. 

ಇಳಕಲ್ ತಾಲ್ಲೂಕು ರಂಗಸಂಗಮ ಕಲೆ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ರೇಷ್ಮಾ ಸಿ. ಅಳವಂಡಿ ಮಾತನಾಡಿ, ಕಲಾವಿದರ ತವರೂರಾದ ರಾಣೇಬೆನ್ನೂರಿ ನಲ್ಲಿ ಒಂದು ಅತ್ಯಾಧುನಿಕ ಕಲಾ ಮಂದಿರವನ್ನು ಸರ್ಕಾರ ನಿರ್ಮಿಸಿಕೊಡಬೇಕಾಗಿದೆ ಎಂದರು. 

ಕಲಾವಿದರಾದ ಮೌಲಾಸಾಬ ಗುಡಿಗೇರಿ, ಮಹಾರುದ್ರಾಚಾರಿ ಹರಪನಹಳ್ಳಿ,  ಭಾರತಿ ಎಚ್. ನಾಕೋಡ, ಮಹಾದೇವ ದಾವಣಗೆರೆ, ಬೀರೇಶ ನಾಯಕ, ರೂಪಾ ಶಿಗ್ಗಾಂವ, ಕುಮಾರ ಶಿಗ್ಗಾಂವ, ಜ್ಯೂ. ಶೃತಿ ಮುಂತಾದ ಕಲಾವಿದರು ನಾಟಕ ಅಭಿನಯಿಸಿದರು.    

ವೇದಿಕೆ ಮೇಲೆ ಚಂದ್ರಣ್ಣ ಎಚ್. ಬೇಡರ, ಶಿವಾನಂದಪ್ಪ ಸಾಲಗೇರಿ, ಅಶೋಕಪ್ಪ ನಾಯಕ, ಹಿರಿಯ ರಂಗಭೂಮಿ ಕಲಾವಿದರಾದ ಗಣೇಶಪ್ಪ ಕುಲಕರ್ಣಿ, ಅಂಗವಿಕಲರ ಸಂಘದ ಇಳಕಲ್ ಅಧ್ಯಕ್ಷೆ ಯಶೋಧ ಒನಕಿ, ಉದ್ಯಮಿ ಬಸವರಾಜ ತಳವಾರ ಮುಂತಾದವರು ಉಪಸ್ಥಿತರಿದ್ದರು. 

error: Content is protected !!