ಗುರು ಎಂದರೆ ಒಬ್ಬ ವ್ಯಕ್ತಿಯಲ್ಲ, ಅದೊಂದು ಅದ್ಭುತ ಶಕ್ತಿ

ಗುರು ಎಂದರೆ ಒಬ್ಬ ವ್ಯಕ್ತಿಯಲ್ಲ, ಅದೊಂದು ಅದ್ಭುತ ಶಕ್ತಿ

ದೀಪ ತಾನು ಉರಿದು ಜಗತ್ತಿಗೆ ಬೆಳಕು ನೀಡುವ ಹಾಗೆ ಅಜ್ಞಾನದಿಂದ ಜ್ಞಾನದೆಡೆಗೆ ಕರೆದೊಯ್ಯುವ ಪ್ರತಿಯೊಬ್ಬ ಗುರುವಿಗೂ ನನ್ನ ಕೋಟಿ ಕೋಟಿ ನಮನಗಳು…

`ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂಬಂತೆ, ನಮಗೆ ಅಕ್ಷರ ಜ್ಞಾನ ಕಲಿಸಿದ, ಜೀವನಕ್ಕೆ ಒಂದು ಅರ್ಥ ಕಲ್ಪಿಸಿದ, ಬದುಕಿಗೆ ದಾರಿ ತೋರಿದ, ನೀತಿ ಪಾಠ ಕಲಿಸಿದ, ಆತ್ಮ ವಿಶ್ವಾಸವನ್ನು ತುಂಬಿದ, ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಿದ, ಎಲ್ಲರಿಗೂ ಪ್ರೀತಿಯನ್ನು ಹಂಚಿದ, ವ್ಯಕ್ತಿತ್ವ ವಿಕಸನಗೊಳ್ಳಲು ಸಹಕರಿಸಿದ, ಪ್ರತಿಭೆಯನ್ನು ಹೊರ ತೆಗೆಯಲು   ಅಹರ್ನಿಶಿ ದುಡಿದ, ಸರ್ವತೋಮುಖ ಏಳಿಗೆಗೆ ಶ್ರಮಿಸಿದ, ಸದೃಢ ವ್ಯಕ್ತಿಯನ್ನಾಗಿ ರೂಪಿಸಿದ, ತಪ್ಪು ಒಪ್ಪುಗಳನ್ನು  ತಿದ್ದಿ ತೀಡಿದ ಶಿಕ್ಷಕರನ್ನು ಅರ್ಥಾತ್ ಗುರು ಗಳನ್ನು  ನೆನಪಿಸಿಕೊಳ್ಳುವ ಅತ್ಯಂತ ಮಹತ್ವದ ದಿನವಿದು. ಇವೆಲ್ಲವನ್ನೂ ವಿದ್ಯಾರ್ಥಿಗಳು ತಮ್ಮದಾಗಿಸಿ ಕೊಳ್ಳ ಬೇಕಾದರೆ ಗುರುವಿನ ಗುಲಾಮರಾಗಲೇಬೇಕು. 

ಗುರುವಿಗೆ ಯಾವಾಗಲೂ ಶಿಷ್ಯನ ಉನ್ನತಿ ಕಡೆಯೇ ಚಿಂತೆ, ಹಾಗೆಯೇ ವಿದ್ಯಾರ್ಥಿಗೆ ಗುರುಗಳನ್ನು ಒಲಿಸಿಕೊಳ್ಳುವ ಚಿಂತೆ. ಆ ಪ್ರಯತ್ನದಲ್ಲಿ  ಪರಮಹಂಸರು ಮತ್ತು ಸ್ವಾಮಿ ವಿವೇಕಾ ನಂದರು ಹಾಗೂ ದ್ರೋಣಾ ಚಾರ್ಯರು ಮತ್ತು ಏಕಲವ್ಯರು ಸಫಲರಾಗಿದ್ದರೆನ್ನ ಬಹುದು. ಇವರೆಲ್ಲರೂ ಗುರು – ಶಿಷ್ಯರೆಂದರೆ ಹೇಗಿರ ಬೇಕು ಎಂಬುದನ್ನು ಇಡೀ ಜಗತ್ತಿಗೇ ತೋರಿಸಿಕೊಟ್ಟರು. 

ಗುರುವನ್ನು ಕುರಿತು ವರ್ಣಿಸುತ್ತಾ ಹೊರಟರೆ ಪದಗಳೇ ಸಾಲವು. ಅವರಿಗೆ ಅವರೇ ಸಾಟಿ. ಅವರ ಸ್ಥಾನವನ್ನು ಯಾವುದೇ ವೈದ್ಯ, ವಕೀಲ, ಇಂಜಿನಿಯರ್, ರಾಜಕಾರಣಿ,  ಮತ್ತಾರೂ ತುಂಬಲು ಸಾಧ್ಯವಿಲ್ಲ. 

ಏಕೆಂದರೆ ಅವರಿಗೆಲ್ಲ ಅಕ್ಷರ ಜ್ಞಾನ ಕೊಟ್ಟು ವಿದ್ಯಾವಂತರನ್ನಾಗಿ ಮಾಡಿದವರು ಇದೇ  ಗುರು. ಗುರುವನ್ನು  ಒಬ್ಬ ವ್ಯಕ್ತಿ ಎಂದು ಪರಿಗಣಿಸದೆ  ಒಂದು ಅದ್ಬುತ ಶಕ್ತಿ ಎಂದು ಅರ್ಥೈಸಿಕೊಂಡರೆ ನಮಗೆ ಗುರುವಿನ ಮಹತ್ವ ಇನ್ನೂ ಹೆಚ್ಚು ಆಳವಾಗಿ ತಿಳಿಯುತ್ತದೆ. ನಾನು ಎನ್ನುವ ಅಹಂಕಾರ  ಬಿಟ್ಟು, ಅಂತಹ ಗುರುವಿಗೆ ಶರಣಾದಾಗ ಮಾತ್ರ ನಮ್ಮ ಗುರಿ ಮುಟ್ಟುವ ಪ್ರಯತ್ನ ಫಲಪ್ರದವಾಗುತ್ತದೆ.

ಪ್ರಸ್ತುತ ಜಗತ್ತಿನಲ್ಲಿ ಈ ಮೊದಲಿದ್ದ ಗುರು ಮತ್ತು ಶಿಷ್ಯರ ನಡುವಣ ಸಂಬಂಧ ಮಾಯವಾಗಿದೆ. ಹಲವು  ವಿದ್ಯಾರ್ಥಿ ಗಳಿಗೆ ಗುರುಗಳನ್ನು ಕಂಡರೆ  ಭಯವಿಲ್ಲ, ಅವರನ್ನು ಕಂಡರೆ ಏನೋ ಅಸಡ್ಡೆ, ಮೂಗು ಮುರಿಯು ವುದು, ಅವರ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳಕ್ಕೆ ಇಳಿಯುವುದು, ಕಂಡರೂ ಕಾಣ ದಂತೆ ದೂರ ಸರಿಯುವುದು, ಅವಿಧೇಯರಾಗಿ ವರ್ತಿಸುವು ದನ್ನು ಕಾಣ ಬಹುದು. ಸಮಾಜ ಹಾಗೂ ದೇಶದ ಭವಿಷ್ಯದ ದೃಷ್ಟಿಯಿಂದ ವಿದ್ಯಾರ್ಥಿಗಳು ತಮ್ಮ ವರ್ತನೆಯಲ್ಲಿ ಬದಲಾ ವಣೆ ಮಾಡಿಕೊಳ್ಳು ವುದು ಇಂದಿನ ತುರ್ತು ಅಗತ್ಯವಾಗಿದೆ.

ಗುರುವನ್ನು ಸಾಕ್ಷಾತ್ ಬ್ರಹ್ಮ, ವಿಷ್ಣು, ಮಹೇಶ್ವರ ಸ್ವರೂಪಿ ಎಂದು ಬಣ್ಣಿಸಲಾಗಿದೆ, ಅಲ್ಲದೆ ಈತ ವಿಷಯ ಭಂಡಾರದ  ದೃಷ್ಟಿಯಲ್ಲಿ ಅದ್ವಿತೀಯ, ನಡೆದಾಡುವ ವಿಶ್ವ ಕೋಶ, ಜ್ಞಾನದ ಹಸಿವನ್ನು ಇಂಗಿಸುವಲ್ಲಿ ಮುಂಚೂಣಿ ವ್ಯಕ್ತಿ, ಅಂತಹ ಗುರುವಿಗೆ ನಾವು ಭಕ್ತಿಯಿಂದ ಪೂಜಿಸಿ, ನಮಿಸುವ ದಿನವಿದು. ಯಾರ ಋಣವನ್ನಾದರೂ ತೀರಿಸಬಹುದು. ಆದರೆ ಹೆತ್ತ ತಂದೆ-ತಾಯಿ ಹಾಗೂ ಪಾಠ ಹೇಳಿಕೊಟ್ಟ ಗುರುವಿನ ಋಣವನ್ನು ಜನ್ಮ ಜನ್ಮಾಂತರಕ್ಕೂ  ತೀರಿಸಲು ಆಗದು. ಇದನ್ನು ಪ್ರಸ್ತುತ ಮಕ್ಕಳು ಅರ್ಥ ಮಾಡಿಕೊಂಡು ಅದರಂತೆ ನಡೆದುಕೊಂಡಲ್ಲಿ ಅದೇ ನೀವು ಗುರುಗಳಿಗೆ ಕೊಡಬಹುದಾದ ಬಹು ದೊಡ್ಡ ಉಡುಗೊರೆ. 

ಇಂತಹ ಮೇರು  ವ್ಯಕ್ತಿತ್ವವುಳ್ಳ ಶಿಕ್ಷಕರ ದಿನಾಚರಣೆ ಯನ್ನು ಡಾ. ಎಸ್. ರಾಧಾಕೃಷ್ಣನ್ ರವರ ಜನ್ಮ ದಿನದ ಹಿನ್ನೆಲೆಯಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಅರ್ಥಪೂರ್ಣವಾಗಿ ಆಚರಿಸಲಾಗುವುದು. 

ರಾಧಾಕೃಷ್ಣನ್ ರವರು ತಮಿಳುನಾಡಿನ ಚಿತ್ತೂರು ಜಿಲ್ಲೆಯ ತಿರುತ್ತಣಿ ಎಂಬಲ್ಲಿ ಸೆಪ್ಟೆಂಬರ್ 5, 1888 ರಂದು ಸರ್ವಪಲ್ಲಿ ವೀರಸ್ವಾಮಿ ಮತ್ತು ಸೀತಮ್ಮ ದಂಪತಿಯ ಮಗನಾಗಿ ಜನಿಸಿದರು. 

ಇವರು ತತ್ವಶಾಸ್ತ್ರದ  ಅಧ್ಯಾಪಕರಾಗಿ  ಮೈಸೂರಿನ ಮಹಾರಾಜ ಕಾಲೇಜು, ಕಲ್ಕತ್ತಾ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸಿ, ನಂತರದಲ್ಲಿ  ಬನಾ ರಸ್  ಹಿಂದೂ ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಗಳಾಗಿ, ಯುಜಿಸಿ ಅಧ್ಯಕ್ಷರಾಗಿ ಹಾಗೂ ದೇಶದ ಎರಡನೇ ರಾಷ್ಟ್ರಪತಿಯಾಗಿ ಸಲ್ಲಿಸಿದ ಸೇವೆ ಅತ್ಯಂತ ಮಹತ್ವದ್ದು.  ಇವರು ಸಲ್ಲಿಸಿದ ಅಪರಿಮಿತ ಸೇವೆಯನ್ನು ಗಮನದಲ್ಲಿರಿಸಿ, ಭಾರತ ಸರ್ಕಾರ 1967 ರಲ್ಲಿ ಅತ್ಯುನ್ನತವಾದ `ಭಾರತ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಇವರು ಶಿಕ್ಷಕ ವೃತ್ತಿಯನ್ನು ಬಹುವಾಗಿ ಪ್ರೀತಿಸುತ್ತಿದ್ದುದರಿಂದ ಅವರ  ಜನ್ಮ ದಿನವಾದ  ಸೆಪ್ಟೆಂಬರ್ 5 ರಂದು ದೇಶಾದ್ಯಂತ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುವುದು.

 `ನನ್ನೊಲುಮೆಯ ಗುರು’…

ಅಜ್ಞಾನವೆಂಬ ಅಂಧಕಾರವ ಅಳಿಸಿ ಸುಜ್ಞಾನವೆಂಬ ಬೆಳಕನ್ನು ಪ್ರವಹಿಸುವ ನನ್ನೊಲವಿನಾ ಗುರುವೇ ನಿಮ್ಮನ್ನು ಹೇಗೆ ಬಣ್ಣಿಸಲಿ.   ನಿಮ್ಮಲ್ಲಿರುವ ಸರಳತೆ, ವ್ಯಕ್ತಿತ್ವ, ಗಾಂಭೀರ್ಯತೆ ಹಾಗೂ ಜ್ಞಾನದ ಆಳ ಅಗಲಗಳನ್ನು ಏನೆಂದು ವರ್ಣಿಸಲಿ. ತರಗತಿಯಲ್ಲಿ ಮಾಡಿದ ತುಂಟಾಟ ಗಳನ್ನು ಗಮನಿಸಿಯೂ ದಂಡಿಸದ ನಿಮ್ಮ ಮಾತೃ ಹೃದಯವನ್ನು ಏನೆಂದು ಕೊಂಡಾಡಲಿ.   ಮಣ್ಣಿನ ಮುದ್ದೆಯಂತಿದ್ದ ನನ್ನನ್ನು  ಒಂದು ಸುಂದರ ಮೂರ್ತಿಯಾಗಿ ಕಟೆದು ನಿಲ್ಲಿಸಿದ ನಿಮ್ಮನ್ನು ಏನೆಂದು ವ್ಯಾಖ್ಯಾನಿಸಲಿ.  ನಿಮ್ಮನ್ನು ನೋಡಿ ಭಯ, ಆತಂಕಪಡುತ್ತಿದ್ದ ನನಗೆ ಧೈರ್ಯ ತುಂಬಿ, ಮಮಕಾರ ತೋರಿಸಿದ ನಿಮ್ಮನ್ನು  ಯಾವ ಪದ ಪುಂಜಗಳಿಂದ ಹೊಗಳಲಿ. ನನ್ನ ಪೆದ್ದುತನ, ತುಂಟತನ, ದಡ್ಡತನ ಮತ್ತು ಅಜ್ಞಾನ ಪ್ರದರ್ಶನವನ್ನು ತಾಳ್ಮೆಯಿಂದ ಸಹಿಸಿಕೊಂಡ ನಿಮ್ಮನ್ನು ಹೇಗೆ ಬಣ್ಣಿಸಲಿ.

ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ, ಸದೃಢ  ವ್ಯಕ್ತಿತ್ವವನ್ನು ರೂಪಿಸಿದ, ಉತ್ತಮ ಮಾರ್ಗದರ್ಶನ ನೀಡಿದ, ನಾಯಕತ್ವ ಗುಣಗಳನ್ನು ಬೆಳೆಸಿದ, ತಪ್ಪು ಒಪ್ಪುಗಳನ್ನು ಪರಾಮರ್ಷಿಸಿದ, ಜೀವನಕ್ಕೆ ಒಂದು ದಾರಿ ತೋರಿದ, ನಿಮ್ಮಂತೆಯೇ ಶಿಕ್ಷಕನಾಗಲು ಹುರಿದುಂಬಿಸಿದ, ಸರ್ವರಿಗೂ ಪ್ರೀತಿಯನ್ನು ಕರುಣಿಸಿದ ನಿಮ್ಮನ್ನು ಹೊಗಳಲು ಪದಗಳೇ ಸಾಲವು. ಇಂದು ನಿಮ್ಮ ದಿನ, ಪ್ರತಿ ವಿದ್ಯಾರ್ಥಿಯೂ ನಿಮ್ಮ ತ್ಯಾಗವನ್ನು ಸ್ಮರಿಸುವ ದಿನ.  ಓ ಗುರುವೇ ನಿಮ್ಮನ್ನು ಪೂಜಿಸಿ ಆರಾಧಿಸುವ ದಿನವಿದು, ಇದುವೇ ನಮ್ಮೆಲ್ಲರ ಪಾಲಿಗೆ ವರ್ಣರಂಜಿತ ದಿನ, ಅದುವೇ ಶಿಕ್ಷಕರ ದಿನ.


ಡಾ. ಶಿವಯ್ಯ ಎಸ್
ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ.
[email protected] 

error: Content is protected !!