ಮಲೇಬೆನ್ನೂರು, ಸೆ. 3- ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಸೋಮವಾರ ಬೆನಕನ ಅಮಾವಾಸ್ಯೆ ಪ್ರಯುಕ್ತ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ದರ್ಶನಕ್ಕೆ ಭಕ್ತರು ತುಂಗಭದ್ರಾ ನದಿ ನೀರಿನಂತೆ ಹರಿದು ಬಂದಿದ್ದರು.
ಅಜ್ಜಯ್ಯನ ದರ್ಶನಕ್ಕೆ ಬಂದ ಭಕ್ತರು ತುಂಗಭದ್ರಾ ನದಿಯ ಸ್ನಾನ ಘಟ್ಟದಲ್ಲಿ ಪುಣ್ಯ ಸ್ನಾನ ಮಾಡಿ ಉರುಳು ಸೇವೆ ಮಾಡಿ ಭಕ್ತಿ ಸಮರ್ಪಿಸಿದರು. ನಂತರ ಸ್ನಾನ ಘಟ್ಟದಲ್ಲಿ ಪ್ರತಿಷ್ಠಾಪಿತ ಗಣೇಶ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು.
ಕೆಲವು ಭಕ್ತರು ತಲೆ ಮೇಲೆ ಅಜ್ಜಯ್ಯನ ಪೋಟೋ ಹೊತ್ತರೆ, ಇನ್ನೂ ಕೆಲವು ಭಕ್ತರು ತಲೆಮೇಲೆ ಕಲ್ಲು ಹೊತ್ತು ಹರಕೆ ಕಟ್ಟಿಕೊಳ್ಳುತ್ತಿರುವುದು ಕಂಡು ಬಂತು.
ಕಳಸ ಹೂಡಿ, ಹಣ್ಣು-ಕಾಯಿ, ನಿಂಬೆ ಹಣ್ಣು, ಕರ್ಪೂರ, ಉದ್ದಿನ ಕಡ್ಡಿ, ಅರಿಷಿಣ, ಚಂದನ ಹಚ್ಚಿ ಪೂಜೆ ಮಾಡಿ ಹರಕೆ ಕಟ್ಟಿಕೊಂಡರು.
ನಂತರ ಸರತಿ ಸಾಲಿನಲ್ಲಿ ಬಂದು ಅಜ್ಜಯ್ಯನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಈ ಹಿಂದೆ ಕಟ್ಟಿಕೊಂಡು ತಮ್ಮ ಹರಕೆ ಈಡೇರಿದವರು ಹರಕೆ ತೀರಿಸಿದರು. ಶ್ರಾವಣ ಮಾಸದ ಕೊನೆಯ ಅಮಾವಾಸ್ಯೆಯಾದ ಬೆನಕನ ಅಮಾವಾಸ್ಯೆ ಅಂಗವಾಗಿ ಅಜ್ಜಯ್ಯನಿಗೆ ವಿಶೇಷ ಅಲಂಕಾರ, ಪೂಜೆ ಮತ್ತು ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಮಾಡಲಾಗಿತ್ತು. ಭಕ್ತರಿಗೆ ವಸತಿ ಹಾಗೂ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.