ಮಲೇಬೆನ್ನೂರು, ಸೆ.3- ಪಟ್ಟಣದ ಹೊರ ವಲಯದಲ್ಲಿರುವ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಶ್ರೀ ವೀರಭದ್ರೇಶ್ವರ ದೇವರ ಉದ್ಭವ ಮಹೋ ತ್ಸವದ (ಜಯಂತ್ಯೋತ್ಸವ) ಅಂಗವಾಗಿ ಗುಗ್ಗಳ ಮತ್ತು ವೀರಗಾಸೆ ಶ್ರದ್ಧಾ-ಭಕ್ತಿಯಿಂದ ನಡೆದವು.
ಬೆಳಿಗ್ಗೆ ಪಟ್ಟಣದ ಬಸವೇಶ್ವರ ದೇವಸ್ಥಾನ ದಿಂದ ವೀರಭದ್ರೇಶ್ವರ ದೇವಸ್ಥಾನದವರೆಗೂ ಗುಗ್ಗಳ ವಿವಿಧ ವಾದ್ಯಗಳೊಂದಿಗೆ ಸಾಗಿ ಬಂದಿತು. ನಂತರ ದೇವಸ್ಥಾನದಲ್ಲಿ ಕಣ್ವಕುಪ್ಪಿ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು, ಇಷ್ಟಲಿಂಗ ಪೂಜೆ ನೆರವೇರಿಸಿದರು.
ಈ ವೇಳೆ ಆಶೀರ್ವಚನ ನೀಡಿದ ಶ್ರೀಗಳು, ವೀರಭದ್ರೇಶ್ವರ ದೇವರ ಅವತಾರಗಳ ಬಗ್ಗೆ ವಿವರಿಸಿ, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಮತ್ತು ದುಷ್ಟ ಶಕ್ತಿಗಳನ್ನು ಸದೆ ಬಡಿಯುವ ವೀರಭದ್ರೇಶ್ವರ ದೇವರು ಮಲೇಬೆನ್ನೂರಿನಲ್ಲಿ ನೆಲೆ ನಿಂತಿರುವುದು ಈ ಭಾಗದ ಜನರ ಪುಣ್ಯ ಎಂದರು.
ನಂತರ ಶ್ರೀಗಳು ಶ್ರೀ ವೀರಭದ್ರೇಶ್ವರ ದೇವರಿಗೆ, ಭದ್ರಕಾಳಿಗೆ, ಮಹಾಗಣಪತಿಗೆ, ನಾಗಪರಿವಾರ ಹಾಗೂ ಕ್ಷೇತ್ರ ರಕ್ಷಕ ಕಾಲ ಭೈರವನಿಗೆ ವಿಶೇಷ ಪೂಜೆ ಸಲ್ಲಿಸಿದರು.
ದೇವಸ್ಥಾನದ ಪ್ರಧಾನ ಅರ್ಚಕ ಬೆನಕಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ವೀರಭದ್ರೇಶ್ವರ ಜಯಂತ್ಯೋತ್ಸವದ ಪೂಜಾ ಕಾರ್ಯಕ್ರಮಗಳು ಜರುಗಿದವು.
ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ
ಬಿ.ಪಂಚಪ್ಪ, ಉಪಾಧ್ಯಕ್ಷ ಚಿ.ಚಿದಾನಂದಪ್ಪ, ಬಿ.ನಾಗೇಂದ್ರಪ್ಪ, ಖಜಾಂಚಿ ಬಿ.ವಿ.ರುದ್ರೇಶ್, ಎನ್.ಕೆ.ಬಸವರಾಜ್, ಬಿ.ಶಂಭುಲಿಂಗಪ್ಪ,
ಬಿ.ನಾಗೇಶ್, ಬಿ.ಮಲ್ಲಿಕಾರ್ಜುನ್, ಬಿ.ಎನ್.ವೀರೇಶ್, ಬಿ.ಎಂ.ಹರ್ಷ, ಬಿ.ಸಿ.ಸತೀಶ್, ಎಸ್.ಎನ್.ಶಂಭುಲಿಂಗಪ್ಪ ಸೇರಿದಂತೆ ಇನ್ನೂ ಅನೇಕರು ಹಾಜರಿದ್ದರು.