ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಬಿ.ಹೆಚ್. ವೀರಭದ್ರಪ್ಪ
ದಾವಣಗೆರೆ, ಆ. 13- ಮಾದಿಗ ಸಮುದಾಯವನ್ನು ನಿರ್ಲಕ್ಷಿಸುತ್ತಿರುವ ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸ ಬೇಕಿದೆ. ಈ ನಿಟ್ಟಿನಲ್ಲಿ ಡಿಸೆಂಬರ್ ಅಥವಾ ಜನವರಿಯಲ್ಲಿ ಶೀಘ್ರವೇ ದಾವಣಗೆರೆ-ಚಿತ್ರದುರ್ಗ ಅವಳಿ ಜಿಲ್ಲೆಗಳನ್ನೊಳ ಗೊಂಡಂ ತೆ ಮಾದಿಗ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಕಾರ್ಯದರ್ಶಿ ಬಿ.ಹೆಚ್. ವೀರಭದ್ರಪ್ಪ ಹೇಳಿದರು.
ನಗರದ ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘ, ಆದಿ ಕರ್ನಾಟಕ ವಿದ್ಯಾರ್ಥಿ ನಿಲಯ ಹಾಗೂ ಡಾ. ಬಿ.ಎಂ.ಟಿ. ಪಿಯು ಕಾಲೇಜಿನ ಆಶ್ರಯದಲ್ಲಿ ನಿನ್ನೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಎಲ್ಲಾ ರಾಜಕೀಯ ಪಕ್ಷಗಳು ಮಾದಿಗ ಸಮುದಾಯವನ್ನು ಕಡೆಗಣಿಸುತ್ತಿವೆ.
ಅಂತಹ ಪಕ್ಷಗಳಿಗೆ ಪಾಠ ಕಲಿಸುವ ನಿಟ್ಟಿನಲ್ಲಿ ಅವಳಿ ಜಿಲ್ಲೆಗಳ ಮಾದಿಗ ಸಮಾವೇಶವು ನಮ್ಮ ಸಮುದಾಯದ ಶಕ್ತಿ ಪ್ರದರ್ಶಿಸಲಿದೆ ಎಂದರು.
ಹರಿಜನ ಸಮುದಾಯದ ಸಂಘಟನೆಗೆ ಕೇಂದ್ರ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಹೆಚ್. ಮುನಿಯಪ್ಪ ಸೇರಿದಂತೆ ಎಲ್ಲಾ ಜಾತಿಯ ಜನಪ್ರತಿನಿಧಿಗಳನ್ನು ಸಮಾವೇಶಕ್ಕೆ ಆಹ್ವನಿಸಲಾಗುವುದು. ಮಾದಿಗ ಸಮುದಾಯದ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಮುಂಬರುವ ದಿನಗಳಲ್ಲಿ ನಿಮಗೆ ಕಷ್ಟವಾಗಲಿದೆ. ಸಮುದಾಯಕ್ಕೆ ನಿವೇಶನ ನೀಡಿದ್ದರೆ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಎದುರು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅವರು ಎಚ್ಚರಿಸಿದರು.
ದೂಡಾ ಅಧ್ಯಕ್ಷರಾದವರು ತಮ್ಮ ತಮ್ಮ ಜಾತಿಗಳಿಗೆ ನಿವೇಶನಗಳನ್ನು ಮಾಡಿಕೊಂಡಿದ್ದರೆ. ಆದರೆ, ಶೋಷಿತ ಸಮುದಾಯದ ಹರಿಜನ ಸಮುದಾಯಕ್ಕೆ ಇದುವರೆಗೂ ನಿವೇಶನವನ್ನೇ ನೀಡದೇ ವಂಚಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹರಿಜನ ಸಮುದಾಯದ ಶಾಲೆಗಾಗಿ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರು ನಿವೇಶನ ಮಂಜೂರು ಮಾಡಬೇಕು ಎಂದು ಅವರು ಕೇಳಿಕೊಂಡರು.
ಹರಿಜನರ ಮತಗಳು ಬೇಕು, ಹರಿಜನರ ಸಹಕಾರವೂ ಬೇಕು. ಆದರೆ, ಅದೇ ಹರಿಜನ ಸಮುದಾಯಕ್ಕೆ ಯಾವುದೇ ಸೌಲಭ್ಯಗಳು ಸರ್ಕಾರದಿಂದ ಸರಿಯಾಗಿ ಸಿಗುವುದಿಲ್ಲವೆಂದರೆ ಏನರ್ಥ? ಹರಿಜನರ ಮಕ್ಕಳು ಓದಲು ಜಾಗ ಕೊಡಲಿಲ್ಲ. ಹರಿಜನ ಮಕ್ಕಳ ಮದುವೆಗೆ ಅನುಕೂಲವಾಗಲೆಂದು ಸಮುದಾಯ ಭವನ ನಿರ್ಮಿಸುವುದಕ್ಕೂ ಜಾಗ ಒದಗಿಸಲಿಲ್ಲ. ಕಳೆದ 4 ದಶಕದಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಸ್ವಾರ್ಥದಿಂದ ಕೆಲಸ ಮಾಡಿದರೂ ಕಾಂಗ್ರೆಸ್‌ನವರು ಸ್ಪಂದನೆ ನೀಡಲಿಲ್ಲ. ಬಿಜೆಪಿಯವರೂ ನೀಡಲಿಲ್ಲ ಎಂದು ಉಭಯ ಪಕ್ಷಗಳ ವಿರುದ್ಧ ವೀರಭದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಸನ್ಮಾನಿತರಾದ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಹರಿಜನ ಸಮುದಾಯದ ಶಾಲೆ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಕೇಳಿದ್ದೀರಿ. ಶೀಘ್ರವೇ ಸಿಎ ನಿವೇಶನಗಳ ಕುರಿತಂತೆ ಪ್ರಾಧಿಕಾರದ ಸಭೆ ನಡೆಸಲಾಗುವುದು. ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಜೊತೆಗೆ ಚರ್ಚಿಸಿ, ಸಿಎ ನಿವೇಶನ ಒದಗಿಸು ವುದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾ ಗುವುದು ಎಂದು ಭರವಸೆ ನೀಡಿದರು.
ಪಾಲಿಕೆ ಮೇಯರ್ ಬಿ.ಹೆಚ್. ವಿನಾಯಕ ಪೈಲ್ವಾನ್, ನಾಮನಿರ್ದೇಶಿತ ಸದಸ್ಯರಾದ ಎಲ್.ಎಂ.ಹೆಚ್. ಸಾಗರ್, ಭಾಸ್ಕರ್ ರೆಡ್ಡಿ, ಶಾಮನೂರಿನ ಕಣ್ಣಾಳ ಅಂಜಿನಪ್ಪ, ಎಸ್. ರಾಜಣ್ಣ ಇತರರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಎಲ್.ಎಂ. ಹನುಮಂತಪ್ಪ, ಬಿ.ಎಂ. ಈಶ್ವರಪ್ಪ ಗಾಂಧಿನಗರ, ರಾಕೇಶ, ಚಂದ್ರು ಡೋಲಿ, ಶುಭಮಂಗಳ, ಹೆಚ್.ಜೆ. ಮೈನುದ್ದೀನ್ ಹಾಗೂ ಇತರರು ಇದ್ದರು.