103ನೇ ಇಳಿವಯಸ್ಸಿನಲ್ಲೂ ಬತ್ತದ ಉತ್ಸಾಹ, ಸುಮಾರು 20 ಸಾವಿರ ವಚನಗಳು ನಾಲಿಗೆಯ ತುದಿಯಲ್ಲಿ, ಅಷ್ಟು ಪ್ರಖರವಾದ ಜ್ಞಾಪಕ ಶಕ್ತಿಯುಳ್ಳ ಕೋಟಿಗೊಬ್ಬ ಶರಣ ಸಿದ್ದರಾಮಣ್ಣ ಅಪ್ಪಗಳೊಂದಿಗೆ ಸುಮಾರು 30 ವರ್ಷಗಳ ಸುದೀರ್ಘ ಒಡನಾಟದಲ್ಲಿದ್ದವರು ನಾವು. ಅಂದಿನಿಂದ ಇಂದಿನವರೆಗೆ ಅವರ ಬಗ್ಗೆ ಇರುವ ಭಕ್ತಿ, ಗೌರವಗಳು ಒಂದಿನಿತು ಕಡಿಮೆಯಾಗದೇ ಹೆಚ್ಚುತ್ತಲೇ ಬಂದಿದೆ.
ಅವರ ಬಸವಮಯ ಬದುಕು ನಮ್ಮಂತಹವರಿಗೆ ನಿತ್ಯ ನಿರಂತರ ಮಾರ್ಗದರ್ಶಿ. ಅವರ ಬದುಕೇ ಒಂದು ಬಸವ ಸಿದ್ದಾಂತ. ಬಸವಣ್ಣನ ಕುರಿತು ಮಾತಾಡುವವರೆಷ್ಟೋ? ಭಕ್ತಿಯುಳ್ಳವರೆಷ್ಟೋ? ಬದಲು ಹೃದಯಾರೆ ಅಪ್ಪಿ ನಡೆದು ನುಡಿದವರಿಲ್ಲ. ಆದರೆ ಸಿದ್ದರಾಮಣ್ಣ ಅಪ್ಪಗಳು ನಡೆದು ನುಡಿದವರು. ವಿ. ಸಿದ್ದರಾಮಣ್ಣರು ಭಾಲ್ಕಿಯ ಶ್ರೀ ಚನ್ನಬಸವ ಪಟ್ಟದೇವರ ಶಿಷ್ಯರಾಗಿ, ಅನುಯಾಯಿಗಳಾಗಿ, ಗೆಳೆಯರಾಗಿ, ಹಿತೈಷಿಗಳಾಗಿ ಕೆಲವೊಂದು ಸಂದರ್ಭದಲ್ಲಿ ಮಾರ್ಗದರ್ಶಿಯೂ ಆಗಿ ಬದುಕಿದ ಅಪ್ರತಿಮ ಗುರು-ಶಿಷ್ಯರು, ಈ ಸಂಬಂಧ ಇತಿಹಾಸದಲ್ಲಿ ಚಿರಸ್ಥಾಯಿ.
ನೂತನ ಅನುಭವ ಮಂಟಪದ ನಿರ್ಮಾಣದಲ್ಲಿ ಭಾಲ್ಕಿಯ ದೊಡ್ಡಪ್ಪಗಳೊಂದಿಗೆ ಕಲ್ಲು ಮಣ್ಣು ಹೊತ್ತ ನಿಜ ಕಾಯಕ ಯೋಗಿಗಳು.ಸಂಸಾರಿ ಆಗಿದ್ದಾಗಲೂ ಶ್ರೀ ಚನ್ನಬಸವ ಪಟ್ಟದ್ದೇವರ ಅಣತಿಯಂತೆ ತನ್ನೂರು, ಮನೆ ತೊರೆದು ಅನುಭವ ಮಂಟಪದಲ್ಲಿ ಸುದೀರ್ಘ ಜೀವನದ 40 ವರ್ಷಗಳು ಇಲ್ಲಿ ಕಳೆದದ್ದು ಸೋಜಿಗವೆನಿಸುವಂಥದ್ದು.
ಅನುಭವ ಮಂಟಪದ ಸಂಚಾಲಕರಾಗಿ ಇಲ್ಲಿಯೇ ನೆಲೆ ನಿಂತವರು. ನಿತ್ಯ ಕಾಯಕ ಸಿದ್ಧಾಂತ ಪರಿಪಾಲಿಸುವ ಇವರು ಅನುಭವ ಮಂಟಪದ ಸುತ್ತಲೂ ಸುಮಾರು ದಿನಗಳವರೆಗೆ ಅವರು ಕೈಯಾರೆ ನೆಟ್ಟ ನೂರಾರು ಮಾವಿನ ಗಿಡಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಇಂದು ಫಲ ನೀಡುತ್ತಲಿವೆ. ಜೊತೆಗೆ ನಮ್ಮಂತಹ ಅನೇಕರ ಮನದಲ್ಲಿ ಅವರು ಬಿತ್ತಿದ ಬಸವ ಬೀಜ ಮೊಳಕೆ ಒಡೆದು ಮರವಾಗಿ ಬೆಳೆದು ನಿಂತಿದೆ.
ಅಪ್ಪಾಜಿ ಪಡೆದ ಶಿಕ್ಷಣ ಅತ್ಯಲ್ಪವಾದರೂ, ಅವರ ಜ್ಞಾನಕ್ಕೆ, ಎಣೆಯೇ ಇಲ್ಲ. ಅವರ ಬಸವ ಧರ್ಮದ ಅಧ್ಯಯನಶೀಲತೆಯಲ್ಲಿ ಅಪಾರ ಭಕ್ತಿ. ಅವರನ್ನು ಒಬ್ಬ ಉತ್ತಮ ಶರಣ ಸಾಹಿತಿ ವಾಗ್ಮಿಯನ್ನಾಗಿ ಮಾರ್ಪಡಿಸಿತು.
ವಿ ಶ್ವಕಲ್ಯಾಣ ಮಿಷನ್ ನ ಲಿಂಗಾನಂದ ಅಪ್ಪಾಜಿಗಳ ಸಾನ್ನಿಧ್ಯದಿಂದ ಪ್ರಾರಂಭಿಸಿದ ಬಸವ ಪಯಣ ಅನುಭವ ಮಂಟಪ ಬಸವ ಕಲ್ಯಾಣದ ಸಂಚಾಲಕರಾಗಿ ಡಾ. ಚನ್ನಬಸವ ಪಟ್ಟದ್ದೇವರ ಸತ್ಯ ಸಂಕಲ್ಪ ಪೂರೈಸಿದ ಶತಾಯುಷಿಗಳಿವರು.
ಸಿ ದ್ದರಾಗಿ, ಪರಿಶುಧ್ಧರಾಗಿ, ಸಂಗೀತಗಾರರಾಗಿ ನೂರಾರು ಶರಣರ ವಚನಗಳು ನಿರರ್ಗಳ ವಾಗಿ ಹಾಡಿ ಇಡೀ ರಾಜ್ಯದ ಬಸವ ಮನಸ್ಸುಗಳನ್ನು ಸಂತೃಪ್ತಗೊಳಿಸಿದ ಬಸವ ಹೃದಯವಂತರಿವರು.
ದ ಯವೇ ಧರ್ಮ ಮೂಲವಯ್ಯ ಎಂಬ ವಚನದ ಮೇಲೆ ವೈಜ್ಞಾನಿಕವಾಗಿ ಪ್ರವಚನಗಳನ್ನು ಹೇಳಿ ಜನ ಸಾಮಾನ್ಯರಲ್ಲಿ ಬಸವ ಪ್ರಜ್ಞೆ ಮೂಡಿಸಿದ ಅಪರೂಪದ ವಿಚಾರವಂತರಿವರು.
ರಾ ಶಿಕೂಟ ಋಣ ಸಂಬಂಧ ಉಂಟೆಂದು ಹೇಳಿ ವೈದಿಕ ಸಂಪ್ರದಾಯಕ್ಕೆ ತಿಲಾಂಜಲಿ ನೀಡಿ ಬಸವ ಪರಿಸರ ನಿರ್ಮಿಸಲು ಶರಣ ನನ್ನಯ್ಯ ನಾಟಕದ ಮುಖಾಂತರ ಪಾದ ಯಾತ್ರೆ ರೂವಾರಿಗಳಿವರು.
ಮ ನದ ಮೈಲಿಗೆ ಕಳೆಯಲು ಶರಣರ ಸಂಘ, ಶರಣ ಸಂಗಮ, ಶರಣ ಕಮ್ಮಟ ಸಂಘಟಿಸಿದ ವೈಚಾರಿಕ ಕ್ರಾಂತಿಕಾರರು.
ಣ ನಕರಾತ್ಮಕ ವಿಚಾರಗಳನ್ನು ತೆಗೆದು ಹಾಕಿ, ಸಕರಾತ್ಮಕ ವಿಚಾರ ಯುವ ಜನಾಂಗದಲ್ಲಿ ನೆಲೆಗೊಳಿಸಲು ನೂರಾರು ಹಾಡು, ಹತ್ತಾರು ಗ್ರಂಥ ರಚಿಸಿದ ಶರಣ ಸಾಹಿತಿಗಳಿವರು.
ನ ಯ ವಿನಯ ತತ್ತ್ವ ನಿಷ್ಟೆ ಹಾಗೂ ಬಸವ ಚಳುವಳಿ ಹುಟ್ಟು ಹಾಕಲು ಅರವತ್ತು ವರ್ಷಗಳ ಕಾಲ ತನು ಮನ ಸಮಯ ದಾಸೋಹ ಮಾಡಿರುವ ಮತ್ತಿಹಳ್ಳಿ ಗ್ರಾಮದವರು.
ವ ಚನ ಸಾಹಿತ್ಯವೇ ಧರ್ಮ ಗ್ರಂಥ, ಅಪ್ಪ ಬಸವಣ್ಣನವರೇ ನಮ್ಮ ಧರ್ಮಗುರು, ೭೭೦ ಅಮರಗಣಂಗಗಳೇ ನಮ್ಮ ಪರಂಪರೆ ಎಂದು ಹೇಳಿದ ಅನುಭವ ಮಂಟಪ ಸಂಚಾಲಕರಿವರು.
ರು ಚಿ ಕಟ್ಟಾಗಿ ಮಾತನಾಡುವ ಶರಣರಿಗೆ ನೂರು ವರ್ಷ ಪೂರೈಸಿದಾಗ ಬೀದರನ ವಚನ ಸಮೂಹ ಸಂಸ್ಥೆಯು ಶತಮಾನೋತ್ಸವ ಸಂಭ್ರಮಾಚರಣೆ ಆಚರಿಸಲು ಅವಕಾಶ ಕಲ್ಪಿಸಿದವರು.
– ಶಿವಶಂಕರ ಟೋಕರೆ, ಬೀದರ.
ಅವರು ರಚಿಸಿದ ಅನೇಕ ನಾಟಕಗಳು, ಭಕ್ತಿ ಗೀತೆಗಳು, ವಚನ ವಿಶ್ಲೇಷಣೆಯ ಪುಸ್ತಕಗಳು ಅವರ ಅಪಾರ ಬಸವ ಜ್ಞಾನಕ್ಕೆ ಹಿಡಿದ ಕನ್ನಡಿಗಳು.
ಅನುಭವ ಮಂಟಪದಲ್ಲಿ ಒಬ್ಬರೇ ಒಬ್ಬರು ಇಲ್ಲದಿದ್ದಾಗಲೂ ಸಮಯಕ್ಕೆ ಸರಿಯಾಗಿ ನಿತ್ಯ ಪ್ರಾರ್ಥನೆ ನೆರವೇರಿಸುವ ಅವರ ಪರಿ ವಿಶೇಷವಾದದ್ದು. ಇದನ್ನು ಪ್ರಶ್ನಿಸಿದಾಗ 770 ಅಮರಗಣಂಗಳು, ಲಕ್ಷದ 96 ಸಾವಿರ ಚರ ಜಂಗಮರು ಪಾಲ್ಗೊಂಡಿದ್ದಾರೆ ಎನ್ನುವ ಅವರ ಭಕ್ತಿಗೆ ಏನೆನ್ನಬೇಕು? ಒಂದು ಧರ್ಮ ಅಳವಡಿಸಿಕೊಂಡಾಗ ಇವರಂತಹ ಅನೂಹ್ಯ ಅನುಪಮ ಭಕ್ತಿ ಅಳವಡಬೇಕು. ಅವರು ರಚಿಸಿದ ಅನೇಕ ಭಕ್ತಿ ಗೀತೆಗಳು ಕರ್ನಾಟಕದಾದ್ಯಂತ ಪ್ರಚಲಿತಗೊಂಡು ಪ್ರತಿಯೊಂದು ಪ್ರವಚನ ಹಾಗೂ ಭಜನೆಯಲ್ಲಿ ಹಾಡಲ್ಪಡುತ್ತವೆ ಎಂದರೆ ಅದರ ಪ್ರಸಿದ್ದಿ ಎಷ್ಟು. ಬಸವ ಸಾಹಿತ್ಯದಲ್ಲಿ ಇವರ ಸಾಹಿತ್ಯವು ತನ್ನ ಸ್ಥಾನವನ್ನು ಪಡೆದುಕೊಂಡು ಒಂದಾಗಿದೆ.
ನಮ್ಮ ಯಜಮಾನರಾದ ಅಲ್ಲಮ ಪ್ರಭುಗಳೊಂದಿಗೆ ಆತ್ಮೀಯವಾದ ಕರುಳು ಬಳ್ಳಿಯ ಸಂಬಂಧ ನಿಜವಾಗಿಯೂ ಭಾವನಾತ್ಮಕವಾದದ್ದು. ನಮ್ಮ ಮದುವೆಯಾದ ನಂತರ ಅನೇಕ ವಾರ್ಷಿಕೋತ್ಸವಗಳು ಅನುಭವ ಮಂಟಪದಲ್ಲಿ ರಾತ್ರಿ ಅವರೊಂದಿಗುಳಿದು ಅವರ ಬಸವ ತತ್ವದ ಚಿಂತನ ಮಂಥನದೊಂದಿಗೆ ಆಚರಿಸಿಕೊಂಡದ್ದು ಈಗ ನೆನಪು ಮಾತ್ರ.
ಅವರಿಗೆ ನೂರರ ವಯಸ್ಸಾದಾಗ ವಚನ ಸಂಸ್ಥೆಯಿಂದ ಬೃಹತ್ ಮಟ್ಟದಲ್ಲಿ ಕಾರ್ಯಕ್ರಮ ಕೈಗೊಳ್ಳುವ ಮೂಲಕ ನಾಡಿನಾದ್ಯಂತ ಸಂಚಲನ ಮೂಡಿಸಿದ್ದು, ಅವರ ಕುರಿತಾಗಿ ನಮಗಿರುವ ಅಪಾರ ಪ್ರೀತಿ, ಭಕ್ತಿಗೆ ಸಾಕ್ಷಿಯಾಯಿತು.
ಅವರಿಗೆ ಒಂದು ಸಲ ಪೋನಾಯಿಸಿದಾಗ ನಮ್ಮ ಮಕ್ಕಳಿಂದ ವಚನ ಹೇಳಿಸದೇ ಬಿಡದವರು. ಕೇಳಿ ಅತ್ಯಂತ ಸಂಭ್ರಮಿಸುವವರು. ಮಕ್ಕಳೊಂದಿಗೆ ಮಕ್ಕಳಾಗಿ, ಜ್ಞಾನಿಗಳೊಂದಿಗೆ ಜ್ಞಾನಿಗಳಾಗಿ, ಬದು ಕುವ ಇಂತಹ ಸರಳ ಜೀವಿ ವಿರಳಾತಿ ವಿರಳರು. ಶರಣರ ಆಗಮನಕ್ಕೆ ಗುಡಿ ತೋರಣ ಕಟ್ಟಿ ಸ್ವಾಗತಿಸಿ ಸಂಭ್ರಮಿಸುವ ಮನಸ್ಸದು.
ನನ್ನ ಮಗಳು ಚಿನ್ಮಯಿ ಗರ್ಭದಲ್ಲಿದ್ದಾಗ ಎಂಟನೆಯ ತಿಂಗಳಿನಲ್ಲಿ ಅವರ ಲಿಂಗ ಹಸ್ತದಿಂದ ದೀಕ್ಷೆ ಪಡೆದ ದಿನ
ನನ್ನ ಜೀವನದಲ್ಲಿ ಎಂದೂ ಮರೆಯಲಾರದ ಅವಿಸ್ಮರಣೀಯ ಸಮಯ. ಲಿಂಗ ದೀಕ್ಷೆಯ ಸಂದರ್ಭದಲ್ಲಿ ಅವರ ಹಸ್ತ ನನ್ನ ಶಿರದ ಮೇಲೆ ಇಟ್ಟಾಗ ಆದ ಅನುಭೂತಿ, ರೋಮಾಂಚನಕಾರಿ, ವರ್ಣಿಸಲಸದಳ. ಅವರು ಪಡೆದ ತತ್ವಸಿದ್ಧಿಗೆ ಉದಾಹರಣೆಯಂತಿತ್ತು. ಅದಕ್ಕೆ ಪ್ರತಿಫಲದಂತೆಯೇ ಇರುವಳು ಮಗಳು ಚಿನ್ಮಯಿ.
ಅಪ್ಪಗಳು ಇಲ್ಲವಾದರೂ ಎಂದಾಗ ಒಂದು ಕ್ಷಣ ದಿಗ್ಭ್ರಮೆಗೊಂಡು ಅತ್ತಳು ಮಗಳು. ಅಂತಹ ಅವಿನಾಭಾವ ಸಂಬಂಧ ನಮ್ಮ ಮಕ್ಕಳೊಂದಿಗೆ ಇಟ್ಟುಕೊಂಡಿದ್ದರು ಅಪ್ಪಾಜಿ. ಬದುಕಿನುದ್ದಕ್ಕೂ ಒಂದು ಜವೆ ಕೊರತೆ ಬಾರದಂತೆ ಬಸವಣ್ಣನ ನಿಜ ಕಂದರಾಗಿ. ದೈಹಿಕವಾಗಿ ನಮ್ಮನ್ನಗಲಿದ್ದಾರೆ. ಆದರೆ ಅವರ ಬದುಕು ನಮ್ಮ ಜೀವನದಲ್ಲಿ ನಿತ್ಯವೂ ಪ್ರೇರಣಾದಾಯಿಯಾಗಿದೆ.
ಅದಕ್ಕೆ ಹೇಳಿರಬೇಕು, ಲಕ್ಷಕೊಬ್ಬ ಭಕ್ತ, ಕೋಟಿಗೊಬ್ಬ ಶರಣ, ಕೋಟಿಗೊಬ್ಬ ಶರಣರಂತೆ ನಮ್ಮ ನಡುವೆ ಇದ್ದು ಇಂದು ಇಲ್ಲವಾಗಿದ್ದಾರೆ. ಅವರ ಒಡನಾಟದಲ್ಲಿರುವ ನಮ್ಮ ಬದುಕು ಹಸನು. ಅಪಾರವಾದ ಬಸವ ಧರ್ಮದ ಜ್ಞಾನವನ್ನು ಹೊತ್ತುಕೊಂಡು ಹೋದಿರಿ.. ಎಂದೆಂದಿಗೂ ನೀವು ನಮ್ಮ ಮನದಲ್ಲಿ ಪರಮಪೂಜ್ಯರಾಗಿ ನೆಲೆಗೊಂಡಿರುವಿರಿ.